ಗ್ರಾಮೀಣ ಭಾಗದ ರೈತರಿಗೆ ರೇಷ್ಮೆ ಪ್ರಭಾವಿ ಹಾಗೂ ಲಾಭದಾಯಕ ಕೃಷಿಯಾಗಿದ್ದು, ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ವಿಜಯಪುರ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬಿ.ವೈ.ಬಿರಾದಾರ ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಗ್ರಾಮೀಣ ಭಾಗದ ರೈತರಿಗೆ ರೇಷ್ಮೆ ಪ್ರಭಾವಿ ಹಾಗೂ ಲಾಭದಾಯಕ ಕೃಷಿಯಾಗಿದ್ದು, ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ವಿಜಯಪುರ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬಿ.ವೈ.ಬಿರಾದಾರ ಹೇಳಿದರು.ತಾಲೂಕಿನ ಕಡ್ಲೇವಾಡ ಗ್ರಾಮದ ಸಾಹೇಬಗೌಡ ರೆಡ್ಡಿ ತೋಟದಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಜಿಪಂ ವಿಜಯಪುರ, ರೇಷ್ಮೆ ಇಲಾಖೆ ಸಿಂದಗಿ ಹಾಗೂ ತಾಪಂ ದೇವರಹಿಪ್ಪರಗಿ ಅಡಿಯಲ್ಲಿ ರೇಷ್ಮೆ ಕೃಷಿ ತಾಂತ್ರಿಕ ಕಾರ್ಯಗಾರ ಹಾಗೂ ರೇಷ್ಮೆ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಆಧುನಿಕ ತಾಂತ್ರಿಕತೆ ಬಳಕೆಯಿಂದ ರೇಷ್ಮೆ ಹುಳಗಳಿಗೆ ರೋಗಗಳ ಹಾವಳಿ ಇಲ್ಲ, ರೈತರು ವೈಜ್ಞಾನಿಕ ಪದ್ಧತಿಗಳಿಂದ ಕಡಿಮೆ ಖರ್ಚಿನಿಂದ ಹೆಚ್ಚು ಲಾಭದಾಯಕವಾಗಿದೆ ಎಂದರು.ರೈತರು ಕೃಷಿಗೆ ಪೂರಕವಾದ ರೇಷ್ಮೆ ಕೃಷಿಗೆ ಸುಧಾರಿತ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೃಷಿಯಲ್ಲಿ ಹನಿ ನೀರಾವರಿ ಬಳಕೆಯಿಂದ ನೀರಿನ ಮಿತವ್ಯಯ, ಹುಳ ಸಾಕಣೆ ಮನೆ ನಿರ್ವಹಣೆ, ಜೈವಿಕ ಗೊಬ್ಬರದ ಬಳಕೆ ಹಾಗೂ ಸರ್ಕಾರದಿಂದ ರೇಷ್ಮೆ ಬೆಳೆಗಾರರಿಗೆ ಸಿಗುವಂತ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿದರು.ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ (ಯಡಿಯಾಪೂರ) ತಾಂತ್ರಿಕ ಕಾರ್ಯಗಾರ ಹಾಗೂ ರೇಷ್ಮೆ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ರೇಷ್ಮೆ ಕೃಷಿ ಸಹಕಾರಿ. ಇಲಾಖೆಯಿಂದ ರೈತರು ಸರಿಯಾಗಿ ಈ ಬೆಳೆಯ ಬಗ್ಗೆ ತಿಳಿದುಕೊಂಡು ಕ್ರಮಬದ್ಧವಾಗಿ ಬೆಳೆದರೇ ವರ್ಷದಲ್ಲಿ 3 ರಿಂದ 4 ಬಾರಿ ಬೆಳೆ ತೆಗೆದು ಲಕ್ಷಾಂತರ ರುಪಾಯಿ ಸಂಪಾದಿಸಬಹುದು ಎಂದು ತಿಳಿಸಿದರು.ವಿಜಯಪುರ ರೇಷ್ಮೆ ವಿಸ್ತೀರ್ಣಾಧಿಕಾರಿ ಗಂಗಾಧರ ಜೇವೂರ ಮಾತನಾಡಿ, ಕೃಷಿ ಪದ್ಧತಿಯಲ್ಲಿ ಇಂದು ಹೊಸ, ಹೊಸ ತಂತ್ರಜ್ಞಾನ ಅಳವಡಿಕೆ ನಡೆಯುತ್ತಿದೆ. ರೈತರು ತಂತ್ರಜ್ಞಾನದ ಅಳವಡಿಕೆ ಮೂಲಕ ರೇಷ್ಮೆ ಕೃಷಿ ಲಾಭದಾಯಕವಾಗಿದೆ. ಈ ಭಾಗದಲ್ಲಿ ತಂತ್ರಜ್ಞಾನದ ಅರಿವು ಮೂಡಿಸುವ ಮೂಲಕ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚು ಹೇಳುವುದು ಪಡೆಯಬಹುದು ಎಂದು ತಿಳಿಸಿದರು.
