ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಇಂದಿನ ಶಿಕ್ಷಣ ಪದ್ಧತಿಯಲ್ಲಿಯೇ ಅಸಮಾನತೆ ಇದೆ. ಶಿಕ್ಷಣ ಕ್ಷೇತ್ರವನ್ನು ಗ್ಯಾರಂಟಿ ಪಟ್ಟಿಗೆ ಸೇರಿಸಿ ಒಳ್ಳೇ ಕಟ್ಟಡ ನಿರ್ಮಿಸಿ , ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಸರ್ಕಾರಕ್ಕೆ ಸಲಹೆ ನೀಡಿದರು.ಅವರು ತಾಲೂಕಿನ ಹುಲಿಕುಂಟೆ ಹೋಬಳಿ ಗೋಪಿಕುಂಟೆ ಗ್ರಾಮದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ 40 ಲಕ್ಷ ರು. ಹಾಗೂ ಗೋಪಿಕುಂಟೆ ಈರಣ್ಣ ಮೇಷ್ಟ್ರು ಇವರ ಸ್ಮರಣಾರ್ಥ ಗೌರವಪೂರ್ವಕವಾಗಿ ವೈಯಕ್ತಿಕ 60 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಹಿರಿಯ ಪ್ರಾಥಮಿಕಶಾಲೆ ನೂತನ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಸರ್ಕಾರಗಳು ಶಿಕ್ಷಣವನ್ನು ಮೊದಲ ಆದ್ಯತೆಯಲ್ಲಿ ನೋಡುತ್ತಿಲ್ಲ. ಖಾಯಂ ಅಧ್ಯಾಪಕರನ್ನು ನೇಮಿಸುತ್ತಿಲ್ಲ. ದೇಶದಲ್ಲಿ ಶಿಕ್ಷಣ ಕ್ಷೇತ್ರವನ್ನು ಕೇಂದ್ರ ಹಾಗೂ ರಾಜ್ಯ ಎರಡೂ ಸರಕಾರಗಳು ನಿರ್ಲಕ್ಷಿಸಿವೆ. ಅನುದಾನ ಸರಿಯಾಗಿ ಸಿಗುತ್ತಿಲ್ಲ. ಸರಕಾರಿ ಶಾಲೆ ಅಭಿವೃದ್ಧಿ ಆದರೆ ಹಳ್ಳಿಗಳ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಾರೆ. ಶಾಸಕ ಚಿದಾನಂದ್ ಗೌಡ ಮಾಡಿರುವ ಕಾರ್ಯ ಶಿಕ್ಷಣದ ಮೇಲೆ ಅವರಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ ಎಂದರು.ಕಟ್ಟಡ ನಿರ್ಮಿಸಿರುವ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಮಾತನಾಡಿ, ಮಹಾತ್ಮ ಗಾಂಧಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಗ್ರಾಮಗಳು ಅಭಿವೃದ್ಧಿಯಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾಗಬೇಕು ಎಂಬುದು ಅವರ ಆಶಯದಂತೆ ಪ್ರತಿ ವರ್ಷ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅದನ್ನು ಪುನರ್ ನಿರ್ಮಿಸುವ ಕಾರ್ಯ ಮಾಡುತ್ತಿದ್ದೇನೆ. ನಾನು ಇದುವರೆಗೂ ಸುಮಾರು 1000 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ. ಅದಕ್ಕೆ ಸುಮಾರು 20 ಕೋಟಿ ಖರ್ಚಾಗಿದೆ. ಇದರಿಂದ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ಅರಿತು ಶಾಲೆಗಳನ್ನೇ ಪುನರ್ ನಿರ್ಮಾಣ ಮಾಡಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಸಿಗುವಂತಾಗಲಿ ಎಂದು ಶಾಲೆಗಳನ್ನು ನಿರ್ಮಿಸುತ್ತಿದ್ದೇನೆ. ಇಂದು ಉದ್ಘಾಟಿಸಿರುವ ಗೋಪಿಕುಂಟೆಯಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ ಪ್ರಾರಂಭಿಸುತ್ತೇನೆ. ಅಗತ್ಯವಿದ್ದರೆ ನಮ್ಮ ಟ್ರಸ್ಟ್ ಕಡೆಯಿಂದ ಶಿಕ್ಷಕರನ್ನು ಕಳಿಸುತ್ತೇನೆ. ಅದಕ್ಕಾಗಿ ನಾನು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇನೆ. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ ಎಲ್ಲಾ ರಾಜಕಾರಣಿಗಳೂ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿಯಿಂದ ತಮ್ಮ ಹುಟ್ಟು ಹಬ್ಬದಂದು ಸರಕಾರಿ ಶಾಲೆಯನ್ನು ಪುನರ್ ನಿರ್ಮಾಣ ಮಾಡಿ ಅದನ್ನು ಉದ್ಘಾಟಿಸುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ ಎಂದರು. ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ವಿಧಾನಪರಿಷತ್ ಶಾಸಕ ಚಿದಾನಂದ್ ಅವರ ಕೆಲಸ ಮೆಚ್ಚುವಂತದ್ದು ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದಿರುವ ಇಂತಹ ಸಂದರ್ಭದಲ್ಲಿ ಸರಕಾರಿ ಶಾಲೆಗಳನ್ನು ಪುನರ್ ನಿರ್ಮಾಣ ಮಾಡಿ ಮರು ಹುಟ್ಟು ನೀಡುತ್ತಿರುವುದು ಶ್ಲಾಘನೀಯ. ರಾಜಕಾರಣಿಗಳು ಯಾವುದೇ ಪಕ್ಷದವರಾಗಲಿ ಒಳ್ಳೆಯ ಕೆಲಸಗಳನ್ನು ಮಾಡಿದಾಗ ನಾವು ಶ್ಲಾಘಿಸಬೇಕು. ಇದುವರೆಗೂ ಯಾವ ಶಾಸಕರೂ ಪ್ರಾಮಾಣಿಕವಾಗಿ ಶಾಲಾ ಕಟ್ಟಡ ಕಟ್ಟುವ ಕೆಲಸ ಮಾಡಿಲ್ಲ. ಚಿದಾನಂದ್ ಎಂ.ಗೌಡ ಅವರಂತೆ ರಾಜ್ಯದ ಎಲ್ಲಾ ರಾಜಕಾರಣಿಗಳು ಶಾಲೆಗಳನ್ನು ಕಟ್ಟುವ ಕಾರ್ಯ ಮಾಡಲಿ, ಇದರಿಂದ ಬದಲಾವಣೆ ತರಲು ಸಾಧ್ಯವಾಗುತ್ತದೆ ಇದು ಮಾದರಿಯಾಗಲಿ ಎಂದರು.ಕಾರ್ಯಕ್ರಮದಲ್ಲಿ ಸುಮಾರು 30 ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರ್ ಸೈಕಲ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್, ತಹಸೀಲ್ದಾರ್ ಸಚ್ಚಿದಾನಂದ ಕುಚನೂರ, ತಾಪಂ ಇಒ ಹರೀಶ್, ಬಿಇಒ ಸಿ.ಎನ್.ಕೃಷ್ಣಪ್ಪ, ರಂಗಪ್ಪ, ಗ್ರಾಪಂ ಅಧ್ಯಕ್ಷೆ ಗೀತಾ ಮಂಜುನಾಥ್, ನಾಗರಾಜು, ಜಿ.ಎನ್.ಮೂರ್ತಿ, ಸಂತೆಪೇಟೆ ನಟರಾಜ್, ಈರಣ್ಣ ಪಟೇಲ್, ಚಿಕ್ಕಣ್ಣ, ಗಿರಿಧರ್, ಹನುಮಂತೇಗೌಡ, ಮೂರ್ತಿ ಯಂಜಲಗೆರೆ, ಮಾಗೋಡು ಪ್ರತಾಪ್, ರಂಗನಾಥ್, ಪಾಂಡುರಂಗಯ್ಯ, ತಿಪ್ಪೇಸ್ವಾಮಿ, ಚಿತ್ತಯ್ಯ, ಹನುಮಂತರಾಜು. ಕುಮಾರ್ ಮಾಸ್ಟರ್, ಚಂಗಾವರ ಮಾರಣ್ಣ, ಕನಕಪ್ಪ, ಶಾಲೆಯ ಮುಖ್ಯ ಶಿಕ್ಷಕಿ ನಾಗವ್ವ ದನದ, ಗ್ರಾ ಪಂ ಸದಸ್ಯ ಶಿವಲಿಂಗಯ್ಯ, ರಾಮಚಂದ್ರಪ್ಪ, ಶಿಕ್ಷಕಿ ಗೀತಾ, ಮುಖಂಡರಾದ ಹನುಮಂತನಾಯ್ಕ, ಪದ್ಮ ಮಂಜುನಾಥ್, ನಾಗರತ್ನಮ್ಮ, ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.