ಸಾರಾಂಶ
ರಾಣಿಬೆನ್ನೂರು: ರೈತರು ಆದಾಯವನ್ನು ಹೆಚ್ಚಿಸಲು ಕೃಷಿಯೊಂದಿಗೆ ಕುರಿ ಮತ್ತು ಆಡು ಸಾಕಾಣಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ವೈಜ್ಞಾನಿಕ ಕುರಿ ಮತ್ತು ಆಡು ಸಾಕಾಣಿಕೆ ಕುರಿತು ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನುವಾರು ಸಾಕಾಣಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಂಡರೆ ಹವಾಮಾನ ವೈಪರೀತ್ಯದಿಂದ ಆಗುವ ಹಾನಿಯನ್ನು ಕಡಿಮೆಗೊಳಿಸಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಕುರಿ ಮತ್ತು ಆಡುಗಳನ್ನು ಮಾರುವುದರಿಂದ ಲಾಭದ ಜತೆಯಲ್ಲಿ ಅವುಗಳ ಹಿಕ್ಕೆಯಿಂದ ಉತ್ತಮ ಗೊಬ್ಬರವು ದೊರಕುತ್ತದೆ ಎಂದು ವಿವರಿಸಿದರು. ರಾಣಿಬೆನ್ನೂರಿನ ಪ್ರಗತಿಪರ ರೈತ ಚಂದ್ರಪ್ಪ ನಾಗೇನಹಳ್ಳಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ಹಮ್ಮಿಕೊಂಡಿರುತ್ತಾರೆ. ಇದರಿಂದ ರೈತರಿಗೆ ವೈಜ್ಞಾನಿಕ ಮತ್ತು ನೂತನ ತಾಂತ್ರಿಕತೆಗಳ ಮಾಹಿತಿ ಸರಿಯಾದ ಸಮಯದಲ್ಲಿ ದೊರಕುವಂತಾಗಿದೆ. ಕುರಿ ಮತ್ತು ಆಡು ಸಾಕಾಣಿಕೆ ಒಂದು ಪ್ರಮುಖ ಉದ್ಯೋಗವಾಗಿದ್ದು, ಜಿಲ್ಲೆಯ ಜನರು ಈ ತರಬೇತಿ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾತನಾಡಿ, ಕುರಿ ಮತ್ತು ಆಡುಗಳ ಸಾಕಾಣಿಕೆಗೆ ಕೇಂದ್ರ ಸರ್ಕಾರದ ನ್ಯಾಷನಲ್ ಲೈವ್ ಸ್ಟಾಕ್ ಮಿಷಿನ್ ಅಡಿಯಲ್ಲಿ ರೈತರು 100 + 5, 200 + 10, 300 + 15 ರೀತಿಯಲ್ಲಿ ಕುರಿ ಮತ್ತು ಆಡು ಸಾಕಾಣಿಕೆಗೆ ಶೇ. 50 ರಷ್ಟು ಸಹಾಯ ಧನದಲ್ಲಿ ಶೆಡ್ ಮತ್ತು ಜಾನುವಾರು ಖರೀದಿಗೆ ಆರ್ಥಿಕ ಸಹಾಯ ನೀಡಲಾಗಿದೆ. ಕುರಿ ಮತ್ತು ಆಡುಗಳಿಗೆ ಬರುವ ವಿವಿಧ ರೋಗಗಳಾದ ಗಂಟಲು ಬೇನೆ, ಕರಳು ಬೇನೆ ಮತ್ತು ಪಿ.ಪಿ.ಆರ್ ರೋಗಗಳ ಚಿಕಿತ್ಸೆ ಮತ್ತು ತಡೆಗಟ್ಟಬಹುದಾದ ಕ್ರಮಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.ಕೇಂದ್ರದ ಬೇಸಾಯಶಾಸ್ತ್ರ ವಿಷಯ ತಜ್ಞೆ ಡಾ. ಸಿದ್ಧಗಂಗಮ್ಮ ಕೆ. ಆರ್. ಅವರು ಮಾತನಾಡಿ, ಕುರಿ ಮತ್ತು ಆಡುಗಳಿಗೆ ಏಕದಳ ಹಸಿರು ಮೇವು ಮತ್ತು ದ್ವಿದಳ ಹಸಿರು ಮೇವನ್ನು ಶೇ. 75:25 ರಷ್ಟು ನೀಡುವುದರಿಂದ ಹೆಚ್ಚಿನ ತೂಕವನ್ನು ಪಡೆಯಬಹುದು ಎಂದರು. ಕುರಿ ಉಣ್ಣೆಯ ಉತ್ಪನ್ನಗಳು ಮತ್ತು ಆಡಿನ ಹಾಲಿನ ಮಹತ್ವದ ಬಗ್ಗೆ ಕೇಂದ್ರದ ಗೃಹ ವಿಜ್ಞಾನದ ವಿಷಯ ತಜ್ಞೆ ಡಾ. ಅಕ್ಷತಾ ರಾಮಣ್ಣನವರ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ 50 ರೈತರಿಗೆ ಕೇಂದ್ರದ ಕುರಿ ಸಾಕಾಣಿಕೆ ಘಟಕ, ಅಝೋಲಾ ಘಟಕ ಮತ್ತು ಮೇವಿನ ತಾಕುಗಳಿಗೆ ಭೇಟಿ ನೀಡಿಸಲಾಯಿತು ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
;Resize=(128,128))
;Resize=(128,128))
;Resize=(128,128))