ಕರಾವಳಿಯ ತುಳು ಲಿಪಿ ಯೂನಿಕೋಡ್‌ಗೆ ಸೇರ್ಪಡೆ

| Published : Sep 09 2024, 01:34 AM IST

ಸಾರಾಂಶ

ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ಪ್ರಯತ್ನಕ್ಕೆ ಹೆಚ್ಚಿನ ಮಹತ್ವ ಬಂದಂತಾಗಿದೆ. ಲಿಪಿ ತಜ್ಞರ ನಿರಂತರ ಪ್ರಯತ್ನದ ಫಲ ಹಾಗೂ ತುಳು ಸಾಹಿತ್ಯ ಅಕಾಡೆಮಿ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ಹೆಮ್ಮೆಯ ಭಾಷೆ ತುಳುವಿಗೆ ಈಗ ಯುನಿಕೋಡ್‌ ಮಾನ್ಯತೆ ಲಭಿಸಿದೆ. ತುಳು ಲಿಪಿಗೆ ಇರುವ ಇನ್ನೊಂದು ಹೆಸರಿನ ಜೊತೆಗೆ ತುಳು-ತಿಗಳಾರಿ ಎಂಬುದಾಗಿ ಯುನಿಕೋಡ್‌ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳನ್ನು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದಂತಾಗಿದೆ.

ಈ ಮೂಲಕ ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ಪ್ರಯತ್ನಕ್ಕೆ ಹೆಚ್ಚಿನ ಮಹತ್ವ ಬಂದಂತಾಗಿದೆ. ಲಿಪಿ ತಜ್ಞರ ನಿರಂತರ ಪ್ರಯತ್ನದ ಫಲ ಹಾಗೂ ತುಳು ಸಾಹಿತ್ಯ ಅಕಾಡೆಮಿ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ.

ಲಿಪಿ ತಜ್ಞರ ಅವಿರತ ಯತ್ನ:

ಲಿಪಿ ತಜ್ಞ ಡಾ.ಯು.ಬಿ.ಪವನಜ ಅವರು 2001 ರಲ್ಲಿ ಯುನಿಕೋಡ್ ಕನ್ಸೋರ್ಶಿಯಂಗೆ ಹೋಗಿದ್ದಾಗ ಯುನಿಕೋಡ್‌ನಲ್ಲಿ ಕನ್ನಡ ಸರಿಪಡಿಸಲು ಸಹಾಯ ಮಾಡಿದ್ದರು. ಅದೇ ಸಮಯದಲ್ಲಿ ತುಳುವನ್ನು ಕೂಡ ಸೇರಸಬೇಕೆಂದು ಕೇಳಿಕೊಂಡಿದ್ದರು. ಆಗ ತುಳುವಿಗೆ ಒಂದು ಜಾಗ ಕಾಯ್ದಿರಿಸಿದ್ದರು. ತುಳು ಹೇಗಿಬೇಕು ಎಂಬ ಬಗ್ಗೆ ಕಡತ ಕಳುಹಿಸುವಂತೆ ಕೇಳಿಕೊಂಡಿದ್ದರು.

2014ರಲ್ಲಿ ಡಾ.ಪವನಜ ಅವರು ತುಳು ವಿಕಿಪೀಡಿಯವನ್ನು ಲೈವ್ ಮಾಡಲು ಕೆಲಸ ಪ್ರಾರಂಭಿಸಿದರು. ಹಲವರಿಗೆ ತರಬೇತಿ ಕೂಡ ನೀಡಿದರು. ಹಲವಾರು ಕಾರ್ಯಾಗಾರಗಳನ್ನು ನಡೆಸಿದ್ದಲ್ಲದೆ, ಅಂತಿಮವಾಗಿ ತುಳು ವಿಕಿಪೀಡಿಯ 2016ರ ಆ.6 ರಂದು ರೂಪುಗೊಂಡಿತು.

2017 ರಲ್ಲಿ ತುಳು ಅಕಾಡೆಮಿ ಕೂಡ ತುಳು ಯುನಿಕೋಡ್ ಬೇಕು ಎಂಬ ಬೇಡಿಕೆ ಇರಿಸಿತು. ಬಳಿಕ ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಒಂದು ಸಮಿತಿ ರಚನೆಗೊಂಡಿತು. ಡಾ.ಪವನಜರ ತಾಂತ್ರಿಕೆ ಸಲಹೆ ಮೇರೆಗೆ ಕೊನೆಗೂ ತುಳು ಲಿಪಿಯ ಅಕ್ಷರಗಳ ಪಟ್ಟಿ ಸಿದ್ಧವಾಯಿತು. ಅದನ್ನು ಯುನಿಕೋಡ್‌ಗೆ ಕಳುಹಿಸಲಾಯಿತುಇದರೆಡೆಯಲ್ಲಿ ಇನ್ನೊಬ್ಬರು ತಿಗಳಾರಿ ಲಿಪಿ ಎಂದು ಪ್ರತ್ಯೇಕ ಪ್ರೊಪೋಸಲ್ ಕಳುಹಿಸಿದ್ದರು. ಹಲವು ಪತ್ರ ವ್ಯವಹಾರಗಳ ನಂತರ ಅಂತಿಮವಾಗಿ ತುಳು-ತಿಗಳಾರಿ ಹೆಸರಿನಲ್ಲಿ ಲಿಪಿಯನ್ನು ಯುನಿಕೋಡ್‌ಗೆ ಸೇರಿಸಲಾಯಿತು. ತುಳು ಅಂಕೆ ಇಲ್ಲ:

ತುಳು ಅಕಾಡೆಮಿ ಕಳುಹಿಸಿದ ಅಕ್ಷರಗಳ ಪಟ್ಟಿಗೂ ಈಗ ತುಳು-ತಿಗಲಾರಿ ಹೆಸರಿನಲ್ಲಿ ಯುನಿಕೋಡ್‌ನವರು ಅಂತಿಮಗೊಳಿಸಿದ ಪಟ್ಟಿಗೂ ಚಿಕ್ಕಪುಟ್ಟ ವ್ಯತ್ಯಾಸಗಳಿವೆ. ಆದರೆ ಬಹುತೇಕ ಅಕ್ಷರಗಳು ಬಂದಿವೆ. ಒಂದು ಪ್ರಮುಖ ಸ್ವರ ಬಾಕಿಯಾಗಿದೆ. ತುಳು ಅಂಕೆಗಳನ್ನು ಬಿಟ್ಟಿದ್ದಾರೆ. ತುಳುವಿಗೆ ಅಗತ್ಯವಿಲ್ಲದ, ಆದರೆ ತುಳು ಲಿಪಿಯಲ್ಲಿ ಸಂಸ್ಕೃತವನ್ನು ಬರೆಯಲು ಬೇಕಾದ ಕೆಲವು ಸಂಜ್ಞೆಗಳನ್ನು (diacritic marks) ಸೇರಿಸಲಾಗಿದೆ. ತುಳು ಅಕಾಡೆಮಿ ಸಂತಸ:

ತುಳು ಭಾಷೆ ಲಿಪಿ ಯುನಿಕೋಡ್‌ಗೆ ಸೇರ್ಪಡೆಯಾದ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂತಸ ವ್ಯಕ್ತಪಡಿಸಿದೆ. ಇದರೊಂದಿಗೆ ಸಮಸ್ತ ತುಳುವರ ಕನಸು ಈಡೇರಿದೆ. ಇದಕ್ಕೆ ಕಾರಣಕರ್ತರಾದ ತಜ್ಞರಾದ ಕೆ.ಪಿ.ರಾವ್‌, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್‌.ಎ.ಕೃಷ್ಣಯ್ಯ, ರಾಧಾಕೃಷ್ಣ ಬೆಳ್ಳೂರು, ಭಾಸ್ಕರ ಶೇರಿಗಾರ್‌, ಎಸ್‌.ಆರ್‌.ವಿಘ್ನರಾಜ್‌, ಆಕಾಶ್‌ರಾಜ್‌ ಮತ್ತಿತರರು ಕೊಡುಗೆ ನೀಡಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ತಿಳಿಸಿದ್ದಾರೆ. .....................

ಪರಿವರ್ತಕ ತಂತ್ರಾಂಶದ ಅಗತ್ಯತೆಈ ಅಕ್ಷರಗಳನ್ನು ಒಳಗೊಂಡ ಯುನಿಕೋಡ್ ಸಂಕೇತೀಕರಣಗೊಳಿಸಿದ ಓಪನ್‌ಟೈಪ್ ಫಾಂಟ್ ತಯಾರಿ ಆಗಬೇಕು.ತುಳು ಯುನಿಕೋಡ್ ಪ್ರಕಾರ ಮಾಹಿತಿ ಊಡಿಸಲು ಒಂದು ಕೀಬೋರ್ಡ್ ತಂತ್ರಾಂಶ ಬೇಕು. ಈಗಾಗಲೇ ಕನ್ನಡ ಲಿಪಿಯಲ್ಲಿ ದಾಖಲಿಸಿದ ಮಾಹಿತಿಗಳನ್ನು ಈ ಹೊಸ ಸಂಕೇತಕ್ಕೆ ಪರಿವರ್ತಿಸಲು ಒಂದು ಪರಿವರ್ತಕ ತಂತ್ರಾಂಶದ ಅಗತ್ಯವಿದೆ ಎನ್ನುವುದು ಡಾ.ಪವನಜ ಅವರ ಅಭಿಪ್ರಾಯ.

------------