ಸಾರಾಂಶ
ಉಪ್ಪಿನಂಗಡಿ : ಖಾಸಗಿ ಬಸ್, ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿ ಖಾಸಗಿ ಬಸ್ಸಿನಲ್ಲಿದ್ದ ಬೆಂಗಳೂರಿನ ನಿವಾಸಿಗರಾದ ೧೪ ವಿದ್ಯಾರ್ಥಿಗಳು, ಐವರು ಉಪನ್ಯಾಸಕರು ಒಳಗೊಂಡಂತೆ ೧೯ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಘಟನೆಯಲ್ಲಿ ಖಾಸಗಿ ಬಸ್ಸಿನಲ್ಲಿದ್ದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬೆಂಗಳೂರು ಕಾಮಾಕ್ಷಿಪಾಳ್ಯದ ಸೈಂಟ್ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಖಾಸಗಿ ಬಸ್ಸಿನಲ್ಲಿ ನವೆಂಬರ್ ೨೦ ರಂದು ಬೆಂಗಳೂರಿನಿಂದ ಉಡುಪಿ, ಮುರುಡೇಶ್ವರ, ಆನೆಗುಡ್ಡೆ, ಇಡಗುಂಜಿ, ಹೊನ್ನಾವರ, ಮಲ್ಪೆ ಬೀಚ್ ಪ್ರವಾಸ ಕೈಗೊಂಡು ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ತಡರಾತ್ರಿ ೧.೩೦ರ ಸುಮಾರಿಗೆ ಅಡ್ಡಹೊಳೆಯಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಜಾರಿಕೊಂಡು ಹೋಗಿದೆ. ಇದೇ ವೇಳೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಪಲ್ಟಿಯಾಗಿದ್ದ ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸಿಗೆ ಅದರ ಹಿಂಬದಿಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.ಘಟನೆಯ ವೇಳೆ ಖಾಸಗಿ ಬಸ್ಸಿನಲ್ಲಿದ್ದ ೪೩ ವಿದ್ಯಾರ್ಥಿಗಳ ಪೈಕಿ ಚರಣ್ (೧೬) , ಚರಿತ್ (೧೬) , ಚಿನ್ಮಯ್ (೧೭) , ಶಿವಕುಮಾರ್ (೧೬) , ಹರ್ಷಿಯಾಭಾನು (೧೬), ಮಿಲನ್ ಎಂ (೧೬), ರಾಖಿ ಕುಮಾರಿ (೧೮) ಸೌಂದರ್ಯ (೧೬) , ಅಕ್ಷಯ್ ಎಸ್ (೧೮) ,ಎಸ್ ಚಿನ್ಮಯ್ (೧೬) , ಯಶವಂತ ಕೆ (೧೮), ಅಭಿಷೇಕ್ ರಾಜ್ (೧೬), ಮುಸೈಬ್ (೧೮) ಸಾಮ್ಯುವೆಲ್ (೧೭) ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು, ಉಪನ್ಯಾಸಕರಾದ ಸಂಜೀವ ರಾಥೋಡ್ (೨೮), ರಮೇಶ್ ವಿ (೪೦) , ಪ್ರಕಾಶ್ ಜಿ(೪೩) ರಾಜೇಶ್ ಯು (೪೧) ರೂಪಾ (೨೬) ಎಂಬವರು ಗಾಯಗೊಂಡಿದ್ದು, ಗಾಯಾಳುಗಳನ್ನು ನೆಲ್ಯಾಡಿ, ಪುತ್ತೂರು, ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಸ್ಸಿನಲ್ಲಿದ ಉಳಿದ ವಿದ್ಯಾರ್ಥಿಗಳು ಗುದ್ದಿದ ಗಾಯಗಳನ್ನು ಪಡೆದು ಅಪಾಯದಿಂದ ಪಾರಾಗಿದ್ದಾರೆ. ಖಾಸಗಿ ಬಸ್ಸಿನ ಚಾಲಕ ಕಣ್ಮರೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.