ದೇಶದ ಸಮೃದ್ಧಿಗೆ ರಾಮತತ್ವದ ಅನುಸರಣೆ ಅಗತ್ಯ: ಹರಿಪ್ರಕಾಶ ಕೋಣೆಮನೆ

| Published : Jun 25 2024, 12:32 AM IST

ದೇಶದ ಸಮೃದ್ಧಿಗೆ ರಾಮತತ್ವದ ಅನುಸರಣೆ ಅಗತ್ಯ: ಹರಿಪ್ರಕಾಶ ಕೋಣೆಮನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರವಾಗಲಿ, ನಳಂದ ವಿಶ್ವವಿದ್ಯಾನಿಲಯವಾಗಲೀ, ಯಾವುದೇ ಜಾತಿ, ಧರ್ಮ, ಪಂಥಗಳಿಗೆ ಸೀಮಿತವಾದುದಲ್ಲ. ಭಾರತದ ಪರಮಶ್ರೇಷ್ಠ ಮೌಲ್ಯಗಳನ್ನು ಜಗತ್ತಿಗೆ ನೀಡುವ ಕಾರ್ಯವಾಗಿದ್ದು, ದೇಶ ಸಮೃದ್ಧಿಯಾಗಲು ರಾಮತತ್ವದ ಅನುಸರಣೆ ಅಗತ್ಯ.

ಯಲ್ಲಾಪುರ: ದೇಶದ ಇತಿಹಾಸದಲ್ಲಿ ಇತ್ತೀಚೆಗೆ ಎರಡು ಮಹತ್ವದ ಸಾಧನೆಗಳಿಗೆ ನಾಂದಿ ಹಾಡಲಾಗಿದೆ. ೫೦೦ ವರ್ಷಗಳ ಪ್ರಾಚೀನ ಇತಿಹಾಸವುಳ್ಳ ರಾಮಮಂದಿರ ನಿರ್ಮಾಣ; ಸಾವಿರಾರು ವರ್ಷಗಳ ಹಿಂದಿನ ನಳಂದ ವಿಶ್ವವಿದ್ಯಾನಿಲಯದ ಸ್ಥಾಪನೆ. ಇವೆರಡೂ ಇತಿಹಾಸವನ್ನು ಸೃಷ್ಟಿಸಿವೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಚಿಂತಕ ಹರಿಪ್ರಕಾಶ ಕೋಣೆಮನೆ ತಿಳಿಸಿದರು.

ಜೂ. ೨೩ರಂದು ಪಟ್ಟಣದ ಶಿರಸಿ ರಸ್ತೆಯ ಸಂಸ್ಕೃತಿ ನಿವಾಸದ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ರಾಮಾಯಣದ ಬಾಲಕಾಂಡದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ನಮ್ಮ ಸಾಂಸ್ಕೃತಿಕ ಭಾರತಕ್ಕೆ ಇತಿಹಾಸ ಸೃಷ್ಟಿಸಲೇಬೇಕಾಗಿದೆ. ವಿರೋಧಿಸುವವರೂ ಇರಬಹುದು. ಆದರೆ, ಇಂತಹ ವಿಚಾರಗಳನ್ನು ರಾಜಕೀಯ ದೃಷ್ಟಿಕೋನದ ಮೂಲಕ ಯೋಚಿಸಬಾರದು. ರಾಮಮಂದಿರವಾಗಲಿ, ನಳಂದ ವಿಶ್ವವಿದ್ಯಾನಿಲಯವಾಗಲೀ, ಯಾವುದೇ ಜಾತಿ, ಧರ್ಮ, ಪಂಥಗಳಿಗೆ ಸೀಮಿತವಾದುದಲ್ಲ. ಭಾರತದ ಪರಮಶ್ರೇಷ್ಠ ಮೌಲ್ಯಗಳನ್ನು ಜಗತ್ತಿಗೆ ನೀಡುವ ಕಾರ್ಯವಾಗಿದ್ದು, ದೇಶ ಸಮೃದ್ಧಿಯಾಗಲು ರಾಮತತ್ವದ ಅನುಸರಣೆ ಅಗತ್ಯ ಎಂದರು.

