ಮತ್ತೆ ಸನ್ಯಾಸ ದೀಕ್ಷೆಯತ್ತ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜು..!

| Published : Dec 03 2024, 12:31 AM IST

ಮತ್ತೆ ಸನ್ಯಾಸ ದೀಕ್ಷೆಯತ್ತ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜು..!
Share this Article
  • FB
  • TW
  • Linkdin
  • Email

ಸಾರಾಂಶ

ಹದಿಮೂರು ವರ್ಷಗಳ ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಅವರು ಮತ್ತೆ ಸನ್ಯಾಸ ದೀಕ್ಷೆ ಪಡೆಯುವತ್ತ ಮನಸ್ಸು ಮಾಡಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಡಿವೆ. 2011ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಮಯದಲ್ಲೇ ಡಾ.ಎಚ್‌.ಎಲ್‌.ನಾಗರಾಜು ಅವರು ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ನಿಶ್ಚಲಾನಂದನಾಥ ಎಂದು ಹೆಸರನ್ನೂ ಬದಲಾಯಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹದಿಮೂರು ವರ್ಷಗಳ ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಅವರು ಮತ್ತೆ ಸನ್ಯಾಸ ದೀಕ್ಷೆ ಪಡೆಯುವತ್ತ ಮನಸ್ಸು ಮಾಡಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಡಿವೆ.

2011ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಮಯದಲ್ಲೇ ಡಾ.ಎಚ್‌.ಎಲ್‌.ನಾಗರಾಜು ಅವರು ಆದಿ ಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ನಿಶ್ಚಲಾನಂದನಾಥ ಎಂದು ಹೆಸರನ್ನೂ ಬದಲಾಯಿಸಿಕೊಂಡಿದ್ದರು. ಆ ವೇಳೆ ಕುಟುಂಬದವರು, ಸಾರ್ವಜನಿಕರ ಒತ್ತಡಕ್ಕೆ ಮಣಿದು ಸನ್ಯಾಸ ದೀಕ್ಷೆ ತ್ಯಜಿಸಿ ಮತ್ತೆ ಸರ್ಕಾರಿ ಅಧಿಕಾರಿಯಾಗಿ ಮುಂದುವರೆದಿದ್ದರು

ಅವಿವಾಹಿತರಾಗಿಯೇ ಉಳಿದುಕೊಂಡಿರುವ ಡಾ.ಎಚ್‌.ಎಲ್‌.ನಾಗರಾಜು ಮತ್ತೆ ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಅವರು ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಅನಾರೋಗ್ಯ ಕಾರಣದಿಂದ ಪೀಠವನ್ನು ತ್ಯಜಿಸುತ್ತಿದ್ದು, ಆ ಸ್ಥಾನಕ್ಕೆ ಡಾ.ಎಚ್‌.ಎಲ್‌.ನಾಗರಾಜು ಪೀಠಾಧಿಪತಿಗಳಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರೊಂದಿಗೆ ನಾಗರಾಜು ಅವರು ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಈಗಾಗಲೇ ಎಡಿಸಿ ನಾಗರಾಜು ಅವರು ಇನ್ನೂ ಎರಡು ಮೂರು ದಿನಗಳಲ್ಲಿ ರಜೆಯ ಮೇಲೆ ತೆರಳುತ್ತಿದ್ದಾರೆ ಅವರು ತಮ್ಮ ಹುದ್ದಗೆ ರಾಜೀನಾಮೆ ನೀಡದೆ ಸ್ವಯಂ ನಿವೃತ್ತಿ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಡಾ.ಎಚ್‌.ಎಲ್‌.ನಾಗರಾಜು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದ ಡಾ.ನಾಗರಾಜು ಅವರು ಜನಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಹುದ್ದೆಯ ಜೊತೆಗೆ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜು ಅವರು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರು ಹಾಗೂ ಹಣಕಾಸು ಸಮಿತಿಯಲ್ಲೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅತ್ಯುತ್ತಮ ಭಾಷಣಕಾರರಾಗಿಯೂ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಹ ಮಾತುಗಳನ್ನಾಗಿ ಅವರ ಆಕರ್ಷಣೆಗೂ ಒಳಗಾಗಿದ್ದರು.

ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಕೆ ಸಾಧ್ಯತೆ: ಚಲುವರಾಯಸ್ವಾಮಿ

ಅಪರ ಜಿಲ್ಲಾಧಿಕಾರಿ ನಾಗರಾಜು ಸನ್ಯಾಸ ದೀಕ್ಷೆ ಪಡೆಯುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಅದು ಅವರ ವೈಯಕ್ತಿಕ ವಿಚಾರ. ಈಗಾಗಲೇ ಹಿಂದೆಯೂ ಅವರು ದೀಕ್ಷೆ ತೆಗೆದುಕೊಂಡಿದ್ದರು. ಹಿತೈಷಿಗಳ ಒತ್ತಾಯದಿಂದ ವಾಪಸ್‌ ಬಂದಿದ್ದರು. ಈಗ ಮತ್ತೆ ಅದೇ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೆರಡು ಮೂರು ದಿನಗಳಲ್ಲಿ ರಜೆಜ ಕೇಳಿದ್ದಾರೆ. ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದು.