ಸಾರಾಂಶ
ವೆಂಕಟೇಶ್ ಕಲಿಪಿ
ಬೆಂಗಳೂರು : ಅತ್ಯಾಚಾರದಿಂದ ಜನಿಸಿದ ಮಗುವನ್ನು ದತ್ತು ನೀಡಲು ಮಗುವಿನ ತಂದೆಗೆ (ಬಯಲಾಜಿಕಲ್ ಫಾದರ್) ಒಪ್ಪಿಗೆ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅತ್ಯಾಚಾರದಿಂದ ಜನಿಸಿದ ಮಗುವಿನ ದತ್ತು ನೀಡಲು ತಂದೆಯ ಒಪ್ಪಿಗೆ ಇಲ್ಲದ ಕಾರಣಕ್ಕೆ ದತ್ತುಪತ್ರದ ನೋಂದಣಿಗೆ ನಿರಾಕರಿಸಿ ಉಪ ನೋಂದಣಾಧಿಕಾರಿ ನೀಡಿದ್ದ ಹಿಂಬರಹ ರದ್ದುಪಡಿಸಿ, ಹೈಕೋರ್ಟ್ ಈ ಆದೇಶ ಮಾಡಿದೆ.
ಮಗುವಿನ ತಂದೆಯ ಒಪ್ಪಿಗೆ ಪಡೆಯುವಂತೆ ತಾಯಿ, ಪೋಷಕರಿಗೆ ಸೂಚಿಸದೆ ದತ್ತುಪತ್ರವನ್ನು ನೋಂದಣಿ ಮಾಡಬೇಕು ಎಂದು ಉಪ ನೋಂದಣಾಧಿಕಾರಿಗೆ ನಿರ್ದೇಶಿಸಿರುವ ಹೈಕೋರ್ಟ್, ನೋಂದಣಿಯ ನಂತರ ಮಗುವನ್ನು ದತ್ತು ಪಡೆದ ದಂಪತಿಯು ಜಿಲ್ಲಾ ದಂಡಾಧಿಕಾರಿಗೆ ವರದಿ ಸಲ್ಲಿಸಬೇಕು. ಅವರು ಪ್ರಕರಣದ ಕುರಿತ ವರದಿಯನ್ನು ಬಾಲನ್ಯಾಯ ಕಾಯ್ದೆಯ ಸೆಕ್ಷನ್ 66 ಹೇಳುವಂತೆ ಸೆಂಟ್ರಲ್ ಅಡಾಪ್ಶನ್ ರಿಸೋರ್ಸ್ ಅಥಾರಿಟಿಗೆ (ಸಿಎಆರ್‌ಎ) ಸಲ್ಲಿಸಬೇಕು ಎಂದು ಆದೇಶಿಸಿದೆ.
ಉಪ ನೋಂದಣಿಕಾಧಿಕಾರಿಯ ಹಿಂಬರಹವನ್ನು ರದ್ದುಪಡಿಸುವಂತೆ ಕೋರಿ, ಮಗುವಿನ ತಾಯಿಯಾದ ಸಂತ್ರಸ್ತೆ, ಸಂತ್ರಸ್ತೆಯ ತಾಯಿ ಹಾಗೂ ದತ್ತು ಪಡೆಯಲು ಬಯಸಿರುವ ದಂಪತಿ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರ:
ಬೆಂಗಳೂರಿನ ಅಪ್ರಾಪ್ತೆ (ಸಂತ್ರಸ್ತೆ) ಮೇಲೆ ವ್ಯಕ್ತಿಯೋರ್ವ 2023ರ ನ.11ರಿಂದ ಜೂ.6ರವರೆಗೆ ಅತ್ಯಾಚಾರ ಎಸಗಿದ್ದ. ಪ್ರಕರಣದ ಎಫ್‌ಐಆರ್ 2024ರ ಆಗಸ್ಟ್‌ನಲ್ಲಿ ದಾಖಲಾಗಿತ್ತು. ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣದಡಿ ಆರೋಪಿ ಬಂಧನಕ್ಕೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾನೆ. ಈ ಮಧ್ಯೆ 2024ರ ಸೆಪ್ಟೆಂಬರ್‌ನಲ್ಲಿ ಸಂತ್ರಸ್ತೆಗೆ ಹೆಣ್ಣು ಮಗುವಿಗೆ ಜನಿಸಿತ್ತು.
ಆದರೆ, ಸಂತ್ರಸ್ತೆಯಲ್ಲಿ ಕುಟುಂಬದಲ್ಲಿ ಮೂವರು ಮಹಿಳಾ ಸದಸ್ಯರಿದ್ದು, ಆದಾಯ ಗಳಿಕೆ ಮಾಡುವ ಪುರುಷರೊಬ್ಬರೂ ಇಲ್ಲ. ಇದರಿಂದ ಸಂತ್ರಸ್ತೆಯ ಕುಟುಂಬ ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮಗುವಿನ ಸಮಗ್ರ ಬೆಳವಣಿಗೆ ಮತ್ತು ಉತ್ತಮ ಆರೈಕೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ. ಇದರಿಂದ ಮಗುವನ್ನು ದತ್ತು ನೀಡಲು ಸಂತ್ರಸ್ತೆ, ಆಕೆಯ ತಾಯಿ ನಿರ್ಧರಿಸಿದ್ದರು. ಮಕ್ಕಳಿಲ್ಲದ ದಂಪತಿ ಆ ಮಗುವನ್ನು ದತ್ತು ಪಡೆಯಲು ಮುಂದೆ ಬಂದಿತ್ತು.
ಅದರಂತೆ ದತ್ತು ಪತ್ರದ ನೋಂದಣಿಗೆ ಕೋರಿ 2024ರ ನ.11ರಂದು ಸಲ್ಲಿಸಿದ್ದ ಅರ್ಜಿಯನ್ನು ಉಪ ನೋಂದಣಾಧಿಕಾರಿ ತಿರಸ್ಕರಿಸಿದ್ದರು. ಮಗುವನ್ನು ದತ್ತು ನೀಡಲು ತಂದೆ ಒಪ್ಪಿಗೆ ಪಡೆಯದ ಕಾರಣ ದತ್ತು ಪತ್ರ ನೋಂದಣಿಗೆ ಕೋರಿದ ಅರ್ಜಿ ಅಪೂರ್ಣವಾಗಿದೆ ಎಂದು ಉಪ ನೋಂದಣಾಧಿಕಾರಿ ಹಿಂಬರಹ ನೀಡಿದ್ದರು. ಅದನ್ನು ರದ್ದುಪಡಿಸುವಂತೆ ಹಾಗೂ ದತ್ತುಪತ್ರವನ್ನು ನೋಂದಣಿ ಮಾಡಲು ಉಪ ನೋಂದಣಾಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಮಗುವಿನ ತಾಯಿ ಮತ್ತು ದತ್ತು ಪಡೆಯಲು ಬಂದಿರುವ ದಂಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಅವರಿಗೆ ಬಾಲ ನ್ಯಾಯ ಕಾಯ್ದೆಯ ನಿಯಮಗಳು ಅನ್ವಯಿಸುತ್ತದೆ. ಬಾಲ ನ್ಯಾಯ ಕಾಯ್ದೆ-2015ರ ಪ್ರಕಾರ ಮಗುವಿನ ಪೋಷಕರು ದತ್ತು ನೀಡುವ ಸ್ವತಂತ್ರ ಹಕ್ಕು ಹೊಂದಿರುತ್ತಾರೆ. ದತ್ತು ನಿಬಂಧನೆಗಳು-2017ರ ನಿಬಂಧನೆ 7(7) ಪ್ರಕಾರ ಅತ್ಯಾಚಾರದಂತಹ ಕೃತ್ಯದಿಂದ ಜನಿಸಿದ ಮಗುವನ್ನು ದತ್ತು ನೀಡಲು ತಾಯಿ ಅಧಿಕಾರ/ಹಕ್ಕು ಹೊಂದಿರುತ್ತಾರೆ. ಅದರಲ್ಲೂ ತಾಯಿ ಅಪ್ರಾಪ್ತೆಯಾಗಿದ್ದರೆ ದತ್ತು ಪತ್ರಕ್ಕೆ ಪ್ರಾಪ್ತ ವಯಸ್ಸಿನ ಸಾಕ್ಷಿಯೊಬ್ಬರು ಸಹಿ ಹಾಕಬೇಕು ಎಂದು ವಿವರಿಸಿದೆ.