ಉಮ್ಮಚಗಿ ಶ್ರೀಮಾತಾ ವೇದ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೇಶ ಭಟ್ಟ ಉಪನ್ಯಾಸ ನೀಡಿ, ರಾಮಾಯಣ ಕಾವ್ಯವೂ ಮಹಾಭಾರತದಂತೆ ಪಂಚಮ ವೇದ. ರಾಮಾಯಣವನ್ನು ಓದಿದರೆ ಎಲ್ಲ ಪ್ರಾಚೀನ ಗ್ರಂಥಗಳ ಮೌಲ್ಯಗಳೂ ದೊರೆಯುತ್ತವೆ. ನಾವು ರಾಮಾಯಣವನ್ನು ನಮ್ಮ ಕಣ್ಣಿನ ನೇರಕ್ಕೆ ನೋಡುತ್ತೇವೆ. ಆದ್ದರಿಂದಲೇ ಹಲವಾರು ರಾಮಾಯಣ, ಸೀತಾಯಣಗಳು ಹುಟ್ಟಿಕೊಂಡಿವೆ. ವಾಲ್ಮಿಕಿಯವರ ಕಣ್ಣಿನಲ್ಲೇ ಯಾರು ರಾಮಾಯಣವನ್ನು ನೋಡುತ್ತಾರೋ ಆಗ ರಾಮಾಯಣದ ವಾಸ್ತವ ಅರಿವಾಗುತ್ತದೆ ಎಂದರು.

ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷ ಸಿದ್ದಾಪುರದ ಗಂಗಾಧರ ಕೊಳಗಿ ಮಾತನಾಡಿ, ಭಾರತೀಯ ಪರಂಪರೆ, ಮೌಲ್ಯಗಳನ್ನು ಪರಿಚಯಿಸಲು ರಾಮಾಯಣ, ಭಾರತದಿಂದ ಸಾಧ್ಯ. ಅನೇಕರು ಬರೆದ ರಾಮಾಯಣ ಗ್ರಂಥ ಟೀವಿಯಲ್ಲಿ ಬರುವ ರಾಮಾಯಣ ಇವುಗಳನ್ನು ನೋಡಿ ನಾವು ಭ್ರಾಂತಿಗೊಳಗಾಗಿದ್ದೇವೆ. ಅನೇಕ ಕವಿಗಳು ತಮ್ಮ ಭಾವನೆಯನ್ನು ಸೇರಿಸಿ ಬರೆದಿದ್ದಾರೆ. ಮೂಲ ರಾಮಾಯಣವೇ ಬೇರೆ. ಈ ದೃಷ್ಟಿಯಿಂದ ಮಹೇಶ ಭಟ್ಟ ಅವರು ಉತ್ತಮ ಅವಲೋಕನ ಮಾಡಿದ್ದಾರೆ. ನಮ್ಮ ಸಂಘಟನೆಯ ಉದ್ದೇಶವೂ ಇದೇ ಆಗಿದೆ ಎಂದರು.

ಸಂವಾದದಲ್ಲಿ ಕೆ.ಎಸ್. ಅಗ್ನಿಹೋತ್ರಿ, ದಾಕ್ಷಾಯಿಣಿ ಪಿ.ಎಸ್., ಈಶ್ವರದಾಸ, ಗಣಪತಿ ಭಟ್ಟ, ಮುಂತಾದವರು ಪಾಲ್ಗೊಂಡಿದ್ದರು. ಪ್ರಮುಖರಾದ ಪ್ರಮೋದ ಹೆಗಡೆ, ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ಜಗದೀಶ ಭಂಡಾರಿ, ಶೈಲಜಾ ಮಂಗಳೂರು, ಕೃಷ್ಣ ಪದಕಿ, ಮುಂತಾದವರು ಉಪಸ್ಥಿತರಿದ್ದರು. ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾಶಂಕರ ಪ್ರಾರ್ಥಿಸಿದರು. ಜಿಲ್ಲಾ ಅ.ಭಾ.ಸಾ.ಪ.ದ ಮಾಧ್ಯಮ ಸಂಘಟನೆಯ ಪ್ರಮುಖ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಕಾರ್ಯದರ್ಶಿ ಸಂಜಯ ಭಟ್ಟ ಬೆಣ್ಣೆ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಭಾಗ್ವತ ವಂದಿಸಿದರು.