ಜಮೀನಿನಲ್ಲಿ ತೋಟಗಾರಿಕೆ ಗಿಡಗಳನ್ನು ನೆಡುವುದರಿಂದ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಮತ್ತು ನಿರಂತರ ಆದಾಯ ಪಡೆಯಬಹುದು. ಬದುವಿನಲ್ಲಿ ಅರಣ್ಯ ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿ ಸಿಗುವುದರಿಂದ ದೀರ್ಘ ಕಾಲದಲ್ಲಿ ಇದರ ಉಪಯೋಗ ಪಡೆಯಬಹುದು. ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಅನುಕೂಲಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಜಲಾನಯನ ಯೋಜನೆ ರೈತರಿಗೆ ವರದಾನವಾಗಿದೆ. ಬದು ನಿರ್ಮಾಣದಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು ಮತ್ತು ಅಂತರ್ಜಲ ಮಟ್ಟ ಹೆಚ್ಚಳವಾಗಿ ನೀರಾವರಿ ಕ್ಷೇತ್ರ ಹೆಚ್ಚಳವಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆಯ ನೇತೃತ್ವದಲ್ಲಿ ಶನಿವಾರ ಸಂಜೆ ನಡೆದ ಜಲಾನಯನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ರೈತರು ತಮ್ಮ ಹೊಲಗಳಿಗೆ ಬದು ನಿರ್ಮಾಣವನ್ನೇ ಮಾಡುವುದನ್ನು ಕೈಬಿಟ್ಟಿದ್ದಾರೆ. ಇದರಿಂದ ಮಳೆ ಬಂದಾಗ ನೀರು ಭೂಮಿ ನಿಲ್ಲದೇ ಹರಿದು ಹೋಗಿ ಭೂಮಿಯ ಫಲವತ್ತತೆ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಬರೀ ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಿ ಔಷಧ ಬಳಸುತ್ತಿರುವುದರಿಂದ ಆಹಾರದಲ್ಲಿ ಸತ್ವ ಕಳೆದುಕೊಳ್ಳುವಂತಾಗುತ್ತಿದೆ. ಕಾರಣ ರೈತರು ಕೃತಕ ಗೊಬ್ಬರ ಬಳಸುವ ಮೂಲಕ ಸಾವಯುವ ಕೃಷಿ ಪದ್ಧತಿ ಹಾಗೂ ಮಿಶ್ರಬೆಳೆಗಳನ್ನು ಬೆಳೆಯುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕೇದ್ರ ಹಾಗೂ ರಾಜ್ಯ ಸರಕಾರಗಳು ಸಮನಯ್ವ ಒಡಂಡಿಕೆಯಿಂದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಆದರೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸಕಾರಾತ್ಮಕ ಸ್ಪಂದನೆ ನೀಡುತ್ತಿಲ್ಲ. ಕಬ್ಬು ಸೇರಿದಂತೆ ರೈತರು ಬೆಳೆದ ಯಾವೂದೇ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಗೊಳಿಸಬೇಕಾಗುತ್ತದೆ. ಆದರೆ ನಮ್ಮ ಮುಖ್ಯಮಂತ್ರಿಗಳು ರೈತರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ನಿಗದಿ ಮಾಡುವ ಮೂಲಕ ರೈತರ ಧ್ವನಿಯಾಗಿ ನಿಂತಿದೆ. ಜಲಾನಯನ ಯೋಜನೆಯಿಂದ ಸುಮಾರು 2800 ಹೆಕ್ಟೇರ್ ಜಮೀನು ಅಭಿವೃದ್ಧಿ ಪಡಿಸಲಾಗುವ ಮಹತ್ತರ ಯೋಜನೆ ಇದಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ವಿಜಯಪುರ ಉಪ ಕೃಷಿ ನಿರ್ದೇಶಕ ಶರಣಗೌಡ.ಆರ್ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡ ಅವರ ಪರಿಶ್ರಮದಿಂದ ನಮ್ಮ ತಾಲೂಕಿಗೆ ಜಲಾನಯನ ಯೋಜನೆ ಬಂದಿರುವುದು ನಿಮ್ಮ ಭಾಗ್ಯ. ಈ ಯೋಜನೆಯಡಿ ಮುಖ್ಯವಾಗಿ ರೈತರಿಗೆ ಮಣ್ಣಿನ ಬದು, ತೋಟಗಾರಿಕೆ, ಕೃಷಿ ಅರಣ್ಯ, ಪಶು ಸಂಗೋಪನೆ ಮತ್ತು ಆಸ್ತಿ ರಹಿತರಿಗೆ ಜೀವನೋಪಾಯಕ್ಕಾಗಿ ಕೂಲಿ ಕೆಲಸದ ಜೊತೆಗೆ ಮಹಿಳೆಯರಿಗೆ ಸ್ವ-ಉದ್ಯೋಗ ಮಾಡಲು, ಹವಾಮಾನ ಬದಲಾವಣೆ ಇಂತಹ ಹಲವಾರು ಸಲಹೆ ಸೂಚನೆಗಳ ಮಾಹಿತಿ ಸಿಗಲಿದೆ ಎಂದು ಹೇಳಿದರು.
ಈ ವೇಳೆ ರೈತರಿಗೆ ಕೃಷಿ ಪರಿಕರ ವಿತರಿಸಲಾಯಿತು. ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಕೃಷಿ ಇಲಾಖೆ ವತಿಯಿಂದ ಕವಡಿಮಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಗೆ 92 ಡೆಸ್ಕ್‌ಗಳನ್ನು ವಿತರಿಸಲಾಯಿತು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎ.ಎಂ ಸಾವಳಗಿ ವಿಶೇಷ ಉಪನ್ಯಾಸ ನೀಡಿದರು. ಕವಡಿಮಟ್ಟಿ ಗ್ರಾಪಂ ಅಧ್ಯಕ್ಷೆ ಶಕುಂತಲಾ ಚಂದಾಲಿಂಗ ಹಂಡರಗಲ, ತಾಲೂಕು ಕೃಷಿ ಸಹಾಯ ನಿರ್ದೇಶಕ ಎಸ್.ಡಿ ಭಾವಿಕಟ್ಟಿ, ಕೃಷಿ ಅಧಿಕಾರಿ ಅರವಿಂದ ಹೂಗಾರ, ಸೋಮನಗೌಡ ಬಿರಾದಾರ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್ ಸಾವಳಗಿ, ಕೃಷಿ ಅಧಿಕಾರಿ ಗೋವಿಂದ ರೆಡ್ಡಿ ಮೆದಿಕಿನಾಳ, ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್ ಟಿ ಹಿರೇಮಠ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪಾಟೀಲ, ಮುಖಂಡರಾದ ಸಂಗನಗೌಡ ಪಾಟೀಲ, ಚಂದಾಲಿಂಗ ಹಂಡರಗಲ, ಸಿದ್ರಾಮಪ್ಪ ವಾಲಿಕಾರ ಸೇರಿದಂತೆ ಹಲವರು ಇದ್ದರು.