ಹಬ್ಬಗಳಲ್ಲಿ ಆಧುನಿಕತೆ ಸೇರಿಸಿ: ಸಾಹಿತಿ ಬಸು ಬೇವಿನಗಿಡದ

| Published : Apr 02 2024, 01:09 AM IST / Updated: Apr 02 2024, 08:54 AM IST

ಹಬ್ಬಗಳಲ್ಲಿ ಆಧುನಿಕತೆ ಸೇರಿಸಿ: ಸಾಹಿತಿ ಬಸು ಬೇವಿನಗಿಡದ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಹಬ್ಬ, ಸಂಪ್ರದಾಯ ಕುರಿತು ತಿಳಿಸುವ ಕೆಲಸ ಆಗಬೇಕಿದೆ. ನಮ್ಮ ಹಬ್ಬಗಳಲ್ಲಿ ಆಧುನಿಕತೆ ಸೇರಿಸಿ ಆಚರಿಸುವ ಬದಲಾವಣೆ ಕೂಡ ಮಾಡಿಕೊಳ್ಳಬೇಕಾಗಿದೆ.

ಧಾರವಾಡ:  ಹಳ್ಳಿಯ ಹಾಡುಗಳಲ್ಲಿ ಆಧುನಿಕತೆ ಬೆರೆಸಿ ಹಾಡುವುದನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಹಾಗೂ ಸಾಹಿತಿ ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾಮಂಟಪವು ಸುವರ್ಣ ಮಹಿಳೆಯರ ಕನಸಿನ ಧಾರವಾಡ ಅವರಿಂದ ಆಯೋಜಿಸಿದ್ದ ‘ಸಂಪ್ರದಾಯ ಸೌರಭ’ ಗ್ರಾಮೀಣರ ಹಬ್ಬದ ಹಾಡು-ಪಾಡು ಮತ್ತು ಹಳ್ಳಿಯ ಸೊಗಡಿನಿಂದ ಪ್ಯಾಟಿಯಕಡೆಗೆ, ಉಡುಗೆ-ತೊಡುಗೆಯ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಮಕ್ಕಳಿಗೆ ಹಬ್ಬ, ಸಂಪ್ರದಾಯ ಕುರಿತು ತಿಳಿಸುವ ಕೆಲಸ ಆಗಬೇಕಿದೆ. ನಮ್ಮ ಹಬ್ಬಗಳಲ್ಲಿ ಆಧುನಿಕತೆ ಸೇರಿಸಿ ಆಚರಿಸುವ ಬದಲಾವಣೆ ಕೂಡ ಮಾಡಿಕೊಳ್ಳಬೇಕಾಗಿದೆ. ಗ್ರಾಮೀಣರಲ್ಲಿ ಪುರುಷರು ಕೂಡ ಕುಟುಂಬದಲ್ಲಿ ಕೈಜೋಡಿಸಿ ಸಹಕರಿಸುತ್ತಿದ್ದರು. ಪ್ರತಿಯೊಂದು ಹಬ್ಬ ಹರಿದಿನ ಬರಿ ಹೆಣ್ಣು ಮಕ್ಕಳಷ್ಟೇ ಅಲ್ಲದೆ ಗಂಡು ಮಕ್ಕಳು ಕೂಡ ಅಷ್ಟೇ ಸಂಭ್ರಮದಿಂದ ಆಚರಿಸುತ್ತಿದ್ದರು. ಈಗ ಪಟ್ಟಣಗಳಲ್ಲಿ ಆ ಸಂಸ್ಕಾರ ಕಡಿಮೆಯಾಗುತ್ತಿದ್ದು ಇಂದು ಯುವಜನಾಂಗದಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಹಬ್ಬ ಹರಿದಿನಗಳು ವೈಜ್ಞಾನಿಕವಾಗಿ ಜೀವನದ ಪಾಠಗಳಾಗಿವೆ. ಉತ್ತರ ಕರ್ನಾಟಕದ ಹಬ್ಬ ಹರಿದಿನಗಳಲ್ಲಿ ಶ್ರೀಮಂತವಾದ ಸಂಸ್ಕಾರ ತುಂಬಿದೆ. ನಿಸರ್ಗವನ್ನು ನಾವು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರತಿಯೊಂದು ಹಬ್ಬಗಳು ಪೂರಕವಾಗಿವೆ. ಹಲವಾರು ಮಾಧ್ಯಮಗಳ ಆಕರ್ಷಣೆಗೆ ಸಿಲುಕಿ ನಮ್ಮ ಪರಂಪರೆ ಹಾಗೂ ಗ್ರಾಮೀಣರ ಬದುಕು, ಆಚರಣೆಗಳು ಸೊರಗುತ್ತಿರುವುದನ್ನು ಇತ್ತೀಚಿಗೆ ನಾವು ನೋಡುತ್ತಿದ್ದೇವೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ನಾವು ಇಂದು ಬದುಕಬೇಕಾದರೆ ನಿಸರ್ಗವನ್ನು ಕಾಯ್ದುಕೊಳ್ಳಬೇಕಿದೆ. ಹಳೆಯ ಬೇರು ಹೊಸ ಚಿಗುರು ಸೇರಿದಾಗ ಮಾತ್ರ ಬದುಕು ಸುಸೂತ್ರವಾಗಿ ಸಾಗುತ್ತದೆ. ಮಹಿಳೆಯರು ನಮ್ಮ ನಾಡಿನ ನಿಸರ್ಗದ ಕೊಡುಗೆಯನ್ನು ತೆರೆದಿಟ್ಟಿದ್ದಾರೆ. ಮುಂದಿನ ಪೀಳಿಗೆ ಅದನ್ನು ಬಳಸಿಕೊಂಡಲ್ಲಿ ಅವರ ಬದುಕು ಎಲ್ಲದರಲ್ಲಿಯೂ ಶ್ರೀಮಂತವಾಗಿರುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಹಳ್ಳಿಗಳಲ್ಲಿಯೂ ಕೂಡ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಹಳ್ಳಿಗರ ಹಬ್ಬ, ಹರಿದಿನ, ಆಚರಣೆ, ಸಂಪ್ರದಾಯ, ಕಲೆ ಎಲ್ಲವನ್ನು ಪಟ್ಟಣದ ಜನ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.

ಸುವರ್ಣ ಮಹಿಳೆಯರ ಕನಸಿನ ಧಾರವಾಡ ತಂಡ ಸಂಪ್ರದಾಯ ಸೌರಭದಲ್ಲಿ ನಾವು ಆಚರಿಸುವ ಪ್ರತಿಯೊಂದು ಹಬ್ಬಗಳ ಕುರಿತು ಚರ್ಚಿಸಿ ಹಾಡು ಹೇಳಿ ಸಂಭ್ರಮಿಸಿತು.

ಕಲಾಮಂಟಪದ ಸಲಹಾ ಸಮಿತಿ ಸದಸ್ಯರಾದ ಡಾ. ಪ್ರಭಾ ನೀರಲಗಿ ಸ್ವಾಗತಿಸಿದರು, ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಆಶಾ ಸೈಯದ್ ವಂದಿಸಿದರು. ವಿಷಯಾ ಜೇವೂರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಗಿರಿಜಾ ಹಿರೇಮಠ, ಮಹಾಂತೇಶ ನರೇಗಲ್, ಭಾಗ್ಯಾ ನಡಕಟ್ಟಿ, ಗುರು ಕಲ್ಮಠ, ನಾಗಭೂಷಣ ಹಿರೇಮಠ, ಭಾರತಿ ಕಲ್ಮಠ, ಜ್ಯೋತಿ ಭಾವಿಕಟ್ಟಿ, ಸುನಿತಾ ವಾಸರದ, ರಾಜಶೇಖರ ಬಶೆಟ್ಟಿ, ಸುವರ್ಣ ಮುಕ್ತಾಮಠ, ನಂದಾ ಗುಳೇದಗುಡ್ಡ ಇದ್ದರು.