ಜಾತಿ, ಕುಲ ಭಿನ್ನತೆಯ ಜೀವನದಿಂದ ಶರಣರ ತತ್ತ್ವ ಒಳ ಹೊಕ್ಕಲು ಸಾಧ್ಯ: ಶಂಕರ್‌ ದೇವನೂರು

| Published : Jun 03 2024, 12:30 AM IST

ಜಾತಿ, ಕುಲ ಭಿನ್ನತೆಯ ಜೀವನದಿಂದ ಶರಣರ ತತ್ತ್ವ ಒಳ ಹೊಕ್ಕಲು ಸಾಧ್ಯ: ಶಂಕರ್‌ ದೇವನೂರು
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಮೀರಿದ, ಕುಲ ಮೀರಿದ, ಭಿನ್ನತೆ ಮೀರಿದ ಬದುಕು ನಮ್ಮದಾದಾಗ ಮಾತ್ರ ಬಸವಾದಿ ಶರಣರ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ಕನ್ನಡಪ್ರಭ ವಾರ್ತೆ ನಂಜನಗೂಡು

ಜಾತಿ, ಕುಲ, ಭಿನ್ನತೆ ಮೀರಿದ ಜೀವನ ನಮ್ಮದಾಗಿಸಿಕೊಂಡಾಗ ಮಾತ್ರ ಬಸವಾದಿ ಶರಣರ ತತ್ತ್ವಗಳು ನಮ್ಮ ಒಳಹೊಕ್ಕಲು ಸಾಧ್ಯ ಎಂದು ಆಧ್ಯಾತ್ಮ ಚಿಂತಕ ಶಂಕರ್ ದೇವನೂರು ಹೇಳಿದರು.

ವಿದ್ಯಾನಗರ ಬಡಾವಣೆಯಲ್ಲಿ ಕದಲಿ ಮಹಿಳಾ ವೇದಿಕೆ ಹಾಗೂ ಗಂಗಾಬಿಕೆ ಮಹಿಳಾ ಬಗಳದ ವತಿಯಿಂದ ಭಾನುವಾರ ಸಂಜೆ ನಡೆದ ಅಕ್ಕ, ಅಲ್ಲಮ, ಬಸವ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಮೀರಿದ, ಕುಲ ಮೀರಿದ, ಭಿನ್ನತೆ ಮೀರಿದ ಬದುಕು ನಮ್ಮದಾದಾಗ ಮಾತ್ರ ಬಸವಾದಿ ಶರಣರ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. 12ನೇ ಶತಮಾನದಲ್ಲಿ ವೈಜ್ಞಾನಿಕ, ಆಧ್ಯಾತ್ಮಿಕ, ಸೃಜನಶೀಲತೆ, ನೈತಿಕತೆ ಬಲವಾಗಿತ್ತು. ಪ್ರಸ್ತುತ ದಿನಗಳಲ್ಲಿ ಅವೆಲ್ಲವೂ ಕುಸಿಯುತ್ತಿವೆ. ಮಾತಿನ ಮಂಟಪದಿಂದ ಶರಣ ಧರ್ಮ ಉಳಿಸಲು ಸಾಧ್ಯವಿಲ್ಲ. ನಮ್ಮ ನಡೆ ನುಡಿಯಲ್ಲಿ ಶರಣ ಚಿಂತನೆಗಳು ಹಾಸುಹೊಕ್ಕಬೇಕು. ನೋಡುವ ನೋಟ, ಆಡುವ ಮಾತು, ಕಾಣುವ ಭಾವ ಶುದ್ಧವಾಗಿರಬೇಕು ಎಂದರು.

ಮಾತು ಕಾಯಬೇಕೇ ಹೊರತು ಕೊಲ್ಲಬಾರದು. ಆಸೆ, ಆಮಿಷಗಳಿಗೆ ಬಲಿಯಾಗುವುದನ್ನು ಬಿಟ್ಟರೆ ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದರು.

12ನೇ ಶತಮಾನ ಜಾತಿ, ಲಿಂಗ, ವರ್ಗ, ಕಾಯಕ ಬೇಧವಿಲ್ಲದ ಕಲ್ಯಾಣ ರಾಜ್ಯವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ಕೊಟ್ಟಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಭುಗಳು ಪ್ರಜೆಗಳಂತೆ ಬಾಳ್ವಿಕೆ ಮಾಡಬೇಕೆ ಹೊರತು ಆಳ್ವಿಕೆ ಮಾಡಬಾರದು ಎಂಬ ನೈತಿಕ ಪ್ರಜ್ಞೆಯನ್ನು ಶರಣರು ಮೂಡಿಸಿದ್ದರು. ಇಂಗ್ಲೆಂಡಿನ ಸಂಸತ್ ಸಭಾಪತಿಯಾಗಿದ್ದ ಜಾನ್ ಬಾರ್ಕೆ ಬಸವಣ್ಣ ಅವರ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಸಂವಿಧಾನದ ಆಶಯಗಳೂ ಕೂಡ ಶರಣರ ವಚನಗಳ ಆಶಯಗಳೇ ಆಗಿವೆ ಎಂದರು.

ಇಡೀ ಜಗತ್ತು ಕಾಯಕ ತತ್ತ್ವದ ಮೇಲೆ ನಿಂತಿದೆ. ಕಾಯಕವನ್ನೇ ಮೂಲದ್ರವ್ಯವಾಗಿಸಿಕೊಂಡು ತತ್ವಾದರ್ಶಗಳನ್ನು ಜಗತ್ತಿಗೆ ಸಾರಿದವರು ಬಸವಣ್ಣ. ಜನಸಾಮಾನ್ಯರು ಆಡುವ ನುಡಿಗಳಲ್ಲೇ ತತ್ವಗಳನ್ನು ಸಾರಿ ಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಭಾಷೆಯನ್ನು ಸಾಕ್ಷಾತ್ಕಾರಗೊಳಿಸಿದ ಬಸವಣ್ಣ ಈ ನೆಲದ ಅಸ್ಮಿತೆ. ಗುಡಿಸಲಿನಲ್ಲಿ ಹುಟ್ಟಿ ಬಂಗಲೆಯಲ್ಲಿ ಸಾಯುವುದು ಜೀವನವಲ್ಲ. ಗುಡಿಸಲಿನಲ್ಲಿ ಹುಟ್ಟಿ ಚರಿತ್ರೆ ಸೃಷ್ಟಿಸುವುದು ಜೀವನ. ಅದರಂತೆ ಆಸೆ, ಆಮಿಷಗಳಿಗೆ ಬಲಿಯಾಗದೇ ಸಮ ಸಮಾಜ ನಿರ್ಮಾಣ ಮಾಡುವ ಕನಸು ಹೊತ್ತಿದ ಶರಣರು ಸರ್ವಕಾಲಕ್ಕೂ ಜೀವಂತವಾಗಿದ್ದಾರೆ ಎಂದು ಅವರು ಹೇಳಿದರು.

ಕದಳಿ ಮಹಿಳಾ ವೇದಿಕೆ ಸಂಸ್ಥಾಪಕ ಕಲ್ಮಹಳ್ಳಿ ನಟರಾಜು ಮಾತನಾಡಿ, ಕಾಯಕ, ದಾಸೋಹ, ಆಧ್ಯಾತ್ಮಿಕ ಶರಣರನ್ನು ನಾಡಿಗೆ ನೀಡಿದ ಕೀರ್ತಿ ಮೈಸೂರು ಜಿಲ್ಲೆಗೆ ಸಲ್ಲುತ್ತದೆ. ತ್ರಿವಿಧ ದಾಸೋಹ, ಕಾಯಕ ಕಲ್ಪನೆಯನ್ನು ಅನುಸರಿಸಿಕೊಂಡು ಬರುತ್ತಿರುವ ದೇವನೂರು ಮಠ, ಸುತ್ತೂರು ಮಠ, ಗುರುಕಂಬಳೀಶ್ವರ ಮಠಗಳ ಸೇವೆ ಅನನ್ಯ. ಈ ಮಠಗಳಲ್ಲಿ ಶತಮಾನಗಳಿಂದ ಹಚ್ಚಿದ ಜ್ಞಾನ, ದಾಸೋಹ ದೀವಿಗೆ ಪಸರಿಸುತ್ತಲೇ ಇದೆ ಎಂದರು.

ಕಾರ್ಯಕ್ರಮದಲ್ಲಿ ಚೂಡಾಮಣಿ ಅವರು ವಚನ ಗಾಯನ ನಡೆಸಿಕೊಟ್ಟರು. ಈ ವೇಳೆ ಬಸವ ಭೂಷಣ ಪ್ರಶಸ್ತಿಗೆ ಭಾಜನರಾದ ಕಲ್ಮಹಳ್ಳಿ ನಟರಾಜು ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಅಧ್ಯಕ್ಷೆ ಮೀನಾಕ್ಷಿ ನಂದಿನಿ, ಕಾರ್ಯದರ್ಶಿ ಸುಮಾವತಿ, ಸದಸ್ಯರಾದ ಗೀತಾ, ಬೇಬಿ, ಪವಿತ್ರಾ, ಮಂಜುಳಾ, ಶೋಭಾ, ಸುಜಾತಾ, ಅನುರಾಗ ಮಕ್ಕಳ ಮನೆ ಸಂಸ್ಥಾಪಕ ಡಿ.ಜಿ. ಸೋಮಶೇಖರಮೂರ್ತಿ, ಶಿವಲಿಂಗಪ್ಪ, ಗುರುಮಲ್ಲಪ್ಪ ಮೊದಲಾದವರು ಇದ್ದರು.