ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಮಾಣವು ಜಗತ್ತಿನಾದ್ಯಾಂತ ಅತೀ ತೀವ್ರವಾಗಿ ಹೆಚ್ಚುತ್ತಿದ್ದು, ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪ ಬೊಮ್ಮ ಹೇಳಿದರು.
ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಮಾಣವು ಜಗತ್ತಿನಾದ್ಯಾಂತ ಅತೀ ತೀವ್ರವಾಗಿ ಹೆಚ್ಚುತ್ತಿದ್ದು, ಇದಕ್ಕೆ ಮುಖ್ಯವಾಗಿ ತಂಬಾಕು ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅಧಿಕ ತೂಕ ಮತ್ತು ಮಧ್ಯಪಾನ ಸೇವನೆ ಮುಖ್ಯ ಕಾರಣಗಳಾಗಿದೆ, ಪುರುಷರಲ್ಲಿ ಪ್ರಮುಖವಾಗಿ ಶ್ವಾಸಕೋಶ, ಜಠರ ಮತ್ತು ಅನ್ನನಾಳ ಹಾಗೂ ಪ್ರೋಸ್ಟೆಟ್ ಕ್ಯಾನ್ಸರ್‌ಗಳು ಹಾಗೂ ಮಹಿಳೆಯರಲ್ಲಿ ಅಧಿಕವಾಗಿ ಸ್ತನ ಮತ್ತು ಗರ್ಭಕಂಠವು ಕ್ಯಾನ್ಸರ್‌ನ ಪ್ರಮುಖ ತಾಣಗಳಾಗಿವೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಧ್ಯಾನೇಶ್ವರ ನಿರಗೂಡೆಯವರು ಕಾರ್ಯಕ್ರಮ ಉದ್ಘಾಟಿಸಿ, ಹಸಿರು ಧ್ವಜ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಪ್ರಾರಂಭವಾಗಿ ಜನವಾಡಾ ರಸ್ತೆ ಮಾರ್ಗವಾಗಿ ಡಾ. ಅಂಬೇಡ್ಕರ್ ವೃತ್ತದ ಮೂಲಕ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿವರೆಗೆ ನಡೆಯಿತು.
ಜಾಥಾದಲ್ಲಿ ಎಸ್‌ಬಿ ಪಾಟೀಲ್ ದಂತ ವೈದ್ಯಕೀಯ ಸಂಸ್ಥೆ ಹಾಗೂ ಸರ್ಕಾರಿ ನರ್ಸಿಂಗ್ ಕಾಲೇಜು ಬ್ರಿಮ್ಸ್ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಭಿತ್ತಿ ಚಿತ್ರಗಳು, ಘೋಷಣೆಗಳ ಮೂಲಕ ಕ್ಯಾನ್ಸರ್ ಕುರಿತು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಶಿವಶಂಕರ ಬಿ., ಡಾ. ರಾಜಶೇಖರ ಪಾಟೀಲ್, ಡಾ. ಕಿರಣ ಪಾಟೀಲ್, ಡಾ. ದಿಲೀಪ ಡೊಂಗ್ರೆ, ಡಾ. ಸಂಗೀತಾ, ಡಾ. ಸಿದ್ದನಗೌಡ, ಡಾ. ವೀರೇಶ ಬಿರಾದರ ಸೇರಿದಂತೆ ಇಲ್ಲಾಖೆ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.