ದೇವರಹಿಪ್ಪರಗಿ ರೇಷ್ಮೆ ಇಲಾಖೆಯ ಪ್ರಭಾರಾಧಿಕಾರಿ ಬಿ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ರೈತರಿಗೆ ರೇಷ್ಮೆ ಕೃಷಿಯಲ್ಲಿ ತಂತ್ರಜ್ಞಾನದ ಅರಿವು ಮೂಡಿಸುವ ಸಲುವಾಗಿ ತಂತ್ರಜ್ಞಾನ, ವಸ್ತು ಪ್ರದರ್ಶನಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಸಾಹೇಬಗೌಡ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಮಠ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಂದಗಿ ರೇಷ್ಮೆ ವಿಸ್ತೀರ್ಣಾಧಿಕಾರಿಗಳಾದ ಸುರೇಶ ಗೋಲಗೊಂಡ ನಿರೂಪಿಸಿ, ವಂದಿಸಿದರು.ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕರಾದ ಸಿದ್ದನಗೌಡ ಪಾಟೀಲ, ತಾಪಂ ಶಾಂತಗೌಡ ನ್ಯಾಮಣ್ಣವರ, ಚಿದಾನಂದ ಪೂಜಾರಿ, ಆರ್.ಬಿ.ಚೌದರಿ,ಶಿವಶರಣ ಅವರಾದಿ, ಸಂಗನಗೌಡ ತೆಗ್ಗಿನಮನಿ, ಅಶೋಕ ಸುಳೇಬಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.ರೇಷ್ಮೆ ಬೆಳೆ ಹಣದ ಹೊಳೆಯಾಗಿದ್ದು, ರಾಮನಗರಕ್ಕಿಂತಲೂ ನಮ್ಮ ರೇಷ್ಮೆಗೆ ಒಳ್ಳೆ ಬೆಲೆ ಇದೆ. ತಾಂತ್ರಿಕ ಯುಗದಲ್ಲಿ ರೈತರು ತಂತ್ರಜ್ಞಾನ ಬಳಸಿಕೊಂಡು ಕಬ್ಬು, ದ್ರಾಕ್ಷಿ, ರೇಷ್ಮೆ ಸೇರಿದಂತೆ ಹಲವಾರು ಬೆಳೆಗಳು ರೈತರು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದ ರೈತರು ಕೃಷಿಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಕ್ಷೇತ್ರಕ್ಕೆ ಆಹ್ವಾನಿಸುವ ಮೂಲಕ ಕಾರ್ಯಗಾರ ಹಮ್ಮಿಕೊಳ್ಳೋಣ.
-ಬಸನಗೌಡ ಪಾಟೀಲ (ಯಡಿಯಾಪೂರ), ಬಿಜೆಪಿ ಮುಖಂಡರು ಹಾಗೂ ಜಿಪಂ ಮಾಜಿ ಅಧ್ಯಕ್ಷರು.