ಅದ್ಧೂರಿ ವೈಕುಂಠ ಏಕಾದಶಿ

| Published : Jan 11 2025, 12:46 AM IST

ಸಾರಾಂಶ

ವೈಕುಂಠ ಏಕಾದಶಿ ದಿನದಂದು ಇಬ್ಬರು ಅಸುರರ ಮೋಕ್ಷಕ್ಕಾಗಿ ತೆರೆದ ವೈಕುಂಠ ದ್ವಾರ ಎಂದು ಈ ದಿನವನ್ನು ಆಚರಿಸಲಾಗುತ್ತದೆ. ವೈಕುಂಠ ಏಕಾದಶಿ ಶ್ರೀ ಮಹಾವಿಷ್ಣು ಯೋಗ ನಿದ್ರೆಯಿಂದ ಜಾಗೃತಾವಸ್ಥೆಗೆ ಬರುವ ಪುಣ್ಯ ದಿನ ಈ ದಿನವಾಗಿದೆ. ಹಾಗಾಗಿ ಈ ದಿನ ಬಹುತೇಕ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವೈಕುಂಠ ಏಕಾದಶಿ ಪ್ರಯುಕ್ತ ಜಿಲ್ಲೆಯ ವಿಷ್ಣುದೇವಾಲಯಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರ ದಾಟಲು ಭಕ್ತಸಾಗರ ಹರಿದು ಬಂದಿತ್ತು.

ಪ್ರತಿ ವರ್ಷ ಮಾರ್ಗಶಿರ ಮಾಸ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯನ್ನು ವಿಶೇಷ ದಿನವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ವಿಷ್ಣುವಿಗೆ ಪ್ರಿಯವಾದ ಈ ಪವಿತ್ರ ದಿನದಂದು ಮಾಡುವ ಪೂಜೆ-ಪುನಸ್ಕಾರಗಳು ಮತ್ತು ಉಪವಾಸ ವ್ರತಗಳು ವಿಶೇಷ ಫಲವನ್ನು ನೀಡುತ್ತದೆ ಎಂಬುದು ನಂಬಿಕೆ.

ಅಲ್ಲದೇ ಈ ದಿನದಂದು ಇಬ್ಬರು ಅಸುರರ ಮೋಕ್ಷಕ್ಕಾಗಿ ತೆರೆದ ವೈಕುಂಠ ದ್ವಾರ ಎಂದು ಈ ದಿನವನ್ನು ಆಚರಿಸಲಾಗುತ್ತದೆ. ವೈಕುಂಠ ಏಕಾದಶಿ ಶ್ರೀ ಮಹಾವಿಷ್ಣು ಯೋಗ ನಿದ್ರೆಯಿಂದ ಜಾಗೃತಾವಸ್ಥೆಗೆ ಬರುವ ಪುಣ್ಯ ದಿನ ಈ ದಿನವಾಗಿದೆ. ಹಾಗಾಗಿ ಈ ದಿನ ಬಹುತೇಕ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಲಾಗುತ್ತದೆ. ಎಂದಿನಂತೆ ಈ ಬಾರಿಯೂ ಈ ದಿನದಲ್ಲಿ ಜಿಲ್ಲೆಯಾದ್ಯಂತ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ಶ್ರೀ ಸ್ವಾಮಿಯವರಿಗೆ ವಿಶೇಷ ಪೂಜಾಧಿಗಳು ನಡೆದವು. ವೈಕುಂಠ ದ್ವಾರ ಪ್ರವೇಶಿಸಿ, ದೇವರ ದರ್ಶನ ಪಡೆಯಲು ಸರದಿಸಾಲಿನಲ್ಲಿ ಮುಂದಾದರು.

ನಗರದ ಪ್ರಮುಖ ವೈಷ್ಣವ ದೇವಾಲಯವಾದ ಕಂದವಾರಪೇಟೆಯ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ, ಗಂಗಮ್ಮ ರಸ್ತೆಯ ಪೇಟೆಆಂಜನೇಯಸ್ವಾಮಿ ದೇವಾಲಯ, ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀನಿವಾಸ ಸಾಗರದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಜಾಲಾರಿ ನರಸಿಂಹ ದೇವರ ಬೆಟ್ಟದಲ್ಲಿರುವ ಶ್ರೀ ಯೋಗ ಮತ್ತು ಭೋಗ ನರಸಿಂಹಸ್ವಾಮಿ ದೇವಾಲಯ,ಅರೂರಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಅಣಕನೂರು, ಜಾತವಾರ,ಗವಿಗಾನ ಹಳ್ಳಿ,ಚಿಕ್ಕಕಾಡಿಗೇನಹಳ್ಳಿಗಳ ರಂಗನಾಥ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು.