ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸಂಘದ ಶಾಖಾ ವ್ಯಾಪ್ತಿಗೆ ಒಳಪಟ್ಟ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಆಯ್ದ ಸರ್ಕಾರಿ ಶಾಲೆಗಳ ೮ನೇ ಮತ್ತು ೯ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಶನಿವಾರ ನಗರದ ದರ್ಬೆ ಪ್ರಶಾಂತ್ ಮಹಲ್‌ನ ಸನ್ನಿಧಿ ಹಾಲ್‌ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಕಾರ ಸಂಘಗಳ ಪುತ್ತೂರು ವಿಭಾಗದ ಸಹಾಯಕ ನಿಬಂಧಕ ಎಂ.ಎಂ. ರಘು ಮಾತನಾಡಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಸರ್ಕಾರಿ ಶಾಲಾ ಮಕ್ಕಳಿಗೆ ಸಹಾಯಧನ ನೀಡುವ ಮೂಲಕ ಸಹಕಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಜಿಲ್ಲೆಯ ಸಹಕಾರದ ಸಂಪ್ರದಾಯಕ್ಕೆ ಸೀತಾರಾಮ ರೈಗಳು ತಮ್ಮದೇ ರೀತಿಯ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ ಮಾತನಾಡಿ ಸಂಘವು ತನ್ನ ಎಲ್ಲ ಸದಸ್ಯರ ಸಹಕಾರದಿಂದಾಗಿ ಈ ಸಹಾಯಧನ ವಿತರಣೆ ಮಾಡಲಾಗುತ್ತಿದೆ. ಮುಂದೆ ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗೆ ಅವಕಾಶವಾಗುಂತೆ ಸಹಾಯಧನ ನೀಡಬೇಕಾಗಿದೆ. ಇದಕ್ಕಾಗಿ ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದರು.ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರತ್ನಕುಮಾರಿ ಮಾತನಾಡಿ ಸಂಘವು ತನ್ನ ಹೆಸರಿಗೆ ತಕ್ಕಂತೆ ಆದರ್ಶವನ್ನು ಮೆರೆದಿದೆ. ಸರ್ಕಾರಿ ಶಾಲಾ ಸಾಧಕ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುತ್ತಿರುವುದು ಸಂಘದ ಸಾಮಾಜಿಕ ಕಳಕಳಿಗೆ ನಿದರ್ಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಆಯ್ದ ೨೫೦ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಲಾ ೨ ಸಾವಿರದಂತೆ ಒಟ್ಟು ೫ ಲಕ್ಷ ರುಪಾಯಿ ಸಹಾಯಧನ ವಿತರಿಸಲಾಯಿತು.ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿಭಾಗದದಲ್ಲಿ ೬೨೫ರಲ್ಲಿ ೬೧೯ ಅಂಕ ಪಡೆದು ದ.ಕ. ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಕಲ್ಮಂಜ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಅವರಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ವಂದಿಸಿದರು. ಸುನಾದ್ ಶೆಟ್ಟಿ ಮತ್ತು ಪ್ರಿಯಾ ಬಿ.ವಿ ನಿರೂಪಿಸಿದರು.