ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಆದಿವಾಲ ರೈತರ ಧರಣಿ

| Published : Apr 30 2024, 02:01 AM IST

ಸಾರಾಂಶ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೋಮವಾರ ಆದಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹಿರಿಯೂರು: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೋಮವಾರ ಆದಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವವಹಿಸಿದ್ದ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ತಾಲೂಕಿನಾದ್ಯಂತ 41 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನವಿದ್ದು, ರೈತರು ಬೆಳೆದಿರುವ ಅಡಕೆ, ತೆಂಗು ಮತ್ತು ಇತರೆ ತೋಟಗಾರಿಕೆ ಬೆಳೆಗಳು ಬಿಸಿಲಿನ ತಾಪಮಾನಕ್ಕೆ ಸುಳಿಗಳು ಬೆಂದು ಹೋಗುತ್ತಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಬೆಳೆಗಳನ್ನು ಕಾಪಾಡಿಕೊಳ್ಳಲು ನೀರು ಹರಿಸಲು ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಹೀಗಿರುವಾಗ ರೈತರಿಗೆ ಸಮರ್ಪಕ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸುವಂತೆ ಒತ್ತಾಯಿಸುತ್ತಿದ್ದೇವೆ ಎಂದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಪೀರ್‌ಸಾಬ್ ಮಾತನಾಡಿ, ಇಂದಿನಿಂದಲೇ ಆದಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ತನ್ನು ಸಮರ್ಪಕವಾಗಿ ಪೂರೈಸಲು ಕ್ರಮಕೈಗೊಳ್ಳಲಾಗುತ್ತದೆ. ನೂತನವಾಗಿ ಆರಂಭವಾಗುತ್ತಿರುವ ಕೆಆರ್ ಹಳ್ಳಿ ಸಬ್‌ಸ್ಟೇಷನ್ ಇನ್ನು 10-12 ದಿನಗಳ ಒಳಗಾಗಿ ಪ್ರಾರಂಭವಾಗಲಿದ್ದು, ರೈತರ ಪಂಪ್‌ಸೆಟ್‌ಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ವಿದ್ಯುತ್ ಸಿಗಲಿದೆ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಉಪಾಧ್ಯಕ್ಷ ಅನ್ಸರ್ ಅಲಿ, ಆದಿವಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂದಿಹಳ್ಳಿ ಶ್ರೀಧರ್, ಮಂಜುನಾಥ, ಸುಧಾಮ, ತಿಪ್ಪೇಸ್ವಾಮಿ, ಚಿನ್ನಸ್ವಾಮಿ, ಅಪ್ಪಿ ಶ್ರೀನಿವಾಸ್, ರಾಮಸ್ವಾಮಿ, ತಿಪ್ಪೇಸ್ವಾಮಿ, ರಂಗಸ್ವಾಮಿ ಮುಂತಾದ ರೈತರು ಭಾಗವಹಿಸಿದ್ದರು.