ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ದುಶ್ಚಟಗಳಿಂದ ವ್ಯಕ್ತಿಯ ಆರೋಗ್ಯ ಕೆಡುವುದಲ್ಲದೇ ಕುಟುಂಬ ಬೀದಿ ಪಾಲಾಗುತ್ತದೆ. ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ. ಅದಕ್ಕಾಗಿ ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು. ಅದರಿಂದುಟಾಗುವ ದುಷ್ಕರ್ಮಿಗಳ ಕುರಿತ ಜಾಗೃತಿ ಮೂಡಿಸಬೇಕು ಎಂದು ಇಳಕಲ್ಲ-ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ನುಡಿದರು.ನಗರದ ಶ್ರೀಮಠದಲ್ಲಿ ಸಮೀಪದ ಹಿರೇಸಿಂಗನಗುತ್ತಿಯ ಕವಿ, ಕಲಾವಿದ ಚಿತ್ರಕಲಾ ಶಿಕ್ಷಕ ತಿರುಪತಿ ಶಿವನಗುತ್ತಿ ಅವರು ವ್ಯಸನ ಮುಕ್ತ ದಿನಾಚರಣೆಯ ಪ್ರಯುಕ್ತ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತು ರಚಿಸಿ ಹಾಡಿದ ಜಾಗೃತಿ ಗೀತೆಯ ವಿಡಿಯೋ ಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ತಿರುಪತಿ ಶಿವನಗುತ್ತಿ ಅವರು ತುಂಬಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಅಪಾರವಾದ ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದಾರೆ. ಈಗಾಗಲೇ ಇವರ ಮತದಾನ ಮಹತ್ವದ ಬಗ್ಗೆ, ಸರಕಾರಿ ಶಾಲೆಗಳ ವಿಶೇಷತೆ ಬಗ್ಗೆ ಪರಿಸರದ ಬಗ್ಗೆ ರಚಿಸಿ ಹಾಡಿದ ಜಾಗೃತಿ ಗೀತೆಗಳು ಜನಪ್ರಿಯವಾಗಿವೆ ಅದರಂತೆ ಈ ಹಾಡು ಸಹಿತ ಜನರಲ್ಲಿ ಜಾಗೃತಿ ಮೂಡಿಸಲಿ ಎಂದು ಆಶೀರ್ವದಿಸಿದರು.
ಸಹಜ ಸ್ಥಿತಿಯೋಗದ ಗುರುಗಳಾದ ವಿರುಪಾಕ್ಷ ಗುರೂಜಿ ಮಾತನಾಡಿ, ನಮ್ಮ ಆರೋಗ್ಯ ಎಲ್ಲಾ ಸಂಪತ್ತಿಗಿಂತಲೂ ಮಿಗಿಲು ಆರೋಗ್ಯ ಕೆಟ್ಟ ಮೇಲೆ ಪರಿತಪಿಸುವುದಕಿಂತ ಜಾಗೃತಿ ವಹಿಸಿ ಸ್ವಾಸ್ಥ್ಯ ಕಾಪಾಡಿಕೊಳ್ಳುವುದೇ ಮೇಲು ಎಂದರು.ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯರಾದ ವೆಂಕಟೇಶ್ ಬಡಿಗೇರ ಚಂದ್ರಕಾಂತ ಸರೋಧೆ, ಹಿರಿಯ ಪತ್ರಕರ್ತ ಶಾಂತಣ್ಣ ಸರಗಣಾಚಾರಿ, ಬಸವರಾಜ ಮಠದ, ಯುವ ಉದ್ಯಮಿ ಪ್ರಫುಲ್ ಪಟೇಲ್, ಕಲಾವಿದ ಶಿಕ್ಷಕ ಶ್ರೀಶೈಲ ಧೋತ್ರೆ, ಶಿಕ್ಷಕರಾದ ಬಸವರಾಜ ಅಂಗಡಿ, ಗುಂಡಪ್ಪ ಕುರಿ, ಸಂಗಮೇಶ ತೆಗ್ಗಿನಮನಿ ಹಾಗೂ ಅನ್ವರ್ ತಾಳಿಕೋಟಿ ಉಪಸ್ಥಿತರಿದ್ದರು.