ಜನರಿಗೆ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ತಲುಪಿಸಿ: ಗುರುಸ್ವಾಮಿ

| Published : Jul 22 2025, 12:00 AM IST

ಸಾರಾಂಶ

ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 98,873 ಪಡಿತರ ಚೀಟಿಗಳ ಕುಟುಂಬದ ಸದಸ್ಯರು ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನ್ವಯ ಆಹಾರ ಧಾನ್ಯಗಳನ್ನು ನಿಗದಿತ ಸಮಯಕ್ಕೆ ವಿತರಿಸಬೇಕು. ವಿಳಂಬ ಧೋರಣೆ ಅನುಸರಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜ‌ನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾ‌ನ ಸಮಿತಿಯ ಮೈಸೂರು ತಾಲೂಕು ಅಧ್ಯಕ್ಷ ಗುರುಸ್ವಾಮಿ ತಿಳಿಸಿದರು.

ಮೈಸೂರು ತಾಪಂ ಕಚೇರಿಯಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಹಾಗೂ ಸಮಿತಿಯು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 98,873 ಪಡಿತರ ಚೀಟಿಗಳ ಕುಟುಂಬದ ಸದಸ್ಯರು ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನ್ವಯ ಆಹಾರ ಧಾನ್ಯಗಳನ್ನು ನಿಗದಿತ ಸಮಯಕ್ಕೆ ವಿತರಿಸಬೇಕು. ವಿಳಂಬ ಧೋರಣೆ ಅನುಸರಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಬೇಕು ಎಂದರು.

ಗೃಹಲಕ್ಷ್ಮೀ ಸೌಲಭ್ಯ ಪಡೆಯಲು ತಾಂತ್ರಿಕ ಸಮಸ್ಯೆ ಕಂಡು ಬಂದರೆ ತಕ್ಷಣ ಸ್ಪಂದಿಸಬೇಕು. ಯುವ ನಿಧಿ ಯೋಜನೆಯಲ್ಲಿ 4,297 ಫಲಾನುಭವಿಗಳಿದ್ದು, ಇನ್ನೂ ಹೆಚ್ಚಿನ ಅಭ್ಯರ್ಥಿಗಳನ್ನು ನೋಂದಣಿ ಮಾಡಿಸಬೇಕು. ಗೃಹಜ್ಯೋತಿಯಲ್ಲಿ ಸೌಲಭ್ಯ ಒದಗಿಸುವಲ್ಲಿ ಯಾವುದೇ ದೂರುಗಳ ಬರದಂತೆ ನೋಡಿಕೊಳ್ಳಿ ಎಂದರು.

ಶಕ್ತಿ ಯೋಜನೆಯು ಮಹಿಳೆಯರ ಸ್ವಾವಲಂಭಿ ಬದುಕಿಗೆ ನೆರವಾಗಿದೆ. ಈ ನಡುವೆ ಬಸ್‌ ಗಳನ್ನು ಬೇಜವಾಜ್ದಾರಿಯಿಂದ ಚಾಲನೆ ಮಾಡುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ಚಾಲಕರಿಗೆ ಮನವರಿಕೆ ಮಾಡಿ. ಮುಂದುವರೆಸಿದರೆ ಕ್ರಮ ತೆಗುದಕೊಳ್ಳಿ ಎಂದು ಅವರು ಸೂಚಿಸಿದರು.

ನೂತನ ಕಚೇರಿ ಉದ್ಘಾಟನೆ:

ತಾಲೂಕು ಆಡಳಿತ ಕಚೇರಿಯ ಎರಡನೇ ಮಹಡಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾ‌ನ ಸಮಿತಿಯ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷರಾದ ಶಿವಕುಮಾರ್, ಲತಾ ರಾಜಶೇಖರ್, ಮುಡಾ ಮಾಜಿ ಅಧ್ಯಕ್ಷ ಮರೀಗೌಡ, ತಾಲೂಕು ಅಧ್ಯಕ್ಷ ಗುರುಸ್ವಾಮಿ ಉದ್ಘಾಟಿಸಿದರು.

ಇದೇ ವೇಳೆ ಯುವನಿಧಿ ನೋಂದಣಿ ಅಭಿಯಾನದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ತಾಪಂ ಇಒ ಸಿ. ಕೃಷ್ಣ, ಸಮಿತಿ ಸದಸ್ಯರಾದ ಬಿ. ರವಿ, ರಾಣಿ ಶಿವಣ್ಣ, ಮಾವಿನಹಳ್ಳಿ ನಾಗೇಶ್, ಮೊಹಮ್ಮದ್ ಆಲಿ ಬಾಬು, ಎಂ. ಸೋಮಣ್ಣ, ಕರೀಗೌಡ, ಎಚ್.ಡಿ. ಚನ್ನಯ್ಯ, ಮೂಡಪ್ಪ, ವಿ.ಸಿ. ಬಸವರಾಜು, ಶಂಕರ, ನಾಗರಾಜಮೂರ್ತಿ, ತಾಲೂಕು ಯೋಜನಾಧಿಕಾರಿ ಸುರೇಶ್ ಮೊದಲಾದವರು ಇದ್ದರು.