ಉತ್ತಮ ವಿದ್ಯಾಭ್ಯಾಸದ ಜತೆಗೆ ಸಂಸ್ಕಾರ ಅಳವಡಿಸಿಕೊಳ್ಳಿ: ಭೀಮಣ್ಣ ನಾಯ್ಕ

| Published : Jun 03 2024, 12:30 AM IST

ಉತ್ತಮ ವಿದ್ಯಾಭ್ಯಾಸದ ಜತೆಗೆ ಸಂಸ್ಕಾರ ಅಳವಡಿಸಿಕೊಳ್ಳಿ: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ನಾಮಧಾರಿ ಸಮಾಜದವರು ಸಂಸ್ಕಾರವನ್ನು ಮೈಗೂಡಿಸಿಕೊಂಡು ಉನ್ನತ ಸ್ಥಾನಮಾನ ಗಳಿಸಬೇಕಾಗಿದೆ.

ಗೋಕರ್ಣ: ಉತ್ತಮ ವಿದ್ಯಾಭ್ಯಾಸದೊಂದಿಗೆ ರ್ಯಾಂಕ್‌ ಬಂದು ಒಳ್ಳೆಯ ಅಂಕ ಪಡೆದರೆ ಸಾಲದು. ಇದರ ಜತೆ ಸಂಸ್ಕಾರ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಶುಕ್ರವಾರ ಸಂಜೆ ಗಂಗಾವಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ನಾಮಧಾರಿ ಸಮಾಜ ಸಂಘದ 24ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಮಧಾರಿ ಸಮಾಜದವರು ಇದನ್ನು ಮೈಗೂಡಿಸಿಕೊಂಡು ಉನ್ನತ ಸ್ಥಾನಮಾನ ಗಳಿಸಬೇಕಾಗಿದೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ನಮ್ಮ ಸಮಾಜದ ಅಭಿವೃದ್ಧಿಯೊಂದಿಗೆ ಇತರ ಸಮಾಜದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿ ಸಾಮರಸ್ಯದಿಂದ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಜಿಲ್ಲಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ ಮಾತನಾಡಿ, ನಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂದರೆ ಅದು ಶಿಕ್ಷಣ ಮಾತ್ರ. ಯಾವುದೇ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಬೇಕಾದರೆ ನಾವು ಮೊದಲು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಅದಕ್ಕೆ ತಕ್ಕಂತೆ ಪಾಲಕರು ತಮ್ಮ ಮಕ್ಕಳಿಗೆ ನೈತಿಕತೆಯನ್ನು ಕೂಡ ಕಲಿಸಬೇಕು ಎಂದರು.

ನಾಮಧಾರಿ ಸಮಾಜ ಸಂಘದ ಅಧ್ಯಕ್ಷ ಶ್ರೀನಿವಾಸ ಜಿ. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ನಾವು ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಜತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಅವರಿಗೆ ಬಹುಮಾನ ನೀಡುತ್ತ ಬಂದಿದ್ದೇವೆ ಎಂದರು.

ಜಿಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ಪಿ. ನಾಯ್ಕ ಅಂಕೋಲಾ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಂಕೋಲಾ ಘಟಕದ ಅಧ್ಯಕ್ಷ ದಾಮೋದರ ಜಿ. ನಾಯ್ಕ, ಆರ್ಯ ಈಡಿಗ ನಾಮಧಾರಿ ಸಂಘದ ಉಪಾಧ್ಯಕ್ಷ ಅರುಣ ಜಿ. ನಾಯ್ಕ, ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ, ವಕೀಲ ಅರವಿಂದ ಎನ್. ನಾಯ್ಕ ಮಾತನಾಡಿದರು.

ಕುಮಟಾ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್. ನಾಯ್ಕ ಉಪಸ್ಥಿತರಿದ್ದರು. ತನುಷಾ ನಾಯ್ಕ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಮಂಜುನಾಥ ಆರ್. ನಾಯ್ಕ ಸ್ವಾಗತಿಸಿದರು. ಉಮೇಶ ಎಲ್. ನಾಯ್ಕ ವರದಿ ವಾಚಿಸಿದರು. ಶಿಕ್ಷಕ ನಾಗರಾಜ ಹನೇಹಳ್ಳಿ ನಿರ್ವಹಿಸಿದರು. ರಾಮದಾಸ ನಾಯ್ಕ ವಂದಿಸಿದರು.

ಸನ್ಮಾನ-ಪುರಸ್ಕಾರ: ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುರಸ್ಕರಿಸಲಾಯಿತು. ಇದರಂತೆ ನಾಮಧಾರಿ ಸಮಾಜದ ವತಿಯಿಂದ ಶಾಸಕ ಭೀಮಣ್ಣ ನಾಯ್ಕ, ಪ್ರಮುಖರಾದ ತುಕಾರಾಮ ಲೋಕಪ್ಪ ನಾಯ್ಕ, ಗಣಪತಿ ಸುಬ್ಬು ನಾಯ್ಕ ಅವರನ್ನು ಗೌರವಿಸಲಾಯಿತು.