ಗ್ರಾಮೀಣ ಕ್ಷೇತ್ರದ ವಿವಿಧೆಡೆ ಬೆಳೆ ಹಾನಿಯನ್ನು ವೀಕ್ಷಣೆ ಮಾಡಿದ ಅಶೋಕ್, ಕಾರೇಕಲ್ಲು ಗ್ರಾಮದ ಬಳಿಯ ರೈತರ ಹೊಲಗಳನ್ನು ವೀಕ್ಷಣೆ ಮಾಡಿದರು.

ಬಳ್ಳಾರಿ: ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ರೈತರ ಜೊತೆ ಮಾತನಾಡಿಲ್ಲ, ಚರ್ಚಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತ ಅವರು ಹಾಗೂ ಬಿಜೆಪಿ ನಾಯಕರು ರೈತರ ಹೊಲದಲ್ಲಿಯೇ ಕೆಲ ಕಾಲ ಕುಳಿತು ಧರಣಿ ನಡೆಸಿದರಲ್ಲದೇ ರೈತರ ಜೊತೆ ಚರ್ಚಿಸಿ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಕುರಿತು ಪ್ರತಿಭಟಿಸಿದ ಘಟನೆ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಾರೇಕಲ್ಲು ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮೀಣ ಕ್ಷೇತ್ರದ ವಿವಿಧೆಡೆ ಬೆಳೆ ಹಾನಿಯನ್ನು ವೀಕ್ಷಣೆ ಮಾಡಿದ ಅಶೋಕ್, ಕಾರೇಕಲ್ಲು ಗ್ರಾಮದ ಬಳಿಯ ರೈತರ ಹೊಲಗಳನ್ನು ವೀಕ್ಷಣೆ ಮಾಡಿದರು. ಆದರೆ, ನಮ್ಮೊಂದಿಗೆ ಮಾತನಾಡಲಿಲ್ಲ. ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ, ಪರಿಹಾರ ಸೂಚಿಸಿಲ್ಲ, ಹಾಗೆಯೇ ಹೊರಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತ್ತ ಬಿಜೆಪಿ ಮುಖಂಡರು, ರೈತರೊಂದಿಗೆ ಕೆಲ ಹೊತ್ತು ಚರ್ಚಿಸಿದರಲ್ಲದೆ, ಬಳಿಕ ರೈತರ ಹೊಲದಲ್ಲಿಯೇ ಕುಳಿತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಕುರಿತು ಪ್ರತಿಭಟನೆ ನಡೆಸಿದರು.

ಮಳೆಯಿಲ್ಲದೇ ಬಳ್ಳಾರಿ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಭಾಗಶಃ ಕುಸಿದಿದೆ. ರೈತರು ಸಾಕಷ್ಟು ಸಾಲ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡಿದ್ದಾರೆ. ಇಷ್ಟಾಗಿಯೂ ಅಧಿಕಾರಿಗಳು ಕೃಷಿಕರ ಸಂಕಷ್ಟಗಳನ್ನು ಕೇಳಿಲ್ಲ. ಬರ ಸಮೀಕ್ಷೆಯನ್ನು ಸಹ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಲದಲ್ಲೇ ಪ್ರತಿಭಟನೆ:

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ನಾಡಿನ ಎಲ್ಲ ಕಡೆ ಓಡಾಡಿ ರೈತರ ಜೊತೆ ಮಾತನಾಡಿ ಅವರ ಸಮಸ್ಯೆ ಆಲಿಸಲೆಂದೇ ಬಂದಿದ್ದೇವೆ. ರಾಜ್ಯದ ಎಲ್ಲ ಕಡೆಗಳಲ್ಲೂ ಬರದಿಂದ ಕಂಗಾಲಾದವರ ಜೊತೆ ಚರ್ಚಿಸುತ್ತಿದ್ದೇವೆ. ಇನ್ನು ಮುಂದೆ ಎಲ್ಲೇ ಹೋದರೂ ಹೊಲದಲ್ಲಿಯೇ ಕುಳಿತು ಪ್ರತಿಭಟನೆ ಮಾಡುತ್ತೇವೆ. ರಾಜ್ಯ ಸರ್ಕಾರ ಆಗಸ್ಟ್ 3ರೊಳಗೆ ಬರಗಾಲ ಘೋಷಣೆ ಮಾಡದೇ ಹೋದಲ್ಲಿ ಬಿಜೆಪಿಯ ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಸಮಿತಿಗಳಿಂದ ರೈತರ ಹೊಲಗಳಲ್ಲಿಯೇ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.