ಬೆಂಗಳೂರಿಗೆ ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು: ಡಿಕೆಶಿ

| Published : Feb 14 2024, 02:16 AM IST

ಸಾರಾಂಶ

ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಸಿ.ಕೆ.ರಾಮಮೂರ್ತಿ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿ ವರ್ಷ ಬೆಂಗಳೂರಿನ ಜನಸಂಖ್ಯೆ 10 ಲಕ್ಷದಷ್ಟು ಹೆಚ್ಚಾಗುತ್ತಿದ್ದು, ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು ಇಡಬೇಕಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಪ್ರತಿ ವರ್ಷ ಬೆಂಗಳೂರಿನ ಜನಸಂಖ್ಯೆ 10 ಲಕ್ಷದಷ್ಟು ಹೆಚ್ಚಾಗುತ್ತಿದ್ದು, ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು ಇಡಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಸಿ.ಕೆ.ರಾಮಮೂರ್ತಿ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಮೀಸಲು ಇಡಬೇಕು ಎಂಬುದಾಗಿ ಹೊಸದಾಗಿ ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 1.5 ಟಿಎಂಸಿಯಷ್ಟು ನೀರು ಉಳಿಯುವ ನಿರೀಕ್ಷೆ ಇದೆ. ದಿನೇ, ದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸುವುದು ನಮ್ಮ ಕರ್ತವ್ಯ ಎಂದರು.

ಇನ್ನು, ಬಿಡಬ್ಲ್ಯೂಎಸ್‌ಎಸ್‌ಬಿ 2017 ರಿಂದ ಈವರೆಗೆ ತಲಾ 10 ಸಾವಿರ ಲೀ. ನೀರನ್ನು ಕೊಳೆಗೇರಿ ನಿವಾಸಿಗಳಿಗೆ ನೀಡುತ್ತಿದೆ. 32 ಸಾವಿರಕ್ಕೂ ಹೆಚ್ಚು ಕುಟುಂಬಗಳು ಎಸ್‌ಸಿ/ಎಸ್‌ಟಿ ಕಾಲೋನಿಯಲ್ಲಿ ವಾಸವಿದ್ದು, 10 ಸಾವಿರ ಲೀ. ಕಾವೇರಿ ನೀರಿನ ಸೌಲಭ್ಯ ಪಡೆಯುತ್ತಿವೆ ಎಂದರು.

11 ವರ್ಷದಿಂದ ನೀರಿನ ದರ ಏರಿಸಿಲ್ಲ: ಡಿಸಿಎಂ

2013 ರಿಂದ ಇಲ್ಲಿಯ ವರೆಗೆ ನೀರಿನ ದರ ಏರಿಕೆ ಮಾಡಿಲ್ಲ. ವಿದ್ಯುತ್ ಬೆಲೆ ಏರಿಕೆ ಮತ್ತು ಇತರೇ ವೆಚ್ಚಗಳು ಹೆಚ್ಚಾದರೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯನ್ನು ವಿವಿಧ ಕಾರಣಗಳಿಂದ ಮಾಡಿಲ್ಲ. ಇಂತಿಷ್ಟು ಮೊತ್ತವನ್ನು ಕೊಳೆಗೇರಿ ಅಭಿವೃದ್ದಿ ಮಂಡಳಿ ಪಾವತಿ ಮಾಡಿದರೆ ಮುಂದಿನ ದಿನಗಳಲ್ಲಿ ಏನೂ ತೊಂದರೆ ಆಗದಂತೆ ನೀರಿನ ಸರಬರಾಜು ಮಾಡಬಹುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.