ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶಾಸಕ ಟಿ.ರಘುಮೂರ್ತಿ ಅಭಿಮತ । ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆಕನ್ನಡಪ್ರಭ ವಾರ್ತೆ ಚಳ್ಳಕೆರೆ
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಸಕರಾತ್ಮಕವಾಗಿ ಸ್ಪಂದಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ನಿರ್ಲಕ್ಷ್ಯತನದ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ಟಿ.ರಘುಮೂರ್ತಿ ನೀವು ಸರಿಯಾಗಿ ಕಾರ್ಯ ನಿರ್ವಹಿಸಿದಿದ್ದರೆ ಅದರ ಪರಿಣಾಮ ಸರ್ಕಾರ ಮೇಲೆ ಬೀರುತ್ತದೆ. ಜನರು ಆಡಳಿತದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಇದರಿಂದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಅಪಕೀರ್ತಿಯಾಗಲಿದ್ದು ಈ ಬಗ್ಗೆ ಅಧಿಕಾರಿ ವರ್ಗ ಗಂಭೀರವಾಗಿ ಚಿಂತನೆ ನಡೆಸಿ ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರಿಗೆ ನೇರವಾಗಿ ತಲುಪಿಸುವ ಕಾರ್ಯಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದವರು. ತ್ರೈ ಮಾಸಿಕ ಸಭೆ ನಡೆಸಿ ನಿಮಗೆ ಮಾರ್ಗದರ್ಶನ ನೀಡುವ ಉದ್ದೇಶ ಆಡಳಿತಯಂತ್ರವನ್ನು ಚುರುಕುಗೊಳಿಸುವುದಾಗಿದೆ. ಪ್ರತಿಯೊಂದು ಹಂತದಲ್ಲೂ ನಾವು ನಿರೀಕ್ಷೆಯಂತೆ ಕೆಲಸ ಮಾಡದೇ ಹೋದರೆ ಜನರ ವಿಶ್ವಾಸವನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಜನಪರ ಕಾರ್ಯಗಳಿಗೆ ಆದ್ಯತೆ ನೀಡಿ ನಿಮ್ಮ ಕರ್ತವ್ಯವನ್ನು ಉತ್ತಮವಾಗಿ ನಡೆಸಿ ಸರ್ಕಾರ ಹಲವಾರು ಜನೋಪಯೋಗಿ ಯೋಜನೆಗಳನ್ನು ಅಧಿಕಾರಿಗಳ ಮುಖಾಂತರವೇ ಕಾರ್ಯಗತಗೊಳಿಸುತ್ತಿದೆ. ಜನರ ವಿಶ್ವಾಸವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮಾಸಬೇಕೆಂದು ಆಗ್ರಹಿಸಿದರು.
ಪ್ರಾರಂಭದಲ್ಲಿ ಕೃಷಿ ಇಲಾಖೆ ಅಧಿಕಾರಿ ರಮೇಶ್ ಮಾಹಿತಿ ನೀಡಿ, ಕಳೆದ 2024-25ನೇ ಅವಧಿಯಲ್ಲಿ ತಾಲೂಕಿನಾದ್ಯಂತ ಶೇ.49ರಷ್ಟು ಬಿತ್ತನೆಯಾಗಿದ್ದು, ಬೆಳೆ ವಿಮೆಗಾಗಿ ೩೬೭೬೬ ರೈತರು ನೊಂದಾವಣೆ ಮಾಡಿಕೊಂಡಿದ್ದು, ಖಾಸಗಿ ಬೆಳೆವಿಮೆ ಕಂಪನಿಯಿಂದ ರೈತರಿಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ. ತೋಟಗಾರಿಕೆ ಅಧಿಕಾರಿ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ 254 ರೈತರು ಬೆಳೆವಿಮೆ ಪಾವತಿಸಿದ್ದು ಅರ್ಜಿ ಸಲ್ಲಿಸಿದ್ದು, ಆಪೈಕಿ 206 ರೈತರಿಗೆ 43 ಲಕ್ಷ ರು. ಪರಿಹಾರ ಹಣದೊರಕಿದೆ ಎಂದು ಮಾಹಿತಿ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಹಿತಿ ನೀಡಿ, ತಾಲೂಕಿನಾದ್ಯಂತ ಒಟ್ಟು ಶಿಥಿಲಗೊಂಡ ಹಾಗೂ ತುರ್ತು ರಿಪೇರಿಯಾಗಬೇಕಾದ ಕಟ್ಟಡಗಳ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಿದ್ದು, ಆಪೈಕಿ ಸರ್ಕಾರ 1.25 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಕಾರ್ಯಕತಗೊಳಿಸಬೇಕಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಮಾಡುವಂತೆ ತಾಕೀತು ಮಾಡಿದರು.
ಸಮಾಜದ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಪರಿಶಿಷ್ಟ ಕಲ್ಯಾಣಾಧಿಕಾರಿ ಶಿವರಾಜ್, ಬಿಸಿಎಂ ಅಧಿಕಾರಿ ರಮೇಶ್ ಇಲಾಖೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಪ್ರತಿನಿತ್ಯ ಹಾಸ್ಟಲ್ ಬಾತ್ ರೂಂ, ಶೌಚಾಲಯದ ಕಿಟಕಿ, ಬಾಗಿಲುಗಳು ಸುವ್ಯವಸ್ಥಿಯವಾಗಿರಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಹಾಸ್ಟಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಎಂದರು.ಕಾರ್ಮಿಕ ಅಧಿಕಾರಿ ಮಾಹಿತಿ ನೀಡಿ, ಇದುವರೆಗೂ ಸುಮಾರು 41194 ಕಾರ್ಮಿಕರ ಕಲ್ಯಾಣ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ ಎಂದರು. ಮೀನುಗಾರಿಕೆ ಅಧಿಕಾರಿ ದೀಪಾಲಿ ಮಾಹಿತಿ ನೀಡಿ, ತಾಲೂಕಿನ ವಿವಿಧ ಚೆಕ್‌ಡ್ಯಾಂಗಳಲ್ಲಿ ಒಂದುಲಕ್ಷಕ್ಕೂ ಹೆಚ್ಚು ಮೀನಿನ ಮರಿಗಳನ್ನು ಕೆರೆಗಳಿಗೆ ಬಿಡಲಾಗಿದೆ ಎಂದರು. ಬೆಸ್ಕಾಂ ಅಧಿಕಾರಿ ಶಿವಪ್ರಸಾದ್, ಕಳೆದ ಕೆಲವು ದಿನಗಳಿಂದ ಸಂಜೆ ವೇಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು ಸರಿಪಡಿಸುವ ಭರವಸೆ ನೀಡಿದರು. ಅಬಕಾರ ಅಧಿಕಾರಿ ಮಾಹಿತಿ ನೀಡಿ, ಈಗಾಗಲೇ ಒಟ್ಟು ೮೪ ಪ್ರಕರಣಗಳನ್ನು ದಾಖಲುಮಾಡಲಾಗಿದ್ದು, ಅನಧಿಕೃತ ಮದ್ಯಮಾರಾಟದ ಬಗ್ಗೆ ಜಾಗೃತಿವಹಿಸಲಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ವಿಭಾಗದ ಅಧಿಕಾರಿ ಧನಂಜಯ ಮಾಹಿತಿ ನೀಡಿ, ತುಂಗಹಿನ್ನೀರು ಯೋಜನೆ ಸಹಕಾರದಿಂದ ಕ್ಷೇತ್ರದಾದ್ಯಂತ ಸಮರ್ಪಕವಾಗಿ ನೀರು ವಿತರಣೆ ಮಾಡಲಾಗುತ್ತಿದೆ. ತಾಲೂಕಿನಾದ್ಯಂತ ೪೭ ಶುದ್ಧ ಕುಡಿಯುವ ನೀರಿನ ಘಟಕಗಳು ದುಸ್ಥಿತಿಯಲ್ಲಿವೆ, ಜೆಜೆಎಂ ಕಾಮಗಾರಿ ಎಂದರು.ಆಹಾರ ಇಲಾಖೆ ಅಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿ, 419 ಕಾರ್ಡ್‌ಗಳು ಮಾತ್ರ ನೊಂದಾವಣೆಯಾಗಬೇಕಿದೆ, ಮಾರ್ಚ್ 10ರೊಳಗೆ ಪೂರೈಸುವಂತೆ ಶಾಸಕರು ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಅಭಾವ ಉಂಟಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಬೇಕು, ಈ ಬಾರಿ ತಾಲೂಕಿನಾದ್ಯಂತ ಚೆಕ್‌ಡ್ಯಾಂಗಳಲ್ಲಿ ನೀರು ದಾಸ್ತಾನಿಗೆ ಹೆಚ್ಚಿನ ತೊಂದರೆಯಾಗದು, ತುಂಗಾ ಹಿನ್ನೀರು ಯೋಜನೆ ಬರುವ ಮಾರ್ಚ್ ಅಂತ್ಯದೊಳಗೆ ಕ್ಷೇತ್ರದಕೆರೆಗೆ ಬಂದು ಸೇರಲಿದೆ. ಆದ್ದರಿಂದ ಯಾವ ಭಾಗದಲ್ಲೂ ಹೊಸದಾಗಿ ಬೋರ್‌ಕೊರೆಸದಂತೆ ಸೂಚಿಸಿದರು.
ತಹಸೀಲ್ದಾರ್ ರೇಹಾನ್‌ಪಾಷ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ.ಬಿ.ಮಂಜುನಾಥ, ಇಒ ಎಚ್.ಶಶಿಧರ, ರವಿಕುಮಾರ್, ಪೌರಾಯುಕ್ತೆ ಡಾ.ನಾಗವೇಣಿ, ಡಿವೈಎಸ್‌ಪಿ ಎಂ.ಜಿ.ಸತ್ಯನಾರಾಯಣ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕೆಡಿಪಿ ಸದಸ್ಯರಾದ ವಿಶ್ವನಾಥರೆಡ್ಡಿ, ಸುರೇಶ್, ಅಂಗಡಿಮರೇಶ್, ನೇತ್ರಾವತಿ, ಜಾಕೀರ್ ಹುಸೇನ್, ಬಸವರಾಜು ಮುಂತಾದವರು ಉಪಸ್ಥಿತರಿದ್ದರು.