ಮತ್ತೆ ಚಿಣ್ಣರ ಕಲರವ: ಫೀನಿಕ್ಸ್‌ ಪಕ್ಷಿಯಂತೆ ಎದ್ದು ನಿಂತ ಫಂಡಿಜೆ ಸರ್ಕಾರಿ ಶಾಲೆ

| Published : Jun 05 2025, 03:53 AM IST

ಮತ್ತೆ ಚಿಣ್ಣರ ಕಲರವ: ಫೀನಿಕ್ಸ್‌ ಪಕ್ಷಿಯಂತೆ ಎದ್ದು ನಿಂತ ಫಂಡಿಜೆ ಸರ್ಕಾರಿ ಶಾಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 42 ವರ್ಷಗಳ ಬಳಿಕ ಕಳೆದ ಫೆಬ್ರುವರಿ ತಿಂಗಳಲ್ಲಿ ಫಂಡಿಜೆ ವಾಳ್ಯ ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಸಿದರು. ಇದರ ಪರಿಣಾಮದಿಂದಾಗಿ ಮುಂದಿನ ವರ್ಷದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಸಂಕಲ್ಪಕ್ಕೆ ಬದ್ಧರಾದರು. ಹೀಗಾಗಿ ಎಲ್ಲರ ಸತತ ಪ್ರಯತ್ನದಿಂದಾಗಿ ಇದೀಗ 2025 ರ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ 23 ಕ್ಕೆ ಏರಿದೆ.

ದೀಪಕ್ ಅಳದಂಗಡಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಇನ್ನೇನು ಈ ವರ್ಷ ಮುಚ್ಚಿ ಹೋಗಲಿದೆ ಎಂದುಕೊಳ್ಳುತ್ತಿರುವಾಗಲೆ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಂತಿದೆ ಫಂಡಿಜೆ ವಾಳ್ಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

1960 ರಲ್ಲಿ ಪ್ರಾರಂಭವಾಗಿರುವ ಶಾಲೆಯಲ್ಲಿ ಆರಂಭ ದಶಕದಲ್ಲಿ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿತ್ತು. ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಶಾಲೆಯಲ್ಲಿ ಬರಬರುತ್ತಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗತೊಡಗಿತು. ಅನತಿ ದೂರದಲ್ಲೇ ಇನ್ನೊಂದು ಶಾಲೆ ತಲೆ ಎತ್ತಿದ ಬಳಿಕ ಇಲ್ಲಿಯ ಮಕ್ಕಳ ಸಂಖ್ಯೆ 10 ಕ್ಕೆ ಬಂದು ನಿಂತಿತು. ಹೀಗೆಯೇ ಆದರೆ ಅತ್ಯಂತ ಸುವ್ಯವಸ್ಥಿತವಾಗಿರುವ ಶಾಲೆ ಮುಚ್ಚುವ ದಿನಗಳು ದೂರವಿಲ್ಲ ಎಂದರಿತ ಶಾಲಾ ಮುಖ್ಯೋಪಾಧ್ಯಾಯಿನಿ, ಹಳೆ ವಿದ್ಯಾರ್ಥಿಗಳು ಹಾಗೂ ಊರವರು ಸೇರಿ ಕಳೆದ ವರ್ಷ ಚಿಂತನೆ ನಡೆಸಿ, ಒಟ್ಟು ಗೂಡಿ ಸುಮಾರು 42 ವರ್ಷಗಳ ಬಳಿಕ ಕಳೆದ ಫೆಬ್ರುವರಿ ತಿಂಗಳಲ್ಲಿ ವಾರ್ಷಿಕೋತ್ಸವ ನಡೆಸಿದರು. ಇದರ ಪರಿಣಾಮದಿಂದಾಗಿ ಮುಂದಿನ ವರ್ಷದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಸಂಕಲ್ಪಕ್ಕೆ ಬದ್ಧರಾದರು. ಹೀಗಾಗಿ ಎಲ್ಲರ ಸತತ ಪ್ರಯತ್ನದಿಂದಾಗಿ ಇದೀಗ 2025 ರ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ 23 ಕ್ಕೆ ಏರಿದೆ.

ಇದೀಗ 1ನೇ ತರಗತಿಯಲ್ಲಿ 4 ವಿದ್ಯಾರ್ಥಿಗಳು, 2 ರಲ್ಲಿ 1, 3 ರಲ್ಲಿ 2, 4 ರಲ್ಲಿ 4 , 5 ರಲ್ಲಿ 2, 6 ರಲ್ಲಿ 5 ಹಾಗೂ 7 ನೇ ತರಗತಿಯಲ್ಲಿ 5 ಮಕ್ಕಳಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಾದಂತೆ ದಾನಿಗಳ ಸಹಕಾರವೂ ಕೈಗೂಡಿತು.ಹಳೆ ವಿದ್ಯಾರ್ಥಿಗಳು ಸೇರಿ ಮಕ್ಕಳನ್ನು ಕರೆತರಲು ವಾಹನದ ಉಚಿತ ವ್ಯವಸ್ಥೆ ಮಾಡಿಕೊಟ್ಟರು, ಒಬ್ಬರು ಸ್ಮಾರ್ಟ್ ಟಿ.ವಿ ಕೊಟ್ಟರೆ, ಇನ್ನೊಬ್ಬರು ಪ್ರಿಂಟರ್ ಒದಗಿಸಿದರು, ಮತ್ತೊಬ್ಬರು ಗ್ರೀನ್ ಬೋರ್ಡ್, ಮತ್ತೊಬ್ಬರು ಪುಸ್ತಕ ಇಡಲು ರ್‍ಯಾಕ್‌ ಕೊಟ್ಟರು. ಹೀಗೆ ಕುರ್ಚಿಗಳು, ಟೇಬಲುಗಳು ಬಂದವು. ಉಜಿರೆಯ ವಿಶಾಲ ಸೇವಾ ಟ್ರಸ್ಟ್ ನವರು ಹಾಗೂ ಗೌರವ ಶಿಕ್ಷಕಿ ಪೂರ್ಣಿಮಾ ಉಚಿತ ಪುಸ್ತಕಗಳನ್ನು ಒದಗಿಸಿದರು. ಅಂತೂ ಮುಚ್ಚಿಹೋಗಲಿಕ್ಕಿದ್ದ ಸರಕಾರಿ ಶಾಲೆಯೊಂದು ಮತ್ತೆ ಗತವೈಭವದತ್ತ ತೆರಳಲು ಸಿದ್ಧವಾಗುತ್ತಿದೆ.

ಫಂಡಿಜೆ ಶಾಲೆಯ ಆಧಾರ ಸ್ತಂಭ ಇಲ್ಲಿನ ಮುಖ್ಯೋಪಾಧ್ಯಾಯಿನಿ ಫ್ಲೇವಿಯಾ ಡಿ ಸೋಜ ಅವರು. ಅವರ ಪ್ರತಿಭೆ ಹಾಗೂ ಪರಿಶ್ರಮ ಅಪಾರ. ನಿರ್ವಂಚನೆಯಿಂದ ತನ್ನ ಕರ್ತವ್ಯ ಮಾಡುತ್ತಿದ್ದಾರೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಹುದು.

ಇಲ್ಲಿ ಕಲಿತ ಮಕ್ಕಳು ಏಳನೇ ತರಗತಿ ಮುಗಿಸುವುದರೊಳಗೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲರು ಮತ್ತು ಓದಬಲ್ಲರು. ಕ್ರಿಯೇಟಿವ್ ಕಾರ್ನರ್ ಎಂಬ ಯೂ-ಟ್ಯೂಬ್ ಚಾನೆಲ್ ಕೂಡ ಇವರು ಮಾಡಿದ್ದಾರೆ.

ಶಾಲೆಯ ಛಾವಣಿ ದುರಸ್ತಿಯಾಗಿದೆ. ಗಾರೆ ಕೆಲಸ ನಡೆಯುತ್ತಿದೆ. ಆದರೆ ಮಕ್ಕಳಿಗೆ ಡೆಸ್ಕ್‌, ಬೆಂಚ್ ಗಳ ಕೊರತೆಯಿದೆ. ಇಬ್ಬರು ಶಿಕ್ಷಕರ ಅಗತ್ಯವಿದೆ.

ಸೋಮವಾರ ಶಾಲೆಯಲ್ಲಿ ಪ್ರಾರಂಭೋತ್ಸವ ಸಂಭ್ರಮದಿಂದ ನೆರವೇರಿತು. ಮಕ್ಕಳಿಗೆ ಆರತಿ ಬೆಳಗಿ ಪುಷ್ಪಾರ್ಚನೆ ನಡೆಸಿ ಬರಮಾಡಿಕೊಳ್ಳಲಾಯಿತು. ಕುಕ್ಕೇಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅನಿತಾ, ಸದಸ್ಯ ದಿನೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಸ್ವಾತಿ, ಉಪಾಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು. .............65 ವರ್ಷಗಳ ಇತಿಹಾಸವಿರುವ ಶಾಲೆ ಇನ್ನೇನು ಮುಚ್ಚಿ ಹೋಗುತ್ತಿದೆ ಎಂಬ ಆತಂಕ ನಮ್ಮೆಲ್ಲರದ್ದಾಗಿತ್ತು. ಆದರೆ ಸಕಾಲದಲ್ಲಿ ಹಳೆ ವಿದ್ಯಾರ್ಥಿಗಳ, ಗ್ರಾಮ ಪಂಚಾಯಿತಿ ಆಡಳಿತದ, ಊರವರ ನೆರವು ಮತ್ತು ಆಶೀರ್ವಾದದಿಂದ ಶಾಲೆಯಲ್ಲಿ ಮಕ್ಕಳ ಕಲರವ ಕೇಳಿಸುತ್ತಿದೆ. ಇದಕ್ಕೆ ಮಾಧ್ಯಮಗಳ ಸಹಕಾರವೂ ಕಾರಣ.

- ಫ್ಲೇವಿಯಾ ಡಿ ಸೋಜ, ಮುಖ್ಯ ಅಧ್ಯಾಪಿಕೆ.ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದಕ್ಕೆ ಫಂಡಿಜೆ ಶಾಲೆಯ ಬೆಳವಣಿಗೆಯೇ ಸಾಕ್ಷಿ. ಮುಂದೆಯೂ ಮಕ್ಕಳ ಸಂಖ್ಯೆ ಹೆಚ್ಚಾಗುವಲ್ಲಿ ನಿರಂತರ ಪ್ರಯತ್ನ ಅಗತ್ಯ.

- ಸ್ವಾತಿ, ಎಸ್ ಡಿ ಎಂ ಸಿ ಅಧ್ಯಕ್ಷೆ