ಸಾರಾಂಶ
ಹುಬ್ಬಳ್ಳಿ: ಹು-ಧಾ ಮಹಾನಗರದ ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿದ್ದರೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಕಸದ ನಗರವಾಗಿಸಿದ್ದು, ಶೀಘ್ರವೇ ಸ್ವಚ್ಛತಾ ಕಾರ್ಯ, ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಲ್ಲಿಯ ಹೊಸೂರ ವೃತ್ತದಿಂದ ಪ್ರತಿಭಟನಾ ರ್‍ಯಾಲಿ ನಡೆಸಿದ ಕಾರ್ಯಕರ್ತರು, ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಘೋಷಣೆ ಕೂಗುತ್ತಾ ಪಾಲಿಕೆ ಆಯುಕ್ತರ ಕಚೇರಿಗೆ ಆಗಮಿಸಿದರು. ನಂತರ ಕಚೇರಿ ಎದುರಿನಲ್ಲೇ 1 ಗಂಟೆಗೆ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಪಾಲಿಕೆ ನಿರ್ಲಕ್ಷ್ಯ ಧೋರಣೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಮನೀಷಗೌಡ, ಹು-ಧಾ ಮಹಾನಗರ ತನ್ನದೆ ಆದ ಹೆಗ್ಗಳಿಕೆಯಿಂದ ರಾಜ್ಯಾದ್ಯಂತ ಗುರುತಿಸಿಕೊಂಡಿದೆ. ಇಂತಹ ನಗರದಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವಂತಾಗಿದೆ. ಅದರಲ್ಲಿಯೂ ನಗರದ ಪ್ರಮುಖ ಬೀದಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲೆಡೆಯೂ ಕಸದ ರಾಸಿ ಬಿದ್ದಿದ್ದು, ಇದು ಪಾಲಿಕೆಯ ಸ್ವಚ್ಛತೆ ನಿರ್ವಹಣೆಯ ಅಸಮರ್ಥತೆ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ದೇಶಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಸ್ವಚ್ಛತೆ ಬಗ್ಗೆ ದೇಶವೇ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿ ಹುಬ್ಬಳ್ಳಿ ಮಾತ್ರ ಕಸದ ರಾಶಿಯಿಂದ ಕೂಡಿದೆ. ಆದ್ದರಿಂದ ಈ ಕೂಡಲೇ ಸ್ವಚ್ಛತೆಗೆ ಒತ್ತು ನೀಡುವ ಉದ್ದೇಶದಿಂದ ಯೋಜನೆ ರೂಪಿಸಬೇಕು. ಇನ್ನು 15 ದಿನಗಳಲ್ಲಿ ಸ್ವಚ್ಛಗೊಳಿಸುವ ಕಾರ್ಯ ಆಗದಿದ್ದರೆ, ಮತ್ತೇ ಪಾಲಿಕೆಯ ಎದುರು ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಎಸ್ ಪ್ರಾಂತ್ಯದ ಪ್ರಮುಖ ರಮೇಶ ಲೊಂಡ, ಸಿದ್ದಾರ್ಥ, ಸುಪ್ರಿತ್, ರಮೇಶ, ಕಿರಣ, ಶ್ರೇಯಸ್, ಶ್ರೀಧರ, ಹಿತೇಶ ಸೇರಿದಂತೆ ಹಲವರು ಇದ್ದರು.
ಪೊಲೀಸರೊಂದಿಗೆ ವಾಗ್ವಾದಪಾಲಿಕೆಯ ಎದುರು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಸ್ಥಳಕ್ಕೆ ಪಾಲಿಕೆ ಆಯುಕ್ತರು ಇಲ್ಲವೇ ಪಾಲಿಕೆ ಮೇಯರ್ ಬಂದು ನಮ್ಮ ಮನವಿ ಸ್ವೀಕರಿಸಬೇಕು. ಅಲ್ಲಿ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಪಾಲಿಕೆ ಆಯುಕ್ತರು ಕಾರ್ಯ ನಿಮಿತ್ತ ಧಾರವಾಡಕ್ಕೆ ತೆರಳಿದ್ದು, ಕಚೇರಿಗೆ ಬರುವುದು ಸ್ವಲ್ಪ ತಡವಾಗಲಿದೆ. ಕಚೇರಿಯ ಸಿಬ್ಬಂದಿಗೆ ಮನವಿ ನೀಡುವಂತೆ ಹೇಳಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪಾಲಿಕೆಯ ಆಯುಕ್ತರೇ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಸುಮಾರು 1 ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಕೊನೆಗೆ ಪಾಲಿಕೆ ಉಪಮೇಯರ ಸತೀಶ ಹಾನಗಲ್ ಆಗಮಿಸಿ ಮನವಿ ಸ್ವೀಕರಿಸಿ ಸಮಾಧಾನ ಪಡಿಸಿದರು. ಬಳಿಕವಷ್ಟೇ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.