ಚನ್ನಪಟ್ಟಣ: ಆದಿಚುಂಚನಗಿರಿ ಮಠ ರಾಷ್ಟ್ರ ಹಾಗೂ ರಾಜ್ಯ ಆಳುವವರನ್ನು ಸೃಷ್ಟಿ ಮಾಡುತ್ತದೆಯೇ ಹೊರತು, ರಾಜಕಾರಣ ಮಾಡುವುದಿಲ್ಲ. ನಮ್ಮದು ಶುದ್ಧ ಆಧ್ಯಾತ್ಮಿಕ ಮಠ. ರಾಜಕಾರಣದ ಕೊಂಚ ಸೊಕ್ಕು ಕೂಡ ಇಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸ್ಪಷ್ಟಪಡಿಸಿದರು.
ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜೋಗಿಗಳ ಸಮಾವೇಶ ಹಾಗೂ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರು ಸಿಎಂ ಆಗುವ ಮುಂಚೆಯೇ ಅವರ ಮನೆತನ ರಾಜಕಾರಣದಲ್ಲಿದೆ. ಆದರೆ, ಆದಿಚುಂಚನಗಿರಿ ಮಠ ಎಂದಾದರೂ ರಾಜಕಾರಣ ಪ್ರವೇಶ ಮಾಡಿದ್ದನ್ನು ನೋಡಿದ್ದೀರಾ? ಅವರಿಗೂ ನಮಗೂ ವ್ಯತ್ಯಾಸ ಇಷ್ಟೇ. ಎಂದೂ ಕೂಡ ಆ ಆಲೋಚನೆಯೇ ಬೇಡ ಎಂದು ಹೇಳಿದರು.ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಸಿಎಂ ಆದಾಗ ಇಲ್ಲಿ ಯಾಕೆ ಚುಂಚನಗಿರಿ ಶ್ರೀಗಳು ಸಿಎಂ ಆಗಬಾರದು ಎಂಬ ಚರ್ಚೆ ಆರಂಭವಾಯಿತು. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಅದು ಅವರ ಪರಂಪರೆ. ಆದರೆ, ನಮ್ಮ ಪೀಠ ಕೇವಲ ಧಾರ್ಮಿಕ ಪರಂಪರೆ ಹಾದಿಯಲ್ಲಿ ಮಾತ್ರ ಸಾಗಿ ಬಂದಿದೆ. ಮುಂದೆ ಅದರ ದಾರಿಯಲ್ಲಿಯೇ ಶ್ರೀ ಮಠ ಸಾಗುತ್ತದೆ. ನಾಥ ಪರಂಪರೆಯನ್ನು ಸಾರುತ್ತಿರುವ ಜೋಗಪ್ಪಗಳು ಕಾಲಭೈರವನ ಮಕ್ಕಳು. ನೀವು ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ ಜೊತೆಜೊತೆಗೆ, ಜನರಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಮೂಡಿಸಬೇಕು. ಶ್ರೀ ಮಠಕ್ಕೆ ಜೋಗಪ್ಪಗಳು ಅಡಿಪಾಯ. ಕೇವಲ ತಮ್ಮ ಕುಟುಂಬದ ಹಿರಿಮಗನಿಗೆ ಕಿವಿ ಚುಚ್ಚಿಸಿ ಜೋಗಪ್ಪನನ್ನು ಬಿಡುವುದಷ್ಟೇ ನಿಮ್ಮ ಕೆಲಸವಲ್ಲ. ನಿಮ್ಮ ಮಕ್ಕಳನ್ನು ಮಠಕ್ಕೂ ತಂದು ಬಿಡಿ ಎಂದು ಕರೆನೀಡಿದರು.
ಅಹಂಕಾರ ಎಂಬುದು ದೊಡ್ಡ ಕ್ಯಾನ್ಸರ್. ಅಹಂಕಾರ ಎಂಬುದು ವ್ಯಕ್ತಿಗೆ ಅಂಟಿದ ದೊಡ್ಡ ಶಾಪ. ಅಹಂಕಾರವೆಂಬುದು ಮನುಷ್ಯನನ್ನು ಭಗವಂತನಿಂದ ದೂರ ಮಾಡುತ್ತದೆ. ಕ್ಯಾನ್ಸರ್ ಗುಣಪಡಿಸಬಹುದು. ಆದರೆ, ಅಹಂಕಾರ ತಲೆಗೇರಿದರೆ ಗುಣಪಡಿಸುವುದು ಕಷ್ಟಸಾಧ್ಯ. ಮನಸ್ಸು ಶುದ್ಧವಾಗಿರಬೇಕು. ಹಾಗಾದರೆ ಮಾತ್ರ ಬದುಕಿಗೊಂದು ಅರ್ಥ ಎಂದರು.ಚಾಮುಂಡೇಶ್ವರಿ ಪ್ರತಿಮೆಗೆ ಮೆಚ್ಚುಗೆ:
ಈ ಕ್ಷೇತ್ರದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ದೇವಿಯ ಮಹಿಮೆಗೆ ಇಲ್ಲಿಗೆ ಬರುವ ಭಕ್ತರೇ ಸಾಕ್ಷಿ. ಕ್ಷೇತ್ರದ ಧರ್ಮದರ್ಶಿಗಳಾದ ಮಲ್ಲೇಶ್ ಗೂರೂಜಿಯವರು ಶ್ರಮಪಟ್ಟು ಅದ್ಭುತ ಕ್ಷೇತ್ರವನ್ನು ನಿರ್ಮಿಸಿದ್ದಾರೆ. ಕ್ಷೇತ್ರಕ್ಕೆ ಆಗಮಿಸಿರುವುದು ನನಗೆ ಸಂತಷ ತಂದಿದೆ. ಕಾರ್ಯಕ್ರಮದ ಅಂಗವಾಗಿ ಕಾಲಬೈರವನ ಆರಾಧಕರಾದ ಜೋಗಿಗಳ ಸಮಾವೇಶ ನಡೆಸಿರುವುದು ಉತ್ತಮ ಕಾರ್ಯ. ಶ್ರೀ ಕ್ಷೇತ್ರವನದಲ್ಲಿನ ದೇವಾಲಯ ನಿರ್ಮಾಣ, ವಾಸ್ತುಶಿಲ್ಪ ಹಾಗೂ ತಾಯಿಯ ಬೃಹತ್ ಪ್ರತಿಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿರುವ ಪರಂಪರೆ ಮ್ಯೂಜಿಯಂ ಅನ್ನು ವೀಕ್ಷಣೆ ಮಾಡಿದ ಶ್ರೀಗಳು, ಮ್ಯೂಜಿಯಂನಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಪ್ರತಿಮೆಗಳ ಜೊತೆ ತಮ್ಮದೇ ಮೂರ್ತಿ ಕಂಡು ಪುಳಕಿತಗೊಂಡರು.
ರಾಮನಗರ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ಗೌಡಗೆರೆ ಕ್ಷೇತ್ರಕ್ಕೆ ಶ್ರೀಗಳು ಆಗಮಿಸಬೇಕು ಎಂಬುದು ಎಲ್ಲರ ಆಶಯವಾಗಿತ್ತು. ಈ ದಿನ ಆ ಆಶಯ ಈಡೇರಿದೆ. ಚುಂಚನಗಿರಿ ಮಠ ಬೇರೆ ಅಲ್ಲ ಗೌಡಗೆರೆ ಕ್ಷೇತ್ರ ಬೇರೆಯಲ್ಲ ಎಂದರು.ಅದ್ದೂರಿ ಸ್ವಾಗತ: ಇದೇ ಮೊಟ್ಟಮೊದಲ ಬಾರಿಗೆ ಗೌಡಗೆರೆ ಕ್ಷೇತ್ರಕ್ಕೆ ಆಗಮಿಸಿದ ಚುಂಚಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ನೂರಾರು ಜೋಗಪ್ಪಗಳು, ವಿವಿಧ ಕಲಾತಂಡಗಳು ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ತಾಯಿ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಕ್ಷೇತ್ರದಿಂದ ಶ್ರೀಗಳಿಗೆ ಪುಷ್ಪಾಭಿಷೇಕ ಮಾಡಿ ಗುರುವಂದನೆ ಸಲ್ಲಿಸಲಾಯಿತು.
ಗೌಡಗೆರೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ, ಹಾಸನ ಮಠದ ಶ್ರೀ ಶಂಭೂನಾಥ ಸ್ವಾಮೀಜಿ, ನಾರಾಯಣ ಧಾಮದ ಶ್ರೀ ಸಾಯಿಕೀರ್ತಿನಾಥ ಸ್ವಾಮೀಜಿ, ಮಂಡ್ಯದ ಸಂಕೀರ್ತಿನಾಥ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಒಕ್ಕಲಿಗರ ಸಂಘದ ನಿರ್ದೇಶಕರಾದ ಎಚ್.ಸಿ.ಜಯಮುತ್ತು, ಚಕ್ಕೆರೆ ವೆಂಕಟರಾಮೇಗೌಡ, ಜಿಪಂ ಮಾಜಿ ಸದಸ್ಯ ಸಿ.ಪಿ.ರಾಜೇಶ್, ಮುಖಂಡರಾದ ರಮೇಶ್ ಗೌಡ, ಗೋವಿಂದನಹಳ್ಳಿ ನಾಗರಾಜು, ರಾಂಪುರ ಧರಣೇಶ್, ಸಿ.ಪುಟ್ಟಸ್ವಾಮಿ, ಗರಕಹಳ್ಳಿ ಕೃಷ್ಣೇಗೌಡ, ರಾಧಿಕಾರವಿಕುಮಾರ್ ಗೌಡ ಇತರರು ಉಪಸ್ಥಿತರಿದ್ದರು.ಪೊಟೋ೧೮ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜೋಗಿಗಳ ಸಮಾವೇಶ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು.