ಕನ್ನಡಪ್ರಭ ವಾರ್ತೆ, ಹಾಸನ

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಜನರ ಪರವಾಗಿ ತಾವೇ ಮುಂದೆ ಬಂದು ವಾರದಲ್ಲಿ ಎರಡು ದಿನ ತಾಲೂಕು ಕಚೇರಿ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವುದಾಗಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ರಿಂದ ೨೦೨೩ರ ಅವಧಿಯಲ್ಲಿ ಹಾಸನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಆಡಳಿತಾತ್ಮಕ ಸೇವೆಗಳು ಸುಗಮವಾಗಿ ನಡೆಯುತ್ತಿದ್ದವು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಜನರು ಸಣ್ಣಪುಟ್ಟ ಕೆಲಸಗಳಿಗೂ ಕಚೇರಿಯಿಂದ ಕಚೇರಿಗೆ ಅಲೆದಾಡುವ ದುಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನ ನನ್ನನ್ನು ತಿರಸ್ಕರಿಸಿಲ್ಲ:

೨೦೨೩ರ ಚುನಾವಣೆಯಲ್ಲಿ ರಾಜಕೀಯ ಪರಿಸ್ಥಿತಿಯಿಂದ ಸೋಲು ಅನುಭವಿಸಿದ್ದೇನೆ ಹೊರತು ಜನರು ನನ್ನನ್ನು ತಿರಸ್ಕರಿಸಿಲ್ಲ. ಹಿಂದಿನ ಬಾರಿಗಿಂತ ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಸೋತ ಬಳಿಕ ಟೀಕೆ ಮಾಡುತ್ತಿದ್ದಾರೆ ಎಂಬ ಮಾತು ಬರಬಾರದೆಂದು ಇದುವರೆಗೆ ಮೌನವಾಗಿದ್ದೆ. ಆದರೆ ಕಳೆದ ಕೆಲವು ತಿಂಗಳಿಂದ ನೂರಾರು ಜನರು ತಮ್ಮ ಸಮಸ್ಯೆಗಳೊಂದಿಗೆ ನನ್ನನ್ನು ಸಂಪರ್ಕಿಸುತ್ತಿರುವುದರಿಂದ ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.


ಇಂದು ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಸಹ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ೩೦ಕ್ಕೂ ಹೆಚ್ಚು ಗ್ರಾಮಗಳನ್ನು ಸೇರಿಸಿ ಮಹಾನಗರ ಪಾಲಿಕೆ ರಚಿಸಲಾಗಿದ್ದರೂ, ಆ ಪ್ರದೇಶಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ. ‘ಇ-ಸ್ವತ್ತು’ ಸೇರಿದಂತೆ ಹಲವು ಸೇವೆಗಳಿಗಾಗಿ ಜನರು ತಿಂಗಳುಗಟ್ಟಲೆ ಕಚೇರಿಗಳ ಸುತ್ತ ಅಲೆದಾಡಬೇಕಾಗಿದೆ ಎಂದು ಅವರು ದೂರಿದರು.

ಮಹಾನಗರ ಪಾಲಿಕೆಯ ಅವಧಿ ಮುಗಿದಿದ್ದರೂ ಚುನಾವಣೆ ನಡೆಸದ ಕಾರಣ ಆಡಳಿತ ವ್ಯವಸ್ಥೆ ದುರ್ಬಲಗೊಂಡಿದೆ. ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಯುಜಿಡಿ ದುರಸ್ತಿ ಸೇರಿದಂತೆ ಹಲವು ನಾಗರಿಕ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಿದರು. ಮೈಸೂರು ಕೇಂದ್ರದಲ್ಲಿರುವ ಪ್ರಾದೇಶಿಕ ಆಯುಕ್ತರು ಹಾಸನ ಜಿಲ್ಲೆಯ ಸಮಸ್ಯೆಗಳತ್ತ ಸಮರ್ಪಕ ಗಮನ ಹರಿಸುತ್ತಿಲ್ಲ. ವಾರಕ್ಕೊಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುವ ಕೆಲಸ ಆಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು, ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಹುಸಿ ಭರವಸೆ:

ನಗರದ ಸೆಟ್‌ಬ್ಯಾಕ್ ಸಮಸ್ಯೆಯನ್ನು ಒಂದು ತಿಂಗಳೊಳಗೆ ಬಗೆಹರಿಸುವುದಾಗಿ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಭರವಸೆ ನೀಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಯಾವುದೇ ಪರಿಹಾರ ದೊರೆತಿಲ್ಲ. ಶಾಸಕರು ವಾರದಲ್ಲಿ ಕನಿಷ್ಠ ಎರಡು ದಿನ ಸಾರ್ವಜನಿಕರ ಅಹವಾಲು ಆಲಿಸಲು ಮೀಸಲಿಟ್ಟು ರಾಜಕೀಯವನ್ನು ಬದಿಗಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಜನರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ ವಾರದಲ್ಲಿ ಒಂದು ದಿನ ಮಹಾನಗರ ಪಾಲಿಕೆ ಹಾಗೂ ತಾಲೂಕು ಕಚೇರಿ ಆವರಣದಲ್ಲಿ ನಾನೇ ಕುರ್ಚಿ ಹಾಕಿಕೊಂಡು ಕುಳಿತು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಲ್ಲ:

ಮಾಜಿ ಸಚಿವ ಎಚ್.ಡಿ. ರೇವಣ್ಣ ಜಿಲ್ಲಾಧಿಕಾರಿ ವಿರುದ್ಧ ಮಾಡಿರುವ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇವಣ್ಣ ಅವರು ಜಿಲ್ಲೆಯ ಹಿರಿಯ ರಾಜಕಾರಣಿ. ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನನ್ನ ಉದ್ದೇಶ ಯಾರನ್ನೂ ದೂಷಿಸುವುದಲ್ಲ. ಜನರಿಗೆ ಆಗುತ್ತಿರುವ ತೊಂದರೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವುದೇ ನನ್ನ ಆದ್ಯತೆ ಎಂದು ಸ್ಪಷ್ಟಪಡಿಸಿದರು. ಸಂಸದರೂ ಹಾಸನ ನಗರದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜನಹಿತಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ನಗರದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ಲಲಾಟ್ ಮೂರ್ತಿ, ಎಸ್.ಡಿ. ಯೋಗೇಶ್ ಗೌಡ, ರಾಜೇಶ್ ಇತರರು ಇದ್ದರು.