ಸಾರಾಂಶ
ಗದಗ: ಸದೃಢ ಮನಸ್ಸು, ಸದೃಢ ದೇಹ ರಚನೆಗಾಗಿ ವಿದ್ಯಾರ್ಥಿಗಳು ಕ್ರೀಡೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಅಳವಡಿಸಿಕೊಳ್ಳಬೇಕೆಂದು ಗ್ರಾಪಂ ಉಪಾಧ್ಯಕ್ಷ ಶ್ಯಾಮಸುಂದರ ಡಂಬಳ ಹೇಳಿದರು.
ತಾಲೂಕಿನ ಅಡವಿಸೋಮಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳು ಗ್ರಾಮೀಣ ವಲಯ ಗದಗ ಸಂಯುಕ್ತಾಶ್ರಯದಲ್ಲಿ ಜರುಗಿದ ಅಡವಿಸೋಮಾಪೂರ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಇಂದಿನ ಕಲುಷಿತ ವಾತಾವರಣ, ದೋಷಪೂರಿತ ಆಹಾರ ಸೇವನೆ ಹಾಗೂ ಒತ್ತಡಯುಕ್ತ ಬದುಕಿನಲ್ಲಿ ಆರೋಗ್ಯವು ಹಾಳಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿ ಜೀವನದಿಂದಲೇ ಪ್ರತಿನಿತ್ಯ ಕ್ರೀಡೆ ರೂಢಿಸಿಕೊಳ್ಳಬೇಕು. ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಈಗ ನಡೆದಿರುವ ಒಲಿಂಪಿಕ್ಸ್‌ನಲ್ಲಿ ಮಹಿಳೆಯರು ಹೆಚ್ಚು ಸಾಧನೆ ಮಾಡಿದ್ದು ಬಾಲಕಿಯರು ಹೆಚ್ಚು ಭಾಗವಹಿಸಿ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಫ್.ವಿ. ಪೂಜಾರ ಮಾತನಾಡಿ, ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗೆ ಅಷ್ಟೇ ಪ್ರಾಮುಖ್ಯತೆ ನೀಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಭಾಗವಹಿಸಬೇಕು. ಹಿಂದಿಗಿಂತಲೂ ಈಗ ಕ್ರೀಡೆಗೆ ಉತ್ತಮ ಸ್ಥಾನಮಾನವಿದೆ ಎಂದರು.ಎಸ್ ಡಿಎಂಸಿ ಅಧ್ಯಕ್ಷ ಹನೀಪಸಾಬ ಕುಮನೂರು ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಕ ಪರೀವಿಕ್ಷಣ ಟಿ.ಎಸ್. ಪವಾರ, ಬಿ.ಆರ್.ಸಿ ಭಾವಿಕಟ್ಟಿ, ಗ್ರಾಪಂ ಸದಸ್ಯೆ ಬಸವ್ವ ಪುರದ, ಪ್ರಭಾರಿ ಮುಖ್ಯೋಪಾಧ್ಯಯಿನಿ ನೀಲಮ್ಮ ಅಂಗಡಿ, ಈರಣ್ಣ ಸೊರಟೂರು, ನಾಗರಾಜ, ಸೋಮನಕಟ್ಟಿ ಉಪಸ್ಥಿತರಿದ್ದರು.ದೈಹಿಕ ಶಿಕ್ಷಕ ಕೆ.ಎಚ್. ನವಲಗುಂದ ಸ್ವಾಗತಿಸಿದರು. ರೇಖಾ ಪಾಟೀಲ ನಿರೂಪಿಸಿದರು. ಗಾಯತ್ರಿ ವಸ್ತ್ರದ ವಂದಿಸಿದರು.