ಮೀಸಲಾತಿಯನ್ನು ಅನುಕ್ರಮವಾಗಿ ಪರಿಶಿಷ್ಟ ಜಾತಿಗೆ ಶೇ.೧೭, ಪರಿಶಿಷ್ಟ ಪಂಗಡಕ್ಕೆ ಶೇ.೭ ಹಾಗೂ ಹಿಂದುಳಿದ ವರ್ಗಕ್ಕೆ ಶೇ.೩೨ಕ್ಕೆ ಹೆಚ್ಚಿಸಿ ೨೦೨೨ರಲ್ಲಿ ಮಾಡಿದ ಕಾಯ್ದೆಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆಯ ಶೇ.೫೬ ಮೀಸಲಾತಿಯನ್ನು ವಿಧಾನ ಮಂಡಲದಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳ ಮೀಸಲಾತಿಯನ್ನು ಶೇ.೫೬ಕ್ಕೆ ಹೆಚ್ಚಿಸಿರುವ ಕಾಯ್ದೆಯನ್ನು ಊರ್ಜಿತಗೊಳಿಸಲು ಭಾರತದ ಸಂವಿಧಾನದ ೯ನೇ ಶೆಡ್ಯೂಲ್‌ಗೆ ಸೇರಿಸುವಂತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಮೀಸಲಾತಿಯನ್ನು ಅನುಕ್ರಮವಾಗಿ ಪರಿಶಿಷ್ಟ ಜಾತಿಗೆ ಶೇ.೧೭, ಪರಿಶಿಷ್ಟ ಪಂಗಡಕ್ಕೆ ಶೇ.೭ ಹಾಗೂ ಹಿಂದುಳಿದ ವರ್ಗಕ್ಕೆ ಶೇ.೩೨ಕ್ಕೆ ಹೆಚ್ಚಿಸಿ ೨೦೨೨ರಲ್ಲಿ ಮಾಡಿದ ಕಾಯ್ದೆಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆಯ ಶೇ.೫೬ ಮೀಸಲಾತಿಯನ್ನು ವಿಧಾನ ಮಂಡಲದಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಶೇ.೫೬ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ೯ನೇ ಶೆಡ್ಯೂಲ್‌ಗೆ ಸೇರಿಸುವಂತೆ ಮತ್ತು ಸಂವಿಧಾನದ ಅನುಚ್ಛೇದ ೧೫ ಮತ್ತು ೧೬ಕ್ಕೆ ತಿದ್ದುಪಡಿ ತಂದು ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಸಂವಿಧಾನದತ್ತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಾಯ್ದೆಯನ್ನು ರೂಪಿಸಿ ೯ನೇ ಶೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದೀಗ ಸಿದ್ದರಾಮಯ್ಯನವರೂ ಪತ್ರ ಬರೆದರೂ ಅದಕ್ಕೂ ಉತ್ತರ ನೀಡದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರ ಬಗ್ಗೆ ಎಲ್ಲಾ ಪಕ್ಷದ ಸಚಿವರು, ಶಾಸಕರು ಒಕ್ಕೊರಲಿನ ಧ್ವನಿ ಎತ್ತಿ ೯ನೇ ಶೆಡ್ಯೂಲ್‌ಗೆ ಸೇರಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಮೀಸಲಾತಿಯನ್ನೇನು ಭಿಕ್ಷೆಯಾಗಿ ನೀಡುತ್ತಿಲ್ಲ. ಅದು ಸಂವಿಧಾನಬದ್ಧ ಹಕ್ಕು. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆಯೇ ವಿನಃ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ. ಎಲ್ಲಾ ಪಕ್ಷದವರಿಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದ ಜನರ ಮತಗಳು ಬೇಕೇ ಬೇಕು. ಆದರೆ, ಅವರಿಗೆ ಕಾನೂನುಬದ್ಧ ಮೀಸಲಾತಿ ದೊರಕಿಸಿ ಮುಖ್ಯವಾಹಿನಿಗೆ ತರುವುದು ಬೇಕಿಲ್ಲ ಎಂದು ಟೀಕಿಸಿದರು.

೨೦೧೩ರಲ್ಲಿ ರಾಜ್ಯ ಸರ್ಕಾರ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆ ಪ್ರಕಾರ ಪ್ರತಿ ವರ್ಷದ ಆಯವ್ಯದಲ್ಲಿ ಅಭಿವೃದ್ಧಿಗೆ ಬಳಸುವ ಹಣದಲ್ಲಿ ಎಸ್‌ಸಿ ಶೇ.೧೭ ಮತ್ತು ಎಸ್‌ಟಿಗೆ ಶೇ.೭ರಷ್ಟು ಹಣವನ್ನು ಮೀಸಲಿಟ್ಟು ಆಯಾ ವರ್ಷವೇ ಅವರ ಪ್ರಗತಿಗಾಗಿ ವೆಚ್ಚ ಮಾಡಲು ಕಾನೂನು ಮಾಡಿದ್ದಾರೆ. ಆ ಕಾಯ್ದೆಯಂತೆ ಎಸ್‌ಸಿಪಿ ಮತ್ತು ಟಿಎಸ್‌ಪಿಯಲ್ಲಿ ಅನುಕ್ರಮವಾಗಿ ೩೪ ಸಾವಿರ ಕೋಟಿ ರು. ಹಾಗೂ ೧೪ ಸಾವಿರ ಕೋಟಿ ರು. ಹಣವನ್ನು ಅನ್ಯಕಾರ್ಯಗಳಿಗೆ ಬಳಸದೆ ಎಸ್‌ಸಿ ಮತ್ತು ಎಸ್‌ಟಿ ವರ್ಗಗಳ ಜನರ ಅಭಿವೃದ್ಧಿಗಾಗಿಯೇ ಪ್ರತಿ ವರ್ಷ ಬಳಸುವಂತೆ ಒತ್ತಾಯಿಸಿದರು.

ರಾಜ್ಯ ಸರ್ಕಾರ ಈ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ತಪ್ಪು. ಈ ಹಣ ಆ ಸಮುದಾಯದವರ ಪ್ರಗತಿಗೆ ಸೀಮಿತವಾಗಿ ಬಳಸಬೇಕು. ಇದುವರೆಗೆ ರಾಜ್ಯ ಸರ್ಕಾರ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದು, ಅಷ್ಟೂ ಹಣವನ್ನು ಹಿಂದಿರುಗಿಸಬೇಕು ಎಂದು ಆಗ್ರಹಪಡಿಸಿದರು.

ಹಣವನ್ನು ವಾಪಸ್ ದೊರಕಿಸುವಲ್ಲಿ ಒಂಟಿ ಧ್ವನಿಯಾದರೆ ಏನೂ ಪ್ರಯೋಜನವಿಲ್ಲ. ಎಲ್ಲರೂ ಈ ವಿಚಾರವಾಗಿ ಧ್ವನಿ ಎತ್ತಬೇಕು. ಹೋರಾಟ ನಡೆಸಬೇಕು ಎಂದರು.

ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ಆಶಾಕಿರಣವಾಗಿರುವ ಶೇ.೫೬ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ೯ನೇ ಶೆಡ್ಯೂಲ್‌ಗೆ ಸೇರಿಸದಿದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಿ.ಡಿ.ಗಂಗಾಧರ್, ಟಿ.ಆರ್.ತುಳಸೀರಾಮ್, ಜಿಲ್ಲಾಧ್ಯಕ್ಷ ಚಂದ್ರನಾಯಕ, ಸುಂಡಹಳ್ಳಿ ಮಂಜುನಾಥ್ ಇತರರಿದ್ದರು.