ಕೆರೆ ಒತ್ತುವರಿ ತೆರವಿಗೆ ಮುಂದಾದ ಆಡಳಿತ

| Published : Nov 16 2023, 01:16 AM IST / Updated: Nov 16 2023, 01:17 AM IST

ಸಾರಾಂಶ

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆ ಒಳಗೊಂಡ ಹಾನಗಲ್ಲ ತಾಲೂಕಿನಲ್ಲಿ ೯೦೧ ಕೆರೆಗಳ ಸರ್ವೇ ಮೂಲಕ ಒತ್ತುವರಿ ತೆರವುಗೊಳಿಸಿ, ಅಳತೆಗನುಗುಣವಾಗಿ ಸುತ್ತಲೂ ಕಂದಕ ನಿರ್ಮಾಣಕ್ಕೆ ತಾಲೂಕು ಆಡಳಿತ ಮುಂದಾಗಿದೆ.ರಾಜ್ಯದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಲು ರಾಜ್ಯ ಸರ್ಕಾರದ ಆದೇಶಿಸಿದೆ. ಅದರಂತೆ ತಾಲೂಕಿನ ಎಲ್ಲ ೯೦೧ ಕೆರೆಗಳ ಸರ್ವೇ ಹಾಗೂ ಒತ್ತುವರಿ ಗುರುತಿಸಿ ತೆರವುಗೊಳಿಸುವತ್ತ ಸ್ಥಳೀಯ ಆಡಳಿತ ಚಿತ್ತ ನೆಟ್ಟಿದೆ. ೪೦ ಪರವಾನಿಗೆ ಪಡೆದ ಭೂಮಾಪಕರು, ೫ ಸರ್ಕಾರಿ ಭೂಮಾಪಕರು, ತಹಸೀಲ್ದಾರರನ್ನೊಳಗೊಂಡು ಮೇಲ್ವಿಚಾರಕರು, ೪೫ ಗ್ರಾಮ ಆಡಳಿತದ ಕಂದಾಯ ನಿರೀಕ್ಷಕರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆ ಒಳಗೊಂಡ ಹಾನಗಲ್ಲ ತಾಲೂಕಿನಲ್ಲಿ ೯೦೧ ಕೆರೆಗಳ ಸರ್ವೇ ಮೂಲಕ ಒತ್ತುವರಿ ತೆರವುಗೊಳಿಸಿ, ಅಳತೆಗನುಗುಣವಾಗಿ ಸುತ್ತಲೂ ಕಂದಕ ನಿರ್ಮಾಣಕ್ಕೆ ತಾಲೂಕು ಆಡಳಿತ ಮುಂದಾಗಿದೆ.

ರಾಜ್ಯದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಲು ರಾಜ್ಯ ಸರ್ಕಾರದ ಆದೇಶಿಸಿದೆ. ಅದರಂತೆ ತಾಲೂಕಿನ ಎಲ್ಲ ೯೦೧ ಕೆರೆಗಳ ಸರ್ವೇ ಹಾಗೂ ಒತ್ತುವರಿ ಗುರುತಿಸಿ ತೆರವುಗೊಳಿಸುವತ್ತ ಸ್ಥಳೀಯ ಆಡಳಿತ ಚಿತ್ತ ನೆಟ್ಟಿದೆ. ೪೦ ಪರವಾನಿಗೆ ಪಡೆದ ಭೂಮಾಪಕರು, ೫ ಸರ್ಕಾರಿ ಭೂಮಾಪಕರು, ತಹಸೀಲ್ದಾರರನ್ನೊಳಗೊಂಡು ಮೇಲ್ವಿಚಾರಕರು, ೪೫ ಗ್ರಾಮ ಆಡಳಿತದ ಕಂದಾಯ ನಿರೀಕ್ಷಕರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ತಾಲೂಕಿನಲ್ಲಿ ೯೦೧ ಕೆರೆಗಳು ೭೫೪೭ ಎಕರೆಯಷ್ಟು ಒಟ್ಟು ವಿಸ್ತೀರ್ಣ ಹೊಂದಿವೆ ಎಂದು ಗುರುತಿಸಲಾಗಿದೆ. ೯೦೧ ಕೆರೆಗಳಲ್ಲಿ ಈಗಾಗಲೇ ೨೪೭ ಕೆರೆಗಳ ಮೋಜಣಿ ಪೂರ್ಣಗೊಂಡಿದ್ದು, ಒತ್ತುವರಿಯಾದ ಪ್ರದೇಶಗಳನ್ನು ಗುರುತಿಸಿ ರೈತರಿಗೆ ಮಾಹಿತಿ ನೀಡಲಾಗಿದೆ. ಇದರಲ್ಲಿ ೧೭೮ ಕೆರೆಗಳು ಒತ್ತುವರಿ ಮುಕ್ತ ಕೆರೆಗಳಾಗಿದ್ದು ೬೯ ಕೆರೆಗಳು ಒತ್ತುವರಿಯಾಗಿವೆ ಎಂಬ ಮಾಹಿತಿ ಇದೆ. ಈಗಾಗಲೇ ಇದರಲ್ಲಿ ೩೫ ಕೆರೆಗಳ ಒತ್ತುವರಿ ತೆರವುಗೊಳಿಸಿ ಕ್ರಮ ಜರುಗಿಸಲಾಗಿದೆ.

ಗ್ರಾಪಂಗೆ ಕೆರೆಗಳು:

ನೂರು ಎಕರೆ ವಿಸ್ತೀರ್ಣದವರೆಗಿನ ಕೆರೆಗಳನ್ನು ಮೋಜಣಿಯ ನಂತರದಲ್ಲಿ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಿ ಕೊಡಲಾಗುತ್ತದೆ. ಈ ಕೆರೆಗಳ ಸರ್ವೇಗಾಗಿ ಆಯಾ ಪಂಚಾಯಿತಿಗಳಿಂದ ₹೧೨೦೦ ಶುಲ್ಕ ಪಾವತಿಯ ಹೊಣೆ ಗ್ರಾಮ ಪಂಚಾಯಿತಿದ್ದೇ ಆಗಿದೆ. ಐದು ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಕೆರೆಗಳಿಗೆ ಮೋಜಣಿಗಾಗಿ ಆಯಾ ಗ್ರಾಪಂಗಳು ಪ್ರತಿ ಎಕರೆಗೆ ಹೆಚ್ಚುವರಿಯಾಗಿ ₹100 ಪಾವತಿಸಬೇಕು.

ನೂರು ಎಕರೆಗಿಂತ ಹೆಚ್ಚು ವಿಸ್ತೀರ್ಣವಿರುವ ನೀರಾವರಿ ಕೆರೆಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸರ್ವೇ ನಂತರ ಹಸ್ತಾಂತರಿಸಲಾಗುತ್ತದೆ. ಮೋಜಣಿ ಕಾರ್ಯ ಪೂರ್ಣಗೊಂಡ ನಂತರ ಅವುಗಳ ವಿಸ್ತೀರ್ಣಕ್ಕೆ ತಕ್ಕಂತೆ ಇಡೀ ಕೆರೆಯ ಸುತ್ತಲೂ ಕಂದಕ ನಿರ್ಮಿಸಿ ಕೆರೆ ಸಂರಕ್ಷಣೆ ಮಾಡಲಾಗುತ್ತದೆ.

ಕೋಡಿ ನಿರ್ಮಾಣ:

ನಿರ್ವಹಣಾ ನೌಕರರಿಲ್ಲದ ಕಾರಣ ಕೆರೆ ಕೋಡಿಗಳ ನಿರ್ವಹಣೆಯೂ ಇಲ್ಲ. ಬಹುತೇಕ ಕೋಡಿಗಳು ಮುಚ್ಚಿ ಹೋಗಿವೆ. ಅವುಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವ ಅಗತ್ಯವೂ ಇದೆ. ಕೋಡಿಗಳು ಸರಿಯಾಗಿ ಇಲ್ಲದ ಕಾರಣ ಕೆರೆಗಳ ನೀರು ಹೊಲಗಳಿಗೆ ನುಗ್ಗಿ ಪೈರು ಹಾಳು ಮಾಡಿಕೊಂಡ ರೈತರು ತಾಲೂಕು ಆಡಳಿತಕ್ಕೆ ನ್ಯಾಯಕ್ಕಾಗಿ ಮೊರೆ ಹೋದ ಹಲವು ಪ್ರಕರಣಗಳಿವೆ. ಇದಕ್ಕಾಗಿ ತಾಲೂಕು ಆಡಳಿತ ವಿಶೇಷ ಕಾಳಜಿ ವಹಿಸಬೇಕಾಗಿದೆ.

ಸರ್ಕಾರದ ನಿರ್ದೇಶನದಂತೆ ಸರ್ವೇ ಹಾಗೂ ಒತ್ತುವರಿ ತೆರವು ಕಾರ್ಯ ಶೀಘ್ರಗತಿಯಲ್ಲಿ ನಡೆದಿದೆ. ಎರಡು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಅತಿ ಹೆಚ್ಚು ಕೆರೆಗಳಿರುವ ತಾಲೂಕಿನಲ್ಲಿ ಬಹುತೇಕ ನೀರಾವರಿ ಕೆರೆಗಳಿವೆ. ಈ ಮೋಜಣಿಯಿಂದಾಗಿ ಕೆರೆಗಳು ಅಭಿವೃದ್ಧಿಯಾಗಿ ರೈತರಿಗೆ ಸರಿಯಾದ ನೀರು ಒದಗಿಸಲು ಸಾಧ್ಯ. ಈಗಾಗಲೇ ಶೇ.೩೦ರಷ್ಟು ಮೋಜಣಿ ಕಾರ್ಯ ಮುಗಿದಿದೆ ಎನ್ನುತ್ತಾರೆ ಗ್ರೇಡ್-೨ ತಹಸೀಲ್ದಾರ ರವಿಕುಮಾರ ಕೊರವರ.