ಮುಖ್ಯಮಂತ್ರಿ ಸೂಚನೆಯಂತೆ ಜನರ ಮನೆ ‘ಬಾಗಿಲಿಗೆ ಆಡಳಿತ’ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಂದು ಸಾರ್ವಜನಿಕರ ಮನವಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ತ್ವರಿತವಾಗಿ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಮತ್ತು ಪರಿಹಾರದ ಮಾಹಿತಿಯನ್ನು ಅರ್ಜಿ ದಾರರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಮುಖ್ಯಮಂತ್ರಿ ಸೂಚನೆಯಂತೆ ಜನರ ಮನೆ ‘ಬಾಗಿಲಿಗೆ ಆಡಳಿತ’ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಂದು ಸಾರ್ವಜನಿಕರ ಮನವಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ತ್ವರಿತವಾಗಿ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಮತ್ತು ಪರಿಹಾರದ ಮಾಹಿತಿಯನ್ನು ಅರ್ಜಿ ದಾರರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು.

ಜಿಲ್ಲೆ ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಅಲ್ಲಿನ ತಾಲೂಕು ಆಡಳಿತ, ತಾಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರಜಾಸೇವಾ ಆಂದೋಲನ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು. ಸಾರ್ವಜನಿಕರ ಕುಂದುಕೊರತೆ ಗಳನ್ನು ಬಗೆಹರಿಸಿ, ಅವರ ಮನೆಬಾಗಿಲಿಗೇ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮವು ಲಿಂಗಸುಗೂರು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಪ್ರಜಾಸೇವಾ ಆಂದೋಲನವು ಸತತ ಮೂರನೇ ಶನಿವಾರವೂ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ತೀವ್ರ ಬರಗಾಲ ಆವರಿಸಿದ್ದು, ಈಗಾಗಲೇ ಸರಕಾರದಿಂದ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಬರ ಪರಿಹಾರಕ್ಕಾಗಿ ಬೆಳೆ ಕಟಾವು ಪ್ರಯೋಗಗಳು ಹಾಗೂ ಇತರ ಸಂಬಂಧಿತ ಪರಿಹಾರ ಕಾರ್ಯಗಳನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಯುತ್ತಿವೆ ಎಂದು ತಿಳಿಸಿದರು.

ಲಿಂಗಸುಗೂರು ಭಾಗದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಆರ್‌ಡಿಪಿಆರ್, ಪೊಲೀಸ್ ಇಲಾಖೆ, ವಿದ್ಯಾರ್ಥಿ ನಿಲಯಗಳು ಸೇರಿದಂತೆ ವಿವಿಧ ಹಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಮತ್ತು ವೈಯಕ್ತಿಕ ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಪ್ರತಿಯೊಂದು ಸಮಸ್ಯೆಯನ್ನು ಸಾರ್ವಜನಿಕರು ಈ ಆಂದೋಲನ ಕಾರ್ಯಕ್ರಮದ ಮೂಲಕ ನಮಗೆ ಸಲ್ಲಿಸಬೇಕು ಎಂದರು.

ಜಿಪಂ ಸಿಇಒ ಈಶ್ವರ್ ಕಾಂದೂ ಮಾತನಾಡಿ, ಈ ಹಿಂದೆ ಮಾನ್ವಿ ತಾಲೂಕಿನಲ್ಲಿ ಅಭಿಯಾನ ನಡೆಸಿದ ನಂತರ, ಇಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಉನ್ನತಾಧಿಕಾರಿಗಳು ಲಿಂಗಸುಗೂರು ತಾಲೂಕಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಮತ್ತು ಸಮಸ್ಯೆಗಳಿಗೆ ಸ್ಪಂದಿಸಲು ಆಗಮಿಸಿದ್ದಾರೆ. ಲಿಂಗಸುಗೂರು ತಾಲೂಕಿನಲ್ಲಿ ಒಟ್ಟು 30 ಗ್ರಾಮ ಪಂಚಾಯಿತಿಗಳಿದ್ದು, ದೇಶ ಪ್ರಸಿದ್ಧ ಹಟ್ಟಿ ಚಿನ್ನದ ಗಣಿ ಹಾಗೂ ಜಲಧಾರೆ ಯೋಜನೆಯ ಮುಖ್ಯ ಘಟಕಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಲಧಾರೆ ಯೋಜನೆಯಡಿ ಜಿಲ್ಲೆಯ 1,400ಕ್ಕೂ ಹೆಚ್ಚು ವಸತಿ ಪ್ರದೇಶಗಳು ಮತ್ತು 7 ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರು ಪೂರೈಸುವ ‘ಡಬ್ಲ್ಯೂಟಿಪಿ’ ಮತ್ತು ಮುಖ್ಯ ಮೂಲಗಳು ಲಿಂಗಸುಗೂರಿನಲ್ಲಿವೆ ಎಂದರು.

ತಾಲೂಕಿನಲ್ಲಿ ಆರೋಗ್ಯ, ಅಪೌಷ್ಟಿಕತೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಹೆಚಾಗಿವೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಮಳೆ ಅಭಾವದಿಂದ ಬರ ಪೀಡಿತ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಂಚಾಯಿತಿ ಮಟ್ಟದಲ್ಲಿ ಪರಿಶೀಲಿಸಿದಾಗ ಹಲವಾರು ಸಮಸ್ಯೆಗಳು ಬೆಳಕಿಗೆ ಬಂದಿವೆ. ಸಾರ್ವಜನಿಕರ ಅರ್ಜಿಗಳು ಮತ್ತು ಕುಂದು ಕೊರತೆಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅಹವಾಲನ್ನು ಗಂಭೀರವಾಗಿ ಪರಿಗಣಿಸಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಬಗೆಹರಿಯಬೇಕಾದ ವಿಷಯಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜಾರಿ, ಲಿಂಗಸುಗೂರು ಸಹಾಯಕ ಆಯುಕ್ತ ನಾಗೇಂದ್ರ ಬಾಬು ಕುಮಾರ್, ತಹಸೀಲ್ದಾರ್ ಸತ್ಯಮ್ಮ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ವೆಂಕಟೇಶ ಗುತ್ತೇದಾರ ಸೇರಿ ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಇದ್ದರು.

---

ಲೀಡ್‌ ಗೆ ಬಾಕ್ಸ್...

ರೈತರಿಗೆ ವಿವಿಧ ಕೃಷಿ

ಸಲಕರಣೆಗಳ ವಿತರಣೆ

ಪ್ರಜಾಸೇವಾ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ಅರ್ಹ ರೈತರಿಗೆ ಕ್ರಿಮಿ ನಾಶಕ ಸಿಂಪಡಿಸುವ ಮಿಷನ್, ಹೊಲ ಬಿತ್ತನೆ ಸಾಮಗ್ರಿಗಳು, ರೂಟರ್, ನೀರಿನ ಪೈಪ್ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಲಾಯಿತು. ಇದಕ್ಕೂ ಮುಂಚೆ ವೇದಿಕೆ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

----

ವಿವಿಧ ಮಳಿಗೆಗೆ ಚಾಲನೆ

ಲಿಂಗಸುಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರಜಾಸೇವಾ ಆಂದೋಲನ ಸಭೆಯ ಅಂಗವಾಗಿ ವಿವಿಧ ಇಲಾಖೆಯಗಳ ಸಹಯೋಗ ದೊಂದಿಗೆ ಸ್ಥಾಪಿಸಲಾಗಿದ್ದ ವಿವಿಧ ಮಳಿಗೆಗಳಿಗೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಭೇಟಿ ನೀಡಿದರು. ವಿವಿಧ ಇಲಾಖೆಗಳಾದ ಆಹಾರ, ಅಗ್ನಿ ಶಾಮಕದಳ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಖಜಾನೆ, ಅಬಕಾರಿ ಇಲಾಖೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಪಶುಪಾಲನೆ ಇಲಾಖೆ, ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಯುವನಿಧಿ, ಉಪ ನೋಂದಣಿ ಕಚೇರಿ ಲಿಂಗಸುಗೂರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಭೂ ಮಾಪನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ಸ್ಥಾಪಿಸಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

---

19ಕೆಪಿಆರ್‌ಸಿಆರ್‌ 01: ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಡಿಸಿ ಪೂವಿತಾ ಎಸ್‌. ಮಾತನಾಡಿದರು.