ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಆಡಳಿತಾತ್ಮಕ ಕಿರುಕುಳ: ಕೋಟ ಶ್ರೀನಿವಾಸ ಪೂಜಾರಿ

| Published : May 23 2025, 12:18 AM IST

ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಆಡಳಿತಾತ್ಮಕ ಕಿರುಕುಳ: ಕೋಟ ಶ್ರೀನಿವಾಸ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಯೋಜನೆಯಾದ ಜನಔಷಧಿ ಕೇಂದ್ರಗಳನ್ನು ಮುಚ್ಚಬೇಕು ಎಂಬ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣ ವಾಪಾಸು ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆಡಳಿತಾತ್ಮಕ ಕಿರುಕುಳ ಮುಂದುವರಿಸಿರುವುದಕ್ಕೆ ಇದೇ ಸಾಕ್ಷಿಯಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ, ಕೇಂದ್ರ ಸರ್ಕಾರದ ಯೋಜನೆಯಾದ ಜನಔಷಧಿ ಕೇಂದ್ರಗಳನ್ನು ಮುಚ್ಚಬೇಕು ಎಂಬ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣ ವಾಪಾಸು ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆಡಳಿತಾತ್ಮಕ ಕಿರುಕುಳ ಮುಂದುವರಿಸಿರುವುದಕ್ಕೆ ಇದೇ ಸಾಕ್ಷಿಯಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ‌ಔಷಧಿ ಕೇಂದ್ರದಲ್ಲಿ ಅತೀ ಕಡಿಮೆ ದರದಲ್ಲಿ ರೋಗಿಗಳಿಗೆ ಔಷಧ ಸಿಗುತ್ತಿದ್ದು, ದೇಶದಲ್ಲಿ ವಾರ್ಷಿಕ 2000 ಕೋಟಿ, ರಾಜ್ಯದಲ್ಲಿ 250 ಕೋಟಿ ರು.ಗೂ ಅಧಿಕ ವ್ಯವಹಾರ ಜನೌಷಧಿ ಕೇಂದ್ರದಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರ ಜನತೆಗೆ ಉಚಿತವಾಗಿ ಔಷಧಿ ಕೊಟ್ಟರೆ ಸಂತೋಷ, ಹಾಗಂತ ಕೇಂದ್ರಗಳನ್ನು ಯಾಕೆ ಮುಚ್ಚುತ್ತೀರಿ ಎಂದು ಪ್ರಶ್ನಿಸಿದರು.

ಇದು ಕೇಂದ್ರದ ಸರ್ಕಾರದ ಯೋಜನೆ ವಿಫಲಗೊಳಿಸುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಈ ವಿಚಾರದಲ್ಲಿ ಬಡ ರೋಗಿಗಳಿಗೆ ಕಿರುಕುಳ ಕೊಟ್ಟು ರಾಜಕೀಯ ಮಾಡಬಾರದು ಎಂದು ಸಲಹೆ ಮಾಡಿದರು. ಇ.ಡಿ.ಗೆ ದಲಿತರು ಎಂಬ ಪ್ರತ್ಯೇಕತೆ ಇಲ್ಲ:

ಗೃಹ ಸಚಿವ ಪರಮೇಶ್ವರ್ ಅವರ ಸಂಸ್ಥೆಗಳ ಮೇಲಿನ ಇಡಿ ದಾಳಿಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇಲ್ಲ. ಅದೊಂದು ಸ್ವತಂತ್ರ ಸಂಸ್ಥೆ ಎಂದು ಮನಮೋಹನ್ ಸಿಂಗ್ ಅವರೇ ಹೇಳಿದ್ದರು. ತಮ್ಮ ರಕ್ಷಣೆಗೋಸ್ಕರ ಮುಖ್ಯಮಂತ್ರಿ, ದಲಿತ ನಾಯಕನ ಮೇಲೆ ಇ.ಡಿ. ದಾಳಿ ಎಂದು ಬಿಂಬಿಸುತ್ತಿದ್ದಾರೆ. ಇಡಿಗೆ ದಲಿತ ದಲಿತೇತರರು ಅಂತ ಇರುವುದಿಲ್ಲ. ಅಕ್ರಮ ವ್ಯವಹಾರ, ಸಂಪತ್ತು, ಆರ್ಥಿಕ ಅಪರಾಧ ಇರುವ ಕಡೆ ದಾಳಿಯಾಗುತ್ತದೆ. ದಾಳಿಯನ್ನು ಜಾತಿ ವರ್ಗಕ್ಕೆ ಸೀಮಿತ ಮಾಡಬಾರದು ಎಂದರು.

ಚುಟ್‌ಪುಟ್‌ ಅಂದ್ರೆ ಅವಮಾನ:

ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರು ಯುದ್ಧವನ್ನು ಚುಟ್‌ ಪುಟ್ ಯುದ್ಧ ಎಂದು ಕರೆದಿದ್ದಾರೆ. ಶಾಸಕ ಮಂಜುನಾಥ್ ಕೊತ್ತೂರು ನಾಲ್ಕು ವಿಮಾನ ಹಾರಿಸಿದ್ದು ಅಂತಾರೆ. ನಮ್ಮ ಬದುಕನ್ನು ಕಾಯುತ್ತಿರುವ ಗಡಿಯಲ್ಲಿರುವ ಯೋಧನಿಗೆ ಮಾಡಿದ ಅಪಮಾನ ಇದು, ದೊಡ್ಡವರು ಅಂತಹ ಶಬ್ದ ಬಳಸುವಾಗ ಯೋಚನೆ ಮಾಡಬೇಕು, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರದ ಗೌರವಕ್ಕೆ ಕುಂದಾಗುತ್ತಿದೆ ಎಂದರು.

ಛಲವಾದಿಗೆ ಮುತ್ತಿಗೆ ಸರಿಯಲ್ಲ:

ಬಿಜೆಪಿಯ ದಲಿತ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ದಿಗ್ಬಂದನ, ಪ್ರತಿಪಕ್ಷ ನಾಯಕನ ಧ್ವನಿಯನ್ನು ಮೊಟಕುಗೊಳಿಸುವ ಕೆಲಸ. ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸಿಗರು ದಲಿತ ನಾಯಕನನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ನಾರಾಯಣಸ್ವಾಮಿ ಅವರು ತಾವು ಬಳಸಿದ ನಾಯಿ ಶಬ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ವಿಷಾದಿಸಿದ ನಂತರವೂ ಮುತ್ತಿಗೆ ಹಾಕಿದ್ದು ಎಷ್ಟು ಸರಿ ಎಂದು ಕೋಟ ಪ್ರಶ್ನಿಸಿದರು. ............................

ಭಾನು ಮುಷ್ತಾಕ್‌ಗೆ ಬುಕರ್: ಕೋಟ ಶುಭಾಶಯ

ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಸ್ತಾಕ್ ಅವರ ಕೃತಿಗೆ ಅತ್ಯುನ್ನತ ಬೂಕರ್ ಪ್ರಶಸ್ತಿ ಬಂದಿದೆ. ‘ಎದೆಯ ಹಣತೆ’ ಇಂಗ್ಲಿಷಿಗೆ ತರ್ಜುಮೆಗೊಂಡು, ವಿಶ್ವದ ಗಮನ ಸೆಳೆದಿದೆ. ಕನ್ನಡಕ್ಕೆ ಇದು ಬಹುದೊಡ್ಡ ಕೊಡುಗೆ. ಬಾನು ಮುಷ್ತಾಕ್ ಲೇಖನ, ವಿಚಾರಧಾರೆಗಳು ಮಹಿಳೆಯ ಬಗೆಗಿನ ಕಾಳಜಿಯ ಬರಹಗಳಿಗೆ ಸಿಕ್ಕಿದಂತಹ ಮನ್ನಣೆ. ಕರ್ನಾಟಕ ಮತ್ತು ಭಾರತ ದೇಶದ ಎಲ್ಲಾ ಅಭಿಮಾನಿಗಳು ಪ್ರಶಸ್ತಿಯನ್ನು ಗೌರವದಿಂದ ಸ್ವಾಗತಿಸುತ್ತೇವೆ. ಭಾನು ಮುಷ್ತಾಕ್ ಅವರ ಬಗ್ಗೆ ಹೆಮ್ಮೆ ಇದೆ, ನಮಗೆ ಖುಷಿ ಮತ್ತು ಸಂತೋಷ ಕೊಟ್ಟಿದೆ ಎಂದರು.