ಮಹಾತ್ಮ ಗಾಂಧೀಜಿಯವರ ಹೇಳಿದ ಹಾಗೆ ಗ್ರಾಮಗಳು ಬೆಳೆದರೆ ದೇಶ ಬೆಳೆದಂತೆ. ಹೀಗಾಗಿ ಗಾಂಧೀಜಿಯವರ ಕನಸನ್ನು ನನಸು ಮಾಡಬೇಕಾದರೆ ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಗ್ರಾಮಗಳಲ್ಲಿ ಅತ್ಯುತ್ತಮ ಕಾರ್ಯಗಳನ್ನು ಕೈಗೊಳ್ಳಬೇಕು.

ಗದಗ: ಪ್ರತಿಯೊಬ್ಬರ ಜೀವನದಲ್ಲಿ ಮಾತುಗಳು ಕಡಿಮೆಯಾಗಬೇಕು. ಆ ವ್ಯಕ್ತಿಗಳು ಮಾಡಿದ ಕಾರ್ಯಗಳು ಮಾತನಾಡಬೇಕು. ಅದು ನಿಜವಾದ ಸೇವೆ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ತಿಳಿಸಿದರು.

ನಗರದ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಎನ್ಎಸ್ಎಸ್ ಕೋಶ ಧಾರವಾಡ ಹಾಗೂ ಐಸಿಎಆರ್ ಕೆ.ಎಚ್. ಪಾಟೀಲ ಕೆವಿಕೆ ಸಹಯೋಗದಲ್ಲಿ ಜಲ ಸಂರಕ್ಷಣೆ ಕುರಿತು ಜಿಲ್ಲಾ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಾಗರ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಹೇಳಿದ ಹಾಗೆ ಗ್ರಾಮಗಳು ಬೆಳೆದರೆ ದೇಶ ಬೆಳೆದಂತೆ. ಹೀಗಾಗಿ ಗಾಂಧೀಜಿಯವರ ಕನಸನ್ನು ನನಸು ಮಾಡಬೇಕಾದರೆ ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಗ್ರಾಮಗಳಲ್ಲಿ ಅತ್ಯುತ್ತಮ ಕಾರ್ಯಗಳನ್ನು ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಕೈಜೋಡಿಸುತ್ತಾ ಸಮಾಧಾನದ ಮೂಲಕ ಗ್ರಾಮದ ಜನರನ್ನು ಬದಲಾಯಿಸಬೇಕು ಎಂದರು.

ಗಾಂಧಿ ಭವನದ ನಿರ್ದೇಶಕ ಶಿವರಾಜ ಜಿ.ಪಿ. ಮಾತನಾಡಿ, ಎನ್ಎಸ್ಎಸ್ ಅಧಿಕಾರಿಗಳು ನಿಸ್ವಾರ್ಥ ಸೇವೆ ಮತ್ತು ತ್ಯಾಗ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ಎಂದರೆ ಪ್ರತಿಫಲ ನಿರೀಕ್ಷೆ ಇಲ್ಲದೆ ಇತರರ ಹಿತಕ್ಕಾಗಿ ಮಾಡುವ ಸೇವೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜನಾ ಅಧಿಕಾರಿ ಡಾ. ಎಂ.ಬಿ. ದಳಪತಿ ಮಾತನಾಡಿ, ಜಿಲ್ಲೆಯಲ್ಲಿ ಎನ್ಎಸ್ಎಸ್ ಘಟಕಗಳು ಅತ್ಯುತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಅದರಲ್ಲೂ ವಿಶೇಷವಾಗಿ ಜನರಕ್ಷಣೆ ಕುರಿತು ಒಳ್ಳೆಯ ಕಾರ್ಯಕ್ರಮಗಳನ್ನು ಡಿ.ಆರ್. ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದು ಬಹಳಷ್ಟು ಸಂತಸದ ಸಂಗತಿ ಎಂದರು.

ಪ್ರಕಾಶ ಮಾಚೇನಹಳ್ಳಿ, ಡಾ. ಅಪ್ಪಣ್ಣ ಹಂಜೆ, ಡಾ. ಕಸ್ತೂರಿದೇವಿ ದಳವಾಯಿ ಸೇರಿದಂತೆ ಇತರರು ಇದ್ದರು. ಪ್ರೊ. ವಿ.ಎಚ್. ಕೊಳ್ಳಿ ಸ್ವಾಗತಿಸಿದರು. ಬಿ.ಪಿ. ಜೈನರ್ ನಿರೂಪಿಸಿದರು.