ಮುಖ್ಯ ಸುದ್ದಿ) ದ.ಕ. ಸಂಸದರ ಪತ್ರಕ್ಕೆ ಕ್ಷಿಪ್ರ ಸ್ಪಂದಿಸಿದ ರೈಲ್ವೆ ಇಲಾಖೆ: ಘಾಟಿ ಕುಸಿತ ಕಾರಣ ಬೆಂಗಳೂರಿಗೆ ಹೆಚ್ಚುವರಿ ರೈಲು ಶುರು

| Published : Jul 20 2024, 12:50 AM IST

ಮುಖ್ಯ ಸುದ್ದಿ) ದ.ಕ. ಸಂಸದರ ಪತ್ರಕ್ಕೆ ಕ್ಷಿಪ್ರ ಸ್ಪಂದಿಸಿದ ರೈಲ್ವೆ ಇಲಾಖೆ: ಘಾಟಿ ಕುಸಿತ ಕಾರಣ ಬೆಂಗಳೂರಿಗೆ ಹೆಚ್ಚುವರಿ ರೈಲು ಶುರು
Share this Article
  • FB
  • TW
  • Linkdin
  • Email

ಸಾರಾಂಶ

ರೈಲು ಸಂಖ್ಯೆ 06549 ಯಶವಂತಪುರ- ಮಂಗಳೂರು ಜಂಕ್ಷನ್‌ಗೆ ಹಾಗೂ ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಜು. 21ಮತ್ತು 22ರಂದು 2 ಟ್ರಿಪ್‌ಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಶಿರಾಡಿ ಘಾಟ್‌ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ ಹಿನ್ನೆಲೆಯಲ್ಲಿ ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ರೈಲ್ವೆ ಇಲಾಖೆ ಕ್ಷಿಪ್ರವಾಗಿ ಸ್ಪಂದಿಸಿ ಮಂಗಳೂರಿನಿಂದ ಬೆಂಗಳೂರಿಗೆ ಶುಕ್ರವಾರದಿಂದಲೇ ಹೆಚ್ಚುವರಿ ರೈಲು ಓಡಾಟಕ್ಕೆ ಸಮ್ಮತಿಸಿದೆ.

ನೈಋತ್ಯ ರೈಲ್ವೆ ಜನರಲ್ ಮೆನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಶುಕ್ರವಾರ ಪತ್ರ ಬರೆದು ವಿನಂತಿಸಿದ್ದರು.

ಹೆಚ್ಚಿನ ಸಂಖ್ಯೆಯ ಜನರು ಮಂಗಳೂರು- ಬೆಂಗಳೂರು ನಗರಗಳ ನಡುವೆ ನಿತ್ಯ ಪ್ರಯಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಇತರ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣದಿಂದ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸುವ ಅಗತ್ಯತೆಯಿದ್ದು. ಶೀಘ್ರದಲ್ಲಿ ಹೆಚ್ಚುವರಿ ರೈಲ್ವೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಪತ್ರದಲ್ಲಿ ಕೋರಿದ್ದರು.

ಶುಕ್ರವಾರದಿಂದಲೇ ಸಂಚಾರ:

ಮಂಗಳೂರು ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ರೈಲು ಸಂಖ್ಯೆ 06547 ಬೆಂಗಳೂರು ನಗರ ಜಂಕ್ಷನ್‌ನಿಂದ ಮಂಗಳೂರು ಜಂಕ್ಷನ್‌ಗೆ 19ರಂದು ಹಾಗೂ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರ ಜಂಕ್ಷನ್‌ಗೆ ರೈಲು ಸಂಖ್ಯೆ 06548 ಜು. 20ರಂದು ತಲಾ ಒಂದು ಟ್ರಿಪ್‌ನಂತೆ ಸಂಚರಿಸಲಿದೆ.

ರೈಲು ಸಂಖ್ಯೆ 06549 ಯಶವಂತಪುರ- ಮಂಗಳೂರು ಜಂಕ್ಷನ್‌ಗೆ ಹಾಗೂ ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಜು. 21ಮತ್ತು 22ರಂದು 2 ಟ್ರಿಪ್‌ಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 06547 ಬೆಂಗಳೂರು ನಗರ ಜಂಕ್ಷನ್‌ (ಎಸ್‌ಬಿಸಿ)ನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 11.40ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1.40ಕ್ಕೆ ಹೊರಟು ರಾತ್ರಿ 11.15ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06549 ಯಶವಂತಪುರದಿಂದ ರಾತ್ರಿ 12.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 11.40ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ 1.40ಕ್ಕೆಹೊರಟು ಯಶವಂತಪುರಕ್ಕೆ ರಾತ್ರಿ 11.15ಕ್ಕೆ ತಲುಪಲಿದೆ.

ಈ ವಿಶೇಷ ರೈಲುಗಳು ಆರು ಜನರಲ್‌, ಆರು ಸ್ಲೀಪರ್‌, ಎರಡು 3 ಟಯರ್‌ ಎಸಿ, ಎರಡು 2 ಟಯರ್‌ ಎಸಿ ಮತ್ತು ಎರಡು ಲಗೇಜ್‌ ಕೋಚ್‌ಗಳನ್ನು ಹೊಂದಿರಲಿದೆ. ಚಿಕ್ಕಬನವರ, ನೆಲಮಂಗಳ, ಚನ್ನಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಕಬಕ ಪುತ್ತೂರು ಮತ್ತು ಬಂಟ್ವಾಳದಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.