ಮೃತ ನೇಹಾ, ಅಂಜಲಿ ನಿವಾಸಕ್ಕೆ ಎಡಿಜಿಪಿ ಆರ್. ಹಿತೇಂದ್ರ ಭೇಟಿ

| Published : May 20 2024, 01:30 AM IST

ಸಾರಾಂಶ

ಈಚೆಗೆ ಹತ್ಯೆಯಾಗಿದ್ದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ನಿವಾಸಕ್ಕೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಭಾನುವಾರ ಭೇಟಿ ನೀಡಿ ಕುಟುಂಬದವರಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಈಚೆಗೆ ಹತ್ಯೆಯಾಗಿದ್ದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ನಿವಾಸಕ್ಕೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಭಾನುವಾರ ಭೇಟಿ ನೀಡಿ ಕುಟುಂಬದವರಿಂದ ಮಾಹಿತಿ ಪಡೆದರು.

ಕಳೆದ ಏ. 18ರಂದು ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಫಯಾಜ್ ಎಂಬ ಯುವಕ ನೇಹಾ ಹಿರೇಮಠ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದನು. ಹಾಗೆಯೇ ಕಳೆದ ಮೇ 15ರಂದು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮನೆಗೆ ಗಿರೀಶ ಸಾವಂತ್ ಎಂಬ ಯುವಕ ಬೆಳ್ಳಂಬೆಳಗ್ಗೆ ನುಗ್ಗಿ ಹತ್ಯೆ ಮಾಡಿದ್ದಾನೆ. ಈ ಎರಡೂ ಘಟನೆಗಳ ಕುರಿತು ನಗರದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕಾನೂನು ಸುವ್ಯವಸ್ಥೆ ಎಡಿಜಿಪಿ ಎರಡೂ ಕುಟುಂಬದವರನ್ನು ಭೇಟಿಯಾಗಿ ಚರ್ಚಿಸಿ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಇಬ್ಬರು ಯುವತಿಯರ ಹತ್ಯೆಯಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಹು-ಧಾ ಮಹಾನಗರಕ್ಕೆ ಭೇಟಿ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ಅಧಿಕಾರಿಗಳ ಜತೆಗೆ ಸಭೆ ಮಾಡಿ ಚರ್ಚಿಸಲಾಗಿದೆ. ಈಗಾಗಲೇ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿದೆ. ಅಂಜಲಿ ಪ್ರಕರಣ ಸಂಬಂಧಿಸಿದಂತೆ ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅಂಜಲಿ ಪ್ರಕರಣದ ಆರೋಪಿಯ ಜತೆಗೆ ಕೆಳ ಹಂತದ ಸಿಬ್ಬಂದಿ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರಕ್ಕೆ ಮಾತನಾಡಿದ ಹಿತೇಂದ್ರ ಅವರು, ಇದರ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಹಲವು ಸಿಬ್ಬಂದಿ ಅಂಜಲಿ ಹತ್ಯೆಯ ಆರೋಪಿಯ ಜತೆಗೆ ಸಂಪರ್ಕವಿರುವುದಾಗಿ ಮಾಹಿತಿ ಬಂದಿದೆ. ಅಂತಹ ಸಿಬ್ಬಂದಿ ಮೇಲೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದರು.

2022-23ರಲ್ಲಿ ಆದ ಪ್ರಕರಣಗಳಿಗಿಂತ 2024ರಲ್ಲಿ ಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. ಇಲ್ಲಿಯ ಇಬ್ಬರು ಯುವತಿಯರ ಹತ್ಯೆ ನಮಗೂ ನೋವುಂಟು ಮಾಡಿದೆ. ಒಂದರ ಮೇಲೊಂದು ಹತ್ಯೆಯಾದ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ್ದೇವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ. ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವ ಕೆಲಸ ಮುಂದೆ ಪೊಲೀಸರು ಮಾಡಲಿದ್ದಾರೆ ಎಂದು ಭರವಸೆ ನೀಡಿದರು.

ಮಹಾನಗರದಲ್ಲಿ ಗಾಂಜಾ ಮತ್ತಿತರ ಚಟುವಟಿಕೆ ಹೆಚ್ಚಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ನಗರದಲ್ಲಿ ಕಂಡುಬಂದಿರುವ ಗಾಂಜಾ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಅಂಜಲಿ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ನಿರ್ಧಾರಗಳನ್ನು ನಾನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಪೊಲೀಸರ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದವು. ದೂರು ಬಂದಾಗ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಂಜಲಿ ಅಜ್ಜಿ ಮೊದಲೇ ದೂರು ಕೊಡಲು ಬಂದಿದ್ದಳೆಂಬ ವಿಚಾರ ಬಂದಿತ್ತು. ಹೀಗಾಗಿ ಸಂಬಂಧಿಸಿದ ಸಿಬ್ಬಂದಿ ಮೇಲೆ ಕ್ರಮವಾಗಿದೆ. ಮಹಾನಗರದಲ್ಲಿ ಪೊಲೀಸ್ ಠಾಣೆಗಳು ಹೆಚ್ಚಾಗಬೇಕಿದೆ. ಈ ಬಗ್ಗೆಯೂ ಪ್ರಕ್ರಿಯೆ ನಡೆದಿದೆ. ಇಲ್ಲಿ ನಡೆದಿರುವ ಸಭೆಯ ಸಮಗ್ರ ವರದಿಯನ್ನು ಗೃಹ ಸಚಿವರಿಗೆ ಸಲ್ಲಿಸುತ್ತೇನೆ ಎಂದರು.

ಈ ವೇಳೆ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್, ಎಸ್ಪಿ ಗೋಪಾಲ ಬ್ಯಾಕೋಡ್, ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳಿದ್ದರು.