ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ದೇಶದಲ್ಲಿ ಕೃಷಿ ವಲಯದಿಂದ ಶೇ.75 ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಬಹುತೇಕ ವಿದ್ಯಾವಂತರು ಕೃಷಿ ವಲಯದತ್ತ ಮುಖ ಮಾಡುತ್ತಿರುವುದರಿಂದ ಸುಧಾರಿತ ಕೃಷಿ ಬಗ್ಗೆ ಅವರಿಗೆ ಸೂಕ್ತ ತರಬೇತಿಯ ಅಗತ್ಯವಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಕೃಷಿಕ ಸಮಾಜದ ವತಿಯಿಂದ 2 ನೇ ಅಂತಸ್ತಿನಲ್ಲಿ ನಿರ್ಮಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ತರಬೇತಿ ಭವನ, ರೈತಬಂಧು ನಗರದ ಮಹದೇವಪ್ಪ ಕೃಷಿ ಭವನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೃಷಿಕ ಈ ದೇಶದ ಬೆನ್ನೆಲಬು, ವಿಜ್ಞಾನ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಮನುಷ್ಯನ ಹೊಟ್ಟೆಗೆ ಅನ್ನ ಪಡೆಯಲು ರೈತರು ಉತ್ತಿ- ಬಿತ್ತಿ ಬೆಳೆಯನ್ನು ಭತ್ತ ಬೆಳೆಯಲೇಬೇಕು. ರೈತರ ಸ್ವಾಭಿಮಾನದ ಬದುಕಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳನ್ನು ಕಟ್ಟಕಡೆಯ ರೈತರಿಗೆ ತಲುಪಿಸುವ ಜವಾಬ್ದಾರಿಯು ಕೃಷಿಕ ಸಮಾಜದ್ದಾಗಿದೆ ಎಂದು ತಿಳಿಸಿದರು.ದೇಶದಲ್ಲಿ ಶೇ.75ರಷ್ಟು ಉದ್ಯೋಗವನ್ನು ಕೃಷಿಕ ವಲಯ ನೀಡುತ್ತಿದ್ದು, ಪ್ರಸ್ತುತ ದಿನದಲ್ಲಿ ವಿದ್ಯಾವಂತರು ಹೆಚ್ಚು ಹೆಚ್ಚು ಕೃಷಿಯತ್ತ ಮುಖ ಮಾಡುತ್ತಿರುವುದು ಸಂತಸದಾಯಕ ಬೆಳವಣಿಗೆಯಾಗಿದೆ. ವಿದ್ಯಾವಂತರಿಗೆ ಸುಧಾರಿತ ಕೃಷಿ ಬಗ್ಗೆ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಯಡಿಯೂರಪ್ಪ ಕೃಷಿ ತರಬೇತಿ ಕೇಂದ್ರವನ್ನು ತೆರೆಯಲಾಗಿದ್ದು ಇದರ ಉಪಯೋಗವನ್ನು ಎಲ್ಲ ರೈತರು, ರೈತ ಮಕ್ಕಳು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಡಿಮೆ ನೀರಿನಲ್ಲಿ ಅತಿ ಹೆಚ್ಚು ಬೆಳೆ ಬೆಳೆಯುವ ಇಸ್ರೇಲ್ ತಂತ್ರಜ್ಞಾನದ ಕೃಷಿ ಪದ್ಧತಿಯ ಅವಶ್ಯಕತೆ ದೇಶಕ್ಕಿದ್ದು ಅದರ ಜತೆಗೆ ಸಾಧ್ಯವಾದ ಎಲ್ಲ ರೀತಿಯ ಉನ್ನತ ತರಬೇತಿ ವ್ಯವಸ್ಥೆಯನ್ನು ಕಲ್ಪಿಸುವ ತುರ್ತು ಅಗತ್ಯವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ತಾಲೂಕು ಕೃಷಿಕ ಸಮಾಜವು ಸದಾಕಾಲ ರೈತರ ಪರವಾಗಿದ್ದು, ರೈತರು ತರಬೇತಿ ಸೇರಿದಂತೆ ಸರ್ಕಾರದ ಎಲ್ಲ ರೀತಿಯ ಸೌಲಭ್ಯವನ್ನು ಕೃಷಿಕ ಸಮಾಜದ ಮೂಲಕ ಪಡೆದುಕೊಳ್ಳಬೇಕು. ವಿದ್ಯಾವಂತ ಯುವ ಸಮೂಹವು ವೈಜ್ಞಾನಿಕವಾಗಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಲಾಭದಾಯಕ ಉದ್ಯಮವನ್ನಾಗಿ ಕೃಷಿಯನ್ನು ಬೆಳೆಸಬೇಕಾಗಿದೆ ಎಂದರು.
ಈ ವೇಳೆ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್ ಗೌಡ, ಜಿಲ್ಲಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ, ಡಿ.ಎಸ್ ಈಶ್ವರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮುಖಂಡ ಬಿ.ಡಿ ಭೂಕಾಂತ್, ಪಚ್ಚಿ ಗಿಡ್ಡಪ್ಪ, ಕಣಿವೆ ಮನೆ ಅರುಣ್, ಪಿ.ಶಿವರಾಂ, ಪುಷ್ಪ ಮಂಜಪ್ಪ, ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಗಂಗಾಧರಪ್ಪ, ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಮತ್ತಿತರರು ಉಪಸ್ಥಿತರಿದ್ದರು.