ಸಾರಾಂಶ
ಶಿಗ್ಗಾಂವಿ: ಪ್ರಾಣಿಗಳ ಚರ್ಮದಿಂದ ಮಾಡಿದ ಅದರ ಮೇಲೆ ಕಥೆಗಳಿಗೆ ಅನುಸಾರವಾಗಿ ಬೇಕಾದ ಚಿತ್ರಗಳನ್ನು ಅಂದವಾಗಿ ಬರೆದು ಆಭರಣ, ಸೀರೆಯ ಅಂಚು, ರಥದ ಚಕ್ರ, ಕಿರೀಟ ಇತ್ಯಾದಿ ಕುಸುರಿ ಕೆಲಸಗಳನ್ನು ಬಹಳ ಸೂಕ್ಷ್ಮವಾಗಿ ಮಾಡಿ. ಪುರಾತನ ಕಾಲದಿಂದಲೂ ಬಂದ ಜನಪದ ಕಲೆಗಳಲ್ಲೊಂದಾದ ತೊಗಲು ಗೊಂಬೆಯಾಟ ಪ್ರದರ್ಶನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜರುಗಿತು.
ತಾಲೂಕಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ, ವಾಲ್ಮೀಕಿ ಬರೆದ ರಾಮಾಯಣವನ್ನು ಕಂದಗಲ್ ಹನುಮಂತರಾಯ ಕಂಪನಿ ನಾಟಕ ರೂಪ ಕೊಟ್ಟು ಬರೆದಿದ್ದು, ರಂಗಕರ್ಮಿ ಡಾ. ಪ್ರಕಾಶ ಗರುಡ ಅವರು ತೊಗಲು ಗೊಂಬೆಯಾಟಕ್ಕೆ ಸ್ಕ್ರೀಪ್ಟ್ ಬರೆದು ಅಳವಡಿಸಿರುವ ''''ಅದ್ಭುತ ರಾಮಾಯಣ'''' ಎಂಬ ತೊಗಲು ಗೊಂಬೆಯಾಟ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.ರಾಮಾಯಣ ವಿಷಯ ವಸ್ತುವನ್ನು ಆಧರಿಸಿ ನಿರ್ಮಾಣ ಮಾಡಲಾದ ಈ ತೊಗಲು ಗೊಂಬೆಯಾಟ ಪ್ರದರ್ಶನ ವಿದ್ಯಾರ್ಥಿಗಳಿಗೆ ಕಲಾ ಪ್ರಾತ್ಯಕ್ಷಿಕೆ ನೀಡಿತು. ತೊಗಲು ಗೊಂಬೆಯಾಟವನ್ನು ಅಧ್ಯಯನದ ದೃಷ್ಟಿಯಿಂದ ವಿದ್ಯಾರ್ಥಿಗಳು ಪಠ್ಯರೂಪದಲ್ಲಿ ಓದಿಕೊಂಡಿರುತ್ತಾರೆ. ಆದರೆ ಕಲಾ ಪ್ರಾತ್ಯಕ್ಷಿಕೆ ಪ್ರಾಯೋಗಿಕ ವೀಕ್ಷಣೆಯಿಂದ ಈ ಕಲೆ ಮುಂದಿನ ಪೀಳಿಗೆಗೆ ಕೊಂಡೋಯ್ಯುವ ತಲೆಮಾರಿಗೆ ಪರಿಚಯವಾಯಿತು. ಕಲಾವಿದರಾದ ಡಾ.ರಜನಿ ಗರುಡ, ರಾಜೇಂದ್ರ, ಕಾವ್ಯ, ಗೌತಮ್, ರವಿ, ರಾಘವ್ ಪರದೆಯ ಹಿಂದೆ ಗೊಂಬೆಯಾಟ ಪ್ರದರ್ಶನ ನೀಡಿದ್ದಾರೆ.
ಕುಲಪತಿಗಳಾದ ಪ್ರೊ.ಟಿ.ಎಂ. ಭಾಸ್ಕರ್ ಅವರು ಪ್ರದರ್ಶನ ವೀಕ್ಷಿಸಿ ನಂತರ ಮಾತನಾಡಿ, ಭಾರತೀಯ ಪುರಾಣ ಮಹಾ ಕಾವ್ಯಗಳಲ್ಲಿ ಒಂದಾದ ರಾಮಾಯಣದ ಕುರಿತು ಅಸಂಖ್ಯಾತ ರಾಮಾಯಣಗಳು ವಿಶ್ವದಲ್ಲಿ ಸಿಗುತ್ತವೆ. ಈ ಕುರಿತು ಅಧ್ಯಯನಗಳಾಗಿವೆ. ಜನಾಂಗದ ಹಾಗೂ ಧಾರ್ಮಿಕ, ಜಾತಿ-ಉಪ ಜಾತಿಯ ಹಿನ್ನೆಲೆಯಲ್ಲಿ ಕವಿಗಳು ರಾಮಾಯಣ ಬರೆಯುತ್ತ ಬಂದಿರುವುದನ್ನು ಪ್ರಯೋಗಶಾಲೆಯ ರೂಪದಲ್ಲಿ ಜನರಿಗೆ ನೀತಿ ಭೋಧನೆಗಾಗಿ ಇವು ಹುಟ್ಟಿಕೊಂಡವು ಎಂದು ಹೇಳಿದರು.ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ಜನಪದ ಕಲೆ ಮತ್ತು ಕಲಾವಿದರಿಗಾಗಿ ಹುಟ್ಟಿಕೊಂಡ ಜಾನಪದ ವಿಶ್ವವಿದ್ಯಾಲಯದ ಆಶಯಕ್ಕೆ ಹೇಳಿ ಮಾಡಿಸಿದಂತೆ ಸಾಕಾರಗೊಳ್ಳುತ್ತಿವೆ. ತಳಸಮುದಾಯಗಳ ಪಾರಂಪರಿಕ ಕಲೆಗಳನ್ನು ನಮ್ಮ ವಿದ್ಯಾರ್ಥಿಗಳು ಕಲಿತುಕೊಂಡು ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಆ ಮೂಲಕ ರಾಷ್ಟ್ರಮಟ್ಟ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದಾಗ ಈ ಕಲೆ ಹಾಗೂ ವಿಶ್ವವಿದ್ಯಾಲಯದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯಾಗಲಿದೆ ಎಂದರು.
ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಂ. ಸಾಲಿ,ರಂಗಕರ್ಮಿ ಡಾ.ಪ್ರಕಾಶ ಗರುಡ ಮಾತನಾಡಿದರು, ಸಹಾಯಕ ಪ್ರಾಧ್ಯಾಪಕರಾದ ಡಾ. ವೆಂಕನಗೌಡ ಪಾಟೀಲ, ಸಹಾಯಕ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ಪ್ರದರ್ಶನದ ಕುರಿತು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಗೇಟಿಯವರ ನಿರೂಪಿಸಿದರು.