ಮದ್ದೂರು ಜಿಟಿಟಿಸಿಗೆ ಪ್ರವೇಶಾತಿ ಆರಂಭ: ಟಿ.ಶಿವಕುಮಾರ್

| Published : May 14 2025, 12:16 AM IST

ಮದ್ದೂರು ಜಿಟಿಟಿಸಿಗೆ ಪ್ರವೇಶಾತಿ ಆರಂಭ: ಟಿ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿನ ಎಲ್ಲ ಕೋರ್ಸ್‌ಗಳಿಗೆ ಹತ್ತನೇ ತರಗತಿ ಉತ್ತೀರ್ಣರಾದವರು ನಾಲ್ಕು ವರ್ಷ ಮತ್ತು ದ್ವಿತೀಯ ಪಿಯುಸಿ, ಐಟಿಐ ಉತ್ತೀರ್ಣರಾದವರು ೩ ವರ್ಷಕ್ಕೆ ಪ್ರವೇಶ ಪಡೆಯಬಹುದಾಗಿದೆ. ಆಸಕ್ತಿ ಉಳ್ಳವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಕಾಲೇಜಿನಲ್ಲಿ ನೇರವಾಗಿ ಅರ್ಜಿ ಪಡೆದು ಸಲ್ಲಿಸಬಹುದಾಗಿತ್ತು. ಆದರೆ ಈಗ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಬದಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ೨೦೨೫- ೨೬ನೇ ಸಾಲಿನ ಪ್ರವೇಶ ಆರಂಭಗೊಂಡಿದ್ದು, ನೂತನವಾಗಿ ಎರಡು ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ ಎಂದು ಕೇಂದ್ರದ ಪ್ರಾಂಶುಪಾಲ ಟಿ.ಶಿವಕುಮಾರ್ ತಿಳಿಸಿದರು.

ಕೇಂದ್ರದಲ್ಲಿ ಇದುವರೆಗೂ ಡಿಪ್ಲೊಮಾ ಇನ್ ಟೂಲ್ ಡೈ ಮೇಕಿಂಗ್ ಕೋರ್ಸ್ ನಡೆಸಲಾಗುತ್ತಿದ್ದು, ಇದೀಗ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಅಟೋಮೇಷನ್ ರೋಬೋಟಿಕ್ಸ್ ಕೋರ್ಸ್‌ಗಳನ್ನು ನೂತನವಾಗಿ ಪರಿಚಯಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರದಲ್ಲಿನ ಎಲ್ಲ ಕೋರ್ಸ್‌ಗಳಿಗೆ ಹತ್ತನೇ ತರಗತಿ ಉತ್ತೀರ್ಣರಾದವರು ನಾಲ್ಕು ವರ್ಷ ಮತ್ತು ದ್ವಿತೀಯ ಪಿಯುಸಿ, ಐಟಿಐ ಉತ್ತೀರ್ಣರಾದವರು ೩ ವರ್ಷಕ್ಕೆ ಪ್ರವೇಶ ಪಡೆಯಬಹುದಾಗಿದೆ. ಆಸಕ್ತಿ ಉಳ್ಳವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಕಾಲೇಜಿನಲ್ಲಿ ನೇರವಾಗಿ ಅರ್ಜಿ ಪಡೆದು ಸಲ್ಲಿಸಬಹುದಾಗಿತ್ತು. ಆದರೆ ಈಗ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಬದಲಿಸಲಾಗಿದೆ ಎಂದು ವಿವರಿಸಿದರು.

ಕೋರ್ಸ್‌ನ ಮೊದಲ ವರ್ಷಕ್ಕೆ ೩೩,೨೦೦, ಎರಡನೇ ವರ್ಷಕ್ಕೆ ೨೬,೦೦೦, ಮೂರನೇ ವರ್ಷಕ್ಕೆ ೨೬,೦೦೦ ಮತ್ತು ನಾಲ್ಕನೆ ವರ್ಷಕ್ಕೆ ೧೧,೦೦೦ ರು. ಶುಲ್ಕವಿದ್ದು, ಮೊದಲ ಮೂರು ವರ್ಷಗಳು ವಿದ್ಯಾರ್ಥಿ ವೇತನದ ಮೂಲಕ ಹಿಂಪಡೆಯಲು ಅವಕಾಶ ಇರುತ್ತದೆ ಎಂದು ತಿಳಿಸಿದರು.

ಕೌಶಲ್ಯ ತರಬೇತಿ:

ಜಿಲ್ಲೆಯ ಪ್ರತಿ ಗ್ರಾಪಂನಿಂದ ಇಬ್ಬರಿಗೆ ನಮ್ಮ ಕೇಂದ್ರದಲ್ಲಿ ಕೌಶಲ್ಯ ತರಬೇತಿ ನೀಡಲಾಗಿದೆ. ಇತರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಕೆಲ ಅಭ್ಯರ್ಥಿಗಳಿಗೆ ನಮ್ಮ ಕೇಂದ್ರದಲ್ಲಿ ಒಂದು ವರ್ಷ ಅಥವಾ ಆರು ತಿಂಗಳ ಕೌಶಲ್ಯ ತರಬೇತಿಯನ್ನೂ ನೀಡಲಾಗುತ್ತದೆ. ಇದಕ್ಕೆ ೧೫೦೦ ರಿಂದ ೪೨೦೦ ರು.ಗಳವರೆಗೂ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಡೆಸಿದ ಉದ್ಯೋಗ ಮೇಳದಲ್ಲಿ ಕೌಶಲ್ಯ ತರಬೇತಿಗೆ ಆಯ್ಕೆಯಾದವರಿಗೆ ತರಬೇತಿ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿತ್ತು. ಆದರೆ ಈ ಬಗ್ಗೆ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಅನುಮತಿ ಪಡೆಯುವಂತೆ ತಿಳಿಸಿದ್ದೆವು. ಆ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಿಗೆ ನಿಗಧಿತ ಶುಲ್ಕ ಪಡೆದು ತರಬೇತಿ ನೀಡುವ ಬಗ್ಗೆ ನಮ್ಮ ನಿರ್ದೇಶಕರು ಚಿಂತನೆ ನಡೆಸಿದ್ದಾರೆ ಎಂದು ವಿವರಿಸಿದರು.

ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಇಂಜಿನಿಯರಿಂಗ್ ಕಾಲೇಜಿನ ಸುಮಾರು ೯೦೦ ಮಂದಿ ವಿದ್ಯಾರ್ಥಿಗಳು ಕೌಶಲ್ಯ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪನ್ಯಾಸಕರಾದ ನರೇಂದ್ರಬಾಬು, ಶರತ್‌ರಾಜ್ ಅರಸ್ ಇದ್ದರು.