ಹಾವೇರಿ: ಕಳೆದು ಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸುವ ಕಾರ್ಯದಲ್ಲಿ ಹಾವೇರಿ ಜಿಲ್ಲೆ ದಕ್ಷಿಣ ಭಾರತದ ಜಿಲ್ಲೆಗಳ ಪೈಕಿ ಮೊದಲ ಸ್ಥಾನ ಪಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ನಿರ್ವಹಿಸುವ ಸಿಇಐಆರ್ ಪೋರ್ಟಲ್‌ನಲ್ಲಿ ಮೊಬೈಲ್ ಕಳವು, ಬ್ಲಾಕ್, ಟ್ರೇಸ್ ಹಾಗೂ ಮರುಪಡೆಯುವಿಕೆ ಕುರಿತು ಜಿಲ್ಲಾವಾರು ಶ್ರೇಯಾಂಕ ನೀಡಲಾಗುತ್ತದೆ. ಈ ಶ್ರೇಯಾಂಕದಲ್ಲಿ ಹಾವೇರಿ ಜಿಲ್ಲೆ ದಕ್ಷಿಣ ಭಾರತದ ಜಿಲ್ಲೆಗಳ ಪೈಕಿ ಮೊದಲ ಸ್ಥಾನ ಪಡೆದಿದ್ದು, ಫೆಬ್ರವರಿಯಲ್ಲೇ ಈ ಸಾಧನೆಗೆ ಮಾನ್ಯತೆ ದೊರೆತಿದೆ ಎಂದು ಹೇಳಿದರು.

ಪ್ರಸ್ತುತ ಹಾವೇರಿ, ಶಿವಮೊಗ್ಗ, ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳಿಗೆ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು. ಮೊಬೈಲ್ ಕಳುವಾದ ತಕ್ಷಣ ಸಿಇಐಆರ್ ಪೋರ್ಟಲ್‌ನಲ್ಲಿ ಐಎಂಇಐ ಸಂಖ್ಯೆಯನ್ನು ಬ್ಲಾಕ್ ಮಾಡಿಸಿದರೆ, ಬಳಿಕ ಅದರಲ್ಲಿ ಬೇರೆ ಸಿಮ್ ಕಾರ್ಡ್ ಬಳಸಿದಾಗ ಅದರ ಸ್ಥಳ ಮಾಹಿತಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆದರೆ ಮೊಬೈಲ್ ಸಂಪೂರ್ಣವಾಗಿ ಟ್ರೇಸ್ ಮಾಡಿ ಮರುಪಡೆಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೂ ತೆರಳಿ ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕಳೆದುಹೋದ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಗುತ್ತಿದೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿ ಸಾಕ್ಷ್ಯ ಸಂಗ್ರಹ, ಆರೋಪಿಗಳ ಪತ್ತೆ ಹಾಗೂ ವಸ್ತುಗಳ ಮರುಪಡೆಯುವಿಕೆ ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಶ್ರಮಿಸಿ ಕೊಲೆ ಸೇರಿದಂತೆ ಗಂಭೀರ ಪ್ರಕರಣಗಳನ್ನು ಭೇದಿಸಿ ಕಳುವಾದ ವಸ್ತುಗಳನ್ನು ಯಶಸ್ವಿಯಾಗಿ ಮರುಪಡೆಯುತ್ತಿದ್ದಾರೆ ಎಂದು ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿಗಳಾದ ಗಿರಿಮಲ್ಲಪ್ಪ ತಳಕಟ್ಟಿ, ಕೆ.ವಿ. ಗುರುಶಾಂತಪ್ಪ, ಲೋಕೇಶ ಜೆ., ಸಿಪಿಐ ಮೋತಿಲಾಲ್ ಪವಾರ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

₹2.29 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ..

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳವು ಹಾಗೂ ಸಾರ್ವಜನಿಕರು ಕಳೆದುಕೊಂಡಿದ್ದ ವಸ್ತುಗಳನ್ನು ವೈಜ್ಞಾನಿಕ ತನಿಖೆ, ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪತ್ತೆಹಚ್ಚಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಮನೆ ಕಳ್ಳತನ, ಚಿನ್ನಾಭರಣ ಕಳವು ಹಾಗೂ ಮೊಬೈಲ್ ಕಳ್ಳತನ ಹೀಗೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 46 ಪ್ರಕರಣ ಭೇದಿಸಿ, 85 ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ. ಒಟ್ಟು ₹2,29,73,961 ಮೌಲ್ಯದ ಸ್ವತ್ತನ್ನು ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರಿಗೆ ಮತ್ತು ಮಾಲೀಕರಿಗೆ ಮರಳಿಸಲಾಗುತ್ತಿದೆ ಎಂದು ಎಸ್‌ಪಿ ಯಶೋದಾ ತಿಳಿಸಿದರು.

ವಿವರ ಹೀಗಿದೆ: ಸುಮಾರು ₹8.68 ಲಕ್ಷ ಮೌಲ್ಯದ 16 ವಾಹನಗಳು, ₹63.20 ಲಕ್ಷ ನಗದು, ₹1.18 ಕೋಟಿ ಮೌಲ್ಯದ 1088.57 ಗ್ರಾಂ ಬಂಗಾರ, ₹34.57 ಲಕ್ಷ ಮೌಲ್ಯದ 894.73 ಗ್ರಾಂ ಬೆಳ್ಳಿ ಆಭರಣಗಳನ್ನು ಪತ್ತೆ ಮಾಡಲಾಗಿದೆ. ಇದೇ ಅವಧಿಯಲ್ಲಿ 2,527 ಮೊಬೈಲ್‌ಗಳನ್ನು ಬ್ಲಾಕ್ ಮಾಡಿದ್ದು, ಅವುಗಳಲ್ಲಿ 2,014 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದೇವೆ. 2026 ಜು.8ರಿಂದ ಸ್ಪೇಶಲ್ ಡ್ರೈವ್ ಕಾರ್ಯಾಚರಣೆ ಮೂಲಕ 539 ಮೊಬೈಲ್‌ಗಳನ್ನು ಪತ್ತೆ ಮಾಡಿ ಅವುಗಳನ್ನು ನೈಜ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿ ಮರಳಿ ಸಿಗುತ್ತದೆ ಎಂಬ ನಿರೀಕ್ಷೆಯೇ ಇರಲಿಲ್ಲ. ಆದರೆ ಹಾವೇರಿ ಜಿಲ್ಲಾ ಪೊಲೀಸರು ಪ್ರಕರಣವನ್ನು ಭೇದಿಸಿ ನಮ್ಮ ಚಿನ್ನಾಭರಣವನ್ನು ಸುರಕ್ಷಿತವಾಗಿ ಮರಳಿಸಿರುವುದು ಖುಷಿ ತಂದಿದೆ. ಪೊಲೀಸರ ಕಾರ್ಯಕ್ಷಮತೆ ಮತ್ತು ಶ್ರಮಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು

ಸ್ವತ್ತು ಮರಳಿ ಪಡೆದವರು ಪೊಲೀಸರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.