ಸರ್ಕಾರಿ ಬೋರ್ ವೆಲ್ ಅಕ್ರಮ ಸ್ವಾಧೀನಕ್ಕೆ ಖಂಡನೆ

| Published : Jun 03 2024, 12:30 AM IST

ಸಾರಾಂಶ

ಗ್ರಾಮದ ಮಧ್ಯಭಾಗದಲ್ಲಿ ಕಳೆದ 30 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಿಸಿ ಕೈ ಪಂಪು ಹಾಕಲಾಗಿತ್ತು. ಈ ಬೋರ್ ನಿಂದ ಸುತ್ತಮುತ್ತಲಿನ ಡೈರಿ, ಆಸ್ಪತ್ರೆ, ಶಾಲಾ ಮಕ್ಕಳಿಗೆ, ಹಿಂದುಳಿದ, ದಲಿತ ಪರಿಶಿಷ್ಟ ವರ್ಗದ ಜನರು ಕುಡಿಯುವ ನೀರನ್ನು ಪೂರೈಸಿಕೊಳ್ಳುತ್ತಿದ್ದರು.

ಕನ್ನಡಪ್ರಭ ವಾರ್ತೆ ಭಾರತೀನಗರ

ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿದ್ದ ಕೈ ಪಂಪ್ ಬೋರ್ ವೆಲ್ ಅನ್ನು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಖಾಸಗಿಯವರಿಗೆ ಹರಾಜು ಹಾಕಿದ್ದಾರೆ ಎಂದು ಆರೋಪಿಸಿ ಮಳವಳ್ಳಿ ತಾಲೂಕು ರೈತ ಮುಖಂಡ ಮುತ್ತುರಾಜು ಮಂಡ್ಯಕ್ಕೆ ಏಕಾಂಗಿ ಪಾದಯಾತ್ರೆ ಹಮ್ಮಿಕೊಂಡು ಹೋರಾಟ ನಡೆಸಿದ್ದಾರೆ.

ಶನಿವಾರ ಬೆಳಗ್ಗೆ ಅಂಬೇಡ್ಕರ್, ರೈತ ಮುಖಂಡ ಸಿಎಸ್.ಪುಟ್ಟಣ್ಣಯ್ಯ ಭಾವಚಿತ್ರವಿರುವ ನಾಮಫಲಕವನ್ನು ಹಾಕಿಕೊಂಡು ಮಳವಳ್ಳಿ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಿಂದ ಸೈಕಲ್ ತಳ್ಳಿಕೊಂಡು 40 ಕಿಮೀವರೆಗೆ ಪಾದಯಾತ್ರೆ ತೆರಳುತ್ತಿದ್ದಾರೆ.

ಗ್ರಾಮದ ಮಧ್ಯಭಾಗದಲ್ಲಿ ಕಳೆದ 30 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಿಸಿ ಕೈ ಪಂಪು ಹಾಕಲಾಗಿತ್ತು. ಈ ಬೋರ್ ನಿಂದ ಸುತ್ತಮುತ್ತಲಿನ ಡೈರಿ, ಆಸ್ಪತ್ರೆ, ಶಾಲಾ ಮಕ್ಕಳಿಗೆ, ಹಿಂದುಳಿದ, ದಲಿತ ಪರಿಶಿಷ್ಟ ವರ್ಗದ ಜನರು ಕುಡಿಯುವ ನೀರನ್ನು ಪೂರೈಸಿಕೊಳ್ಳುತ್ತಿದ್ದರು.

ಇತ್ತೀಚೆಗೆ ಬರಗಾಲ ಆವರಿಸಿದ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಗ್ರಾಪಂ ಅಧ್ಯಕ್ಷ ಚಿಕ್ಕಣ್ಣಗೌಡ ಶುದ್ಧ ಕುಡಿಯುವ ನೀರಿನ ಘಟಕಕ್ಕೆಂದು 500 ರು. ಬಾಡಿಗೆಗೆ ಪಡೆದು ಸದರಿ ಕೈ ಪಂಪ್ ಅಳವಡಿಸಿದ್ದ ಬೋರ್ ವೆಲ್ ಗೆ ಮೋಟರ್ ಬಿಡಿಸಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದರು.

ಆದರೆ, ಆ ಘಟಕವನ್ನು ಚಿಕ್ಕಣ್ಣಗೌಡ 15,500 ಸಾವಿರ ರು.ಗಳಿಗೆ ಟೆಂಡರ್ ಮೂಲಕ ಮಾರಾಟ ಮಾಡಿದ್ದಾರೆ. ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಖಾಸಗಿಯವರಿಗೆ ಒಂದು ಬೋರ್ ವೆಲ್ ಗೆ 8 ಸಾವಿರ ರು. ಗ್ರಾಪಂ ನೀಡುತ್ತಿದೆ. ಈ ಬಗ್ಗೆ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಯವರಿಗೆ ಏ.4 ರಂದು ಮನವಿ ಸಲ್ಲಿಸಿದ್ದೆ. ಆದರೆ, ಅಧಿಕಾರಿಗಳಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುತ್ತುರಾಜು ತಿಳಿಸಿದರು.

ನನಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲು ಸಿದ್ದನಿದ್ದು, ಕ್ಯಾತನಹಳ್ಳಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ, ಜಿಪಂ ಸಿಇಒ , ಎಸ್ಪಿ, ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಶನಿವಾರ ಬೆಳಗ್ಗೆ ಅಂಬೇಡ್ಕರ್, ರೈತ ಮುಖಂಡ ಸಿಎಸ್.ಪುಟ್ಟಣ್ಣಯ್ಯ ಭಾವಚಿತ್ರವಿರುವ ನಾಮಫಲಕವನ್ನು ಹಾಕಿಕೊಂಡು ಮಳವಳ್ಳಿ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಿಂದ ಸೈಕಲ್ ತಳ್ಳಿಕೊಂಡು 40 ಕಿಮೀ ವರೆಗೆ ಪಾದಯಾತ್ರೆ ತೆರಳುತ್ತಿದ್ದಾರೆ. ಮಾರ್ಗ ಮಧ್ಯೆ ಯಾವುದಾದರೂ ಗ್ರಾಮದಲ್ಲಿ ಸಾರ್ವಜನಿಕರ ಪಡಸಾಲೆ ಮೇಲೆ ಕಾಲ ಕಳೆದು ನಂತರ ಭಾನುವಾರ ಮಂಡ್ಯ ತಲುಪಿ ಸೋಮವಾರ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.