ಸಾರಾಂಶ
ಬಿಜಿಕೆರೆ ಬಸವರಾಜ್
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಪಟ್ಟಣದಲ್ಲಿ ತಲೆ ಎತ್ತಿರುವ ವಾಲ್ಮೀಕಿ ಭವನ ನಿರ್ಮಾಣಗೊಂಡು ವರ್ಷಗಳೇ ಉರುಳಿದರೂ, ಉದ್ಘಾಟನೆ ಭಾಗ್ಯ ಕಾಣದೆ ಸೊರಗುತ್ತಿದೆ. ನಿರ್ವಹಣೆ ಇಲ್ಲದೆ ಗಿಡ ಗಂಟಿಗಳು ಬೆಳೆದು ಸಾವಿರಾರು ಜನರಿಗೆ ಉಪಯೋಗವಾಗಬೇಕಿದ್ದ ನೂತನ ಕಟ್ಟಡ ಧೂಳು ಹಿಡಿಯುತ್ತಿದ್ದು, ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಾಟಾಗಿದೆ.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 3.90 ಕೋಟಿ ರು. ವೆಚ್ಚದಲ್ಲಿ ತಲೆ ಎತ್ತಿರುವ ವಾಲ್ಮೀಕಿ ಭವನ ನಿರ್ಮಾಣದಿಂದ ವಾಲ್ಮೀಕಿ ಸಮುದಾಯಕ್ಕೆ ಹೊಸ ಭರವಸೆಯನ್ನು ಹುಟ್ಟುಹಾಕಿತ್ತು. ಆದರೆ ಭವನದ ಕಾಮಗಾರಿ ಕುಂಟುತ್ತಲೆ ಸಾಗಿದೆ. ಕಟ್ಟಡ ಪೂರ್ಣಗೊಂಡಿದ್ದರೂ ಉಳಿದ ಕೆಲಸಗಳು ಪೂರ್ಣಗೊಳಿಸಲು ಅನುದಾನದ ಕೊರತೆಯ ನೆಪದಿಂದಾಗಿ ನೂತನ ಭವನ ಉದ್ಘಾಟನೆ ಇಲ್ಲದೆ ಧೂಳು ಹಿಡಿಯುತ್ತಿದ್ದು, ಅನಾಥ ಭಾವ ಕಾಡುತ್ತಿದೆ.
ಮೊಳಕಾಲ್ಮುರು ತಾಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ವಾಲ್ಮೀಕಿ ಸಮುದಾಯ ಹೊಂದಿರುವ ಕ್ಷೇತ್ರ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. 2013ರಲ್ಲಿ ವಾಲ್ಮೀಕಿ ಭವನ ಮಂಜೂರಾಗಿತ್ತು. ಕೆಆರ್‌ಡಿಎಲ್‌ನವರು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅಂದಿನಿಂದ ಇಂದಿನವರೆಗೆ ಭವನ ನಿರ್ಮಿಸಿ ಸುತ್ತಲೂ ಕಾಂಪೌಂಡ್ ಕಟ್ಟಿರುವುದು ಹೊರತುಪಡಿಸಿದರೆ ವಿದ್ಯುತ್ ಸಂಪರ್ಕ, ಬಣ್ಣ, ಗೇಟ್ ನಿರ್ಮಾಣ, ನೆಲಹಾಸು, ಕಬ್ಬಿಣದ ಸರಳುಗಳ ಕೆಲಸ ಬಾಕಿ ಇರುವುದರಿಂದ ನೂತನ ಕಟ್ಟಡ ಇಲಾಖೆಗೆ ಹಸ್ತಂತರವಾಗಿಲ್ಲ. ಇದರಿಂದಾಗಿ ಸುಂದರ ಭವನ ಉದ್ಘಾಟನೆಯೂ ಇಲ್ಲದೆ, ಇತ್ತ ಉಪಯೋಗವು ಇಲ್ಲದೆ ಇದ್ದು ಇಲ್ಲದಂತಾ ಸ್ಥಿತಿ ಎದುರಾಗಿದೆ.ಭವನದ ಸುತ್ತಲೂ ಗಿಡಗಳು ಬೆಳೆದಿವೆ. ಉದ್ಘಾಟನೆಗೂ ಮುನ್ನವೇ ಮುಖ್ಯ ದ್ವಾರ ಮತ್ತು ಇತರೆ ಕಡೆ ಮೆಟ್ಟಿಲಿಗೆ ಅಳವಡಿಸಿದ್ದ ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿದ್ದು, ಕಿತ್ತು ಬರುವಂತಾಗಿದೆ. ಗೇಟ್ ಇಲ್ಲದೆ ಆವರಣ ಕುಡುಕರ ಅಡ್ಡೆಯಾಗಿ ನಿರ್ಮಾಣಗೊಂಡಿದ್ದು, ಭವನ ಪೂರ್ಣಗೊಳಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.ಮುಂದುವರೆದ ಕಾಮಗಾರಿಗೆ ಮಂಜೂರಾಗಿದ್ದ 2 ಕೋಟಿ ರು. ಅನುದಾದಲ್ಲಿ 90 ಲಕ್ಷ ರು. ಮಾತ್ರ ಬಿಡುಗಡೆಯಾಗಿದೆ. ಇದರಿಂದ ಕೆಲ ಕಾಮಗಾರಿ ಪೆಂಡಿಂಗ್ ಇದ್ದು, ಭವನವನ್ನು ಇಲಾಖೆಗೆ ಹಸ್ತಾಂತರ ಮಾಡಲು ವಿಳಂಬವಾಗಿದೆ. ಉಳಿದ ಅನುದಾನ ಬಿಡುಗಡೆಗೆ ಈಗಾಗಲೇ ಶಾಸಕರು ಕ್ರಮ ವಹಿಸಿದ್ದು, ಆದಷ್ಟು ಶೀಘ್ರವಾಗಿ ಕೆಲಸಗಳು ಪೂರ್ಣ ಗೊಳ್ಳುತ್ತವೆ ಎನ್ನುವುದು ನಿರ್ಮಾಣ ಹೊಣೆ ಹೊತ್ತ ಅಧಿಕಾರಿಗಳ ಅಂಬೋಣವಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಿ ವಾಲ್ಮೀಕಿ ಭವನ ಉದ್ಘಾಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.ಭವನ ಪೂರ್ಣಗೊಂಡಿದ್ದರೂ, ಅನುದಾನದ ಕೊರತೆಯಿಂದ ಕೆಲ ಕೆಲಸಗಳು ಬಾಕಿ ಇವೆ. ಹಣ ಬಿಡುಗಡೆಗೆ ಈಗಾಗಲೇ ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ. ಹಣ ಬಂದ ಕೂಡಲೇ ಉಳಿದ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸುತ್ತೇವೆ.
- ನಟರಾಜ್, ಕಾರ್ಯಪಾಲಕ ಅಭಿಯಂತರರು, ಕೆಆರ್‌ಡಿಎಲ್, ಚಳ್ಳಕೆರೆ ವಿಭಾಗವಾಲ್ಮೀಕಿ ಭವನ ಕಟ್ಟಡ ಪೂರ್ಣಗೊಳಿಸಿ ಇಲಾಖೆಗೆ ನೀಡಲು ಈಗಾಗಲೇ ಹಲವು ಬಾರಿ ತಿಳಿಸಿದ್ದೇವೆ. ಮುಂದುವರೆದ ಕಾಮಗಾರಿಯ ಅನುದಾನ ಬಿಡುಗಡೆ ವಿಳಂಬವಾಗಿರುವುದೇ ಕಟ್ಟಡ ಪೂರ್ಣಗೊಳಿಸಲು ವಿಳಂಬವಾಗಿದೆ ಎನ್ನಲಾಗಿದೆ. ಆದಷ್ಟು ಶೀಘ್ರವಾಗಿ ಪೂರ್ಣ ಭವನವನ್ನು ಇಲಾಖೆಗೆ ಹಸ್ತಾಂತರಿಸಿದರೆ ಸಮುದಾಯಕ್ಕೆ ಉಪಯೋಗವಾಗಲಿದೆ.- ಸಯ್ಯದ್ ನಾಸಿರುದ್ದೀನ್, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ
ವಾಲ್ಮೀಕಿ ಸಮುದಾಯ ನೂತನ ಕಟ್ಟಡ ನಿರ್ಮಾಣವಾಗಿ ಆರೇಳು ವರ್ಷಗಳೇ ಕಳೆದರೂ, ಭವನ ಪರಿ ಪೂರ್ಣ ಗೊಳಿಸಲು ವಿಳಂಬವಾಗಿದೆ. ಇದರಿಂದಾಗಿ ಸಮುದಾಯದ ಸಭೆ, ಸಮಾರಂಭ ನಡೆಸಲು ಹಿನ್ನೆಡೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ನೆಪ ಹೇಳದೆ ಭವನವನ್ನು ಪೂರ್ಣಗೊಳಿಸಿ ಉದ್ಘಾಟನೆಗೆ ಕ್ರಮ ವಹಿಸಬೇಕು.- ಆರ್.ತಿಪ್ಪೇಸ್ವಾಮಿ, ಯುವ ಮುಖಂಡ ಹಾನಗಲ್.