ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರೈತರು ಹಳೆಯ ಕೃಷಿ ಚಟುವಟಿಕೆ ಪದ್ಧತಿಯಲ್ಲಿ ಮಾರ್ಪಾಡು ಮಾಡಿ ಹೊಸ ಕೃಷಿ ಪದ್ಧತಿಯೊಂದಿಗೆ ಯಾಂತ್ರಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಿತ ಸಂಯೋಜಿತ ಬೇಸಾಯ ಯೋಜನಡಿ ಪ್ರಾತ್ಯಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಚಟುವಟಿಕೆಯಲ್ಲಿ ಅಧಿಕ ಪ್ರಮಾಣದ ನೀರನ್ನು ಬಳಕೆ ಮಾಡಿ ಬೆಳೆ ಬೆಳೆಯುತ್ತಾರೆ. ರೈತರು ಅಧಿಕಾರಿಗಳ ಜತೆ ಚರ್ಚೆ ಮಾಡಿ ನೀರನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ಹನಿ ನೀರಾವರಿ ಯೋಜನೆ ಮೂಲಕ ಭೂಮಿ ಫಲವತ್ತತೆ ಮತ್ತು ಸಾರಾಂಶಗಳನ್ನು ಕಾಪಾಡಿಕೊಂಡು ಹೆಚ್ಚಿನ ಲಾಭ ತರುವಂತೆ ಕಿವಿಮಾತು ಹೇಳಿದರು.ಮಂಡ್ಯ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಅನುದಾನ ನೀಡಲಾಗಿದೆ. ಕೃಷಿ ಸಚಿವರು ಜಿಲ್ಲೆಯವರೆ ಆಗಿದ್ದು, ಕೃಷಿ ಚಟುವಟಿಕೆಗೆ ಅನುಗುಣವಾಗಿ ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಸಬ್ಸಿಡಿ ಸಮರ್ಪಕವಾಗಿ ಬಳಸಿಕೊಂಡು ತಾಂತ್ರಿಕ ವಸ್ತುಗಳನ್ನು ಖರೀದಿಸಿ ಯಾಂತ್ರಿಕ ಬೇಸಾಯ ಕ್ರಮ ಅನುಸರಿಸುವಂತೆ ಸಲಹೆ ನೀಡಿದರು.
ಕೃಷಿ ಜತೆಗೆ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಹಾಗೆಯೇ ತೆಂಗು ಅಡಿಕೆ, ಬಾಳೆ, ತರಕಾರಿ ಬೆಳೆಗಳಂತಹ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಬೇಸಾಯಕ್ಕೆ ಮುನ್ನುಡಿ ಬೆರೆಯಿರಿ ಎಂದರು.ರೈತರು ತೆಂಗಿನ ಬೆಳೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ತೆಂಗು ಬೆಳೆಯಲ್ಲಿ ಮತ್ತಷ್ಟು ಉತ್ತೇಜನ ದೊರೆತು ರೈತರಿಗೆ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ತೆಂಗು ಅಭಿವೃದ್ಧಿ ಮಂಡಳಿ ನಿರ್ದೇಶಕ ಹನುಮಂತೇಗೌಡ ಮಾತನಾಡಿ, ಏಷ್ಯಾದಲ್ಲೇ ದೊಡ್ಡ ಎಳನೀರು ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆ ಮದ್ದೂರು ತಾಲೂಕು. ಇಲ್ಲಿನ ಎಳನೀರಿಗೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರು.ಜಿಲ್ಲೆಯ ಹಾಗೂ ತಾಲೂಕಿನ ಜನತೆ ತೆಂಗು ಬೆಳೆಗೆ ಹೆಚ್ಚಿನ ಮಹತ್ವ ನೀಡಬೇಕು ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ತೆಂಗಿನ ಬೆಳೆಗೆ ಹೆಚ್ಚಿನ ಸವಲತ್ತು ನೀಡಲಾಗುವುದು ಎಂದರು.
ಈ ವೇಳೆ ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ಬೇವಿನ ಹಿಂಡಿ, ರಾಸಾಯನಿಕ ಗೊಬ್ಬರ, ಸಲ್ಫ್ರೆಟ್, ಬೋರಾಕ್ಸ್, ಪಂಗಿಸೈಡ್ ಮತ್ತು ಮೈಕ್ರೋ ನ್ಯೂಟ್ರಿಯಂಟ್ ಗೊಬ್ಬರಗಳನ್ನು ಉಚಿತವಾಗಿ ವಿತರಿಸಲಾಯಿತು.ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಶ್, ಹಿರಿಯ ತೋಟಗಾರಿಕೆ ಇಲಾಖೆ ನಿರ್ದೇಶಕಿ ರೇಖಾ, ಗ್ರಾಪಂ ಸದಸ್ಯ ಗುಡಿಗೆರೆ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.