ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಸಂಘ ಹಾಗೂ ಬಿ.ಜಿ.ದಾಸೇಗೌಡ ಕುಟುಂಬ ವರ್ಗದ ಸಹಯೋಗದಲ್ಲಿ ಮೇ 15ರಂದು ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಆಡಳಿತ ತಜ್ಞ ಬಿ.ಜಿ.ದಾಸೇಗೌಡ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾರಂಭ ನಡೆಯಲಿದೆ ಎಂದರು.
ಕೃಷಿಕ್ ಫೌಂಡೇಶನ್ ಅಧ್ಯಕ್ಷ ಟಿ.ತಿಮ್ಮೇಗೌಡ ಕೃತಿ ಬಿಡುಗಡೆ ಮಾಡುವರು. ಬಿಜಿ ದಾಸೇಗೌಡರ ಕುರಿತು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡುವರು. ಸಮಾರಂಭದಲ್ಲಿ ಬಿ.ಜಿ.ದಾಸೇಗೌಡರ ಹಿರಿಯ ಪುತ್ರ ಬಿ.ಮೋಹನದಾಸ, ರೈತ ಮುಖಂಡ ಕೆ.ಬೋರಯ್ಯ, ಕೃತಿ ಕರ್ತೃ ಲೋಕೇಶ್ ಚಂದಗಾಲು ಆಗಮಿಸುವರು ಎಂದರು.ಬಿ.ಜಿ.ದಾಸೇಗೌಡ ಪರಿಚಯ:
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಬಿ.ಜಿ. ದಾಸೇಗೌಡರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಮುಗಿಸಿ, ಮೈಷುಗರ್ ಕಾರ್ಖಾನೆಗೆ ಕೆಮಿಸ್ಟ ಆಗಿ ಕೆಲಸಕ್ಕೆ ಸೇರಿ ನಂತರ 16 ವರ್ಷಗಳ ಸುದೀರ್ಘ ಸೇವೆ, ಜನರಲ್ ಮ್ಯಾನೇಜರ್ ಆಗಿ ಗಣನೀಯ ಸೇವೆ ಸಲ್ಲಿಸಿದ್ದರು ಎಂದರು.ಶ್ರೀಯುತರು ತಮ್ಮ ಅವಧಿಯಲ್ಲಿ ಕೈಗೊಂಡ ಆಡಳಿತಾತ್ಮಕ ಸುಧಾರಣಾ ಕ್ರಮ, ರೈತರು ಹಾಗೂ ನೌಕರರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಹತ್ತು ಹಲವು ಯೋಜನೆಗಳು, ಲಂಡನ್, ಜರ್ಮನಿ, ಕ್ಯೂಬಾದಂತಹ ವಿದೇಶಗಳಿಗೆ ತೆರಳಿ ಕಬ್ಬಿನಿಂದ ಸಕ್ಕರೆ ಉತ್ಪಾದಿಸುವ ಕುರಿತಾಗಿ ತರಬೇತಿ ಪಡೆದು, ಕಾರ್ಖಾನೆಗೆ ಆಧುನಿಕ ಸ್ಪರ್ಶ ನೀಡಿ, ಕನ್‌ಫೆಕ್ಷನರಿ ಘಟಕ ಪ್ರಾರಂಭಿಸಿ, ಗೋಲ್ಡನ್ ಸಿರಪ, ಪೆಪ್ಪರ್‌ಮೆಂಟ, ಗ್ಲುಕೋಸ, ಕಲ್ಲುಸಕ್ಕರೆಯಂತಹ ಸಿಹಿ ಪದಾರ್ಥಗಳನ್ನು ತಯಾರಿಸಿ ಮೈಸ್ವೀಟ್ ಬ್ರಾಂಡ್‌ನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು ಎಂದರು.
ಗುಣಮಟ್ಟದ ಸಕ್ಕರೆ ಉತ್ಪಾದನೆ, ಡಿಸ್ಟಿಲರಿ ಫಟಕದ ಮೂಲಕ ವಿವಿಧ ಬ್ರಾಂಡ್‌ನ ಗುಣಮಟ್ಟದ ಮದ್ಯ ತಯಾರಿಕೆ ಮೊದಲಾದ ಉಪ ಉತ್ಪನ್ನಗಳನ್ನು ತಯಾರಿಸಿ ಮೈಷುಗರ್‌ನ್ನು ಲಾಭದಾಯಕವಾಗಿ ಮುನ್ನಡೆಸಿದ ಕೀರ್ತಿ ಬಿ.ಜಿ.ದಾಸೇಗೌಡರಿಗೆ ಸಲ್ಲುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಕೆ.ಬೋರಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಪದಾಧಿಕಾರಿಗಳಾದ ತಗ್ಗಹಳ್ಳಿ ವೆಂಕಟೇಶ್, ಮಂಜುಳಾ, ಲೋಕೇಶ್ ಚಂದಗಾಲು, ಹನಕೆರೆ ನಾಗಪ್ಪ ಇದ್ದರು.
;Resize=(128,128))
;Resize=(128,128))
;Resize=(128,128))