ಸಾರಾಂಶ
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು, ಮಕ್ಕಳು, ರೈತರು ನಾಗರ ಮೂರ್ತಿಗೆ ಹಾಲೆರೆದು ಪಂಚಮಿ ಹಬ್ಬ ಸಂಭ್ರಮ
ರೋಣ: ನಾಗರ ಪಂಚಮಿ ಅಂಗವಾಗಿ ರೋಣ ತಾಲೂಕಿನಾದ್ಯಂತ ಗುರುವಾರ ಮಹಿಳೆಯರು, ಮಕ್ಕಳಾದಿಯಾಗಿ ಕುಟುಂಬ ಸಮೇತ ನಾಗರ ಕಟ್ಟೆಗೆ ತೆರಳಿ, ನಾಗದೇವರ ಮೂರ್ತಿಗೆ ಹಾಲಿನ ಅಭಿಷೇಕಗೈದು ನಾಗರ ಪಂಚಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ನಾಗದೇವರ ಮೂರ್ತಿಗೆ ಹಾಲೆರೆಯಲು ಮಹಿಳೆಯರು ಕುಟುಂಬ ಸದಸ್ಯರೊಂದಿಗೆ ಹಾಲು, ಹುರಿದ ಅಳ್ಳು, ಎಳ್ಳು ಉಂಡೆ, ಅಳ್ಳಿಟ್ಟು ಉಂಡೆ, ಉಸುಳಿ (ನೆನಸಿದ ಕಡಲೆ) , ಕೊಕ್ಕಾಬತ್ತಿ, ಹಂಗನೂಲು, ಕಾಯಿ, ಕರ್ಪೂರ, ಹೂ, ಸಸಿಗಳಿಂದ ಪೋಣಿಸಿದ ಮಾಲೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ತೆರಳಿ ಪೂಜೆಗೈದು,ಹಾಲು ಎರೆಯುತ್ತಾ,ಅಣ್ಣನ ಪಾಲು, ತಮ್ಮನ ಪಾಲು, ತಂದೆಯ ಪಾಲು,ಅಮ್ಮನ ಪಾಲು ಅಜ್ಜನ ಪಾಲು, ಅಜ್ಜಿಯ ಪಾಲು, ಚಿಕ್ಕಪ್ಪನ ಪಾಲು, ಚಿಕ್ಕಮ್ಮನ್ನ ಪಾಲು, ತಂಗಿಯ ಪಾಲು, ಅಕ್ಕನ ಪಾಲು, ನನ್ನ ಪಾಲು, ಎಲ್ಲರ ಪಾಲು ನಿನಗಿರಲಿ ನಾಗಪ್ಪ( ನಾಗದೇವ) ಎಂದು ಮಹಿಳೆ,ಮಕ್ಕಳೊಗೂಡಿ ವಿಶಿಷ್ಟ ರೀತಿಯಲ್ಲಿ ನಾಗರ ಮೂರ್ತಿಗೆ ಹಾಲು ಎರೆದು ಪ್ರಾರ್ಥನೆ ಸಲ್ಲಿಸಿದರು.ನಾಗಮೂರ್ತಿಗೆ ಹಾಲಿನ ಅಭಿಷೇಕ:
ಪಟ್ಟಣದ ಶಿವಪೇಟಿ ಬಡಾವಣೆಯ ರೋಣಮ್ಮದೇವಿ ದೇವಸ್ಥಾನ ಎದುರಿನ ನಾಗರ ಕಟ್ಟೆ, ಕೆಇಬಿ ಕಾಲನಿಯ ನಾಗರ ಕಟ್ಟೆ, ನೀರಾವರಿ ಇಲಾಖೆಯ ಗಣೇಶ ದೇವಸ್ಥಾನದ ನಾಗರ ಕಟ್ಟಿ, ಬಿ.ಆರ್. ಅಂಬೇಡ್ಕರ ನಗರದ ನಾಗರ ಕಟ್ಟೆ, ವೀರಭದ್ರೇಶ್ವರ ದೇವಸ್ಥಾನದ ನಾಗರ ಕಟ್ಟೆ, ತಳವಾರ ಓಣಿಯ ನಾಗರ ಕಟ್ಟೆ, ಜಗ್ಗ ಓಣಿ ನಾಗಕಟ್ಟೆ, ಸಂತೋಜಿಯವರ ಓಣಿಬನಾಗ ಕಟ್ಟೆ, ಶಿವಾನಂದ ನಗರದಲ್ಲಿನ ನಾಗ ಕಟ್ಟೆ ಸೇರಿದಂತೆ, ಅಲ್ಲಲ್ಲಿ ಪ್ರತಿಷ್ಠಾಪಿಸಲಾದ ನಾಗರ ಕಟ್ಟೆಗಳಿಗೆ ತೆರಳಿ ಹಾಲೆರೆದು ಪೂಜಾ ಕೈಕಂರ್ಯ ನೆರವೇರಿಸಿದರು.ತಾಲೂಕಿನ ಅರಹುಣಸಿ, ಸವಡಿ, ಹಿರೇಹಾಳ, ಬೆಳವಣಕಿ, ಕೌಜಗೇರಿ, ಸಂದಿಗವಾಡ, ಹೊನ್ನಾಪೂರ, ಮುಗಳಿ, ಹೊಸಳ್ಳಿ, ಜಿಗಳೂರ, ಹಿರೇಮಣ್ಣೂರ, ಚಿಕ್ಕಮಣ್ಣೂರ, ಯಾ.ಸ. ಹಡಗಲಿ, ಡ.ಸ. ಹಡಗಲಿ, ಹೊಳೆ ಹಡಗಲಿ, ಹೊಳೆಮಣ್ಣೂರ, ಬೆನಹಾಳ, ಹುಲ್ಲೂರ, ಮುದೇನಗುಡಿ, ಮೇಲ್ಮಠ,ಕೃಷ್ಣಾಪೂರ, ರೋಣ, ಇಟಗಿ, ಹೊನ್ನಾಪೂರ, ಮುದೇನಗುಡಿ, ಸೋಮನಕಟ್ಟಿ, ಹೊಳೆಆಲೂರ, ಅಮರಗೋಳ, ಹೊಳೆಮಣ್ಣೂರ, ಮಾಳವಾಡ, ಯಾವಗಲ್ಲ, ಇಟಗಿ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು, ಮಕ್ಕಳು, ರೈತರು ನಾಗರ ಮೂರ್ತಿಗೆ ಹಾಲೆರೆದು ಪಂಚಮಿ ಹಬ್ಬವನ್ನು ಸಂಭ್ರಮಿಸಿದರು.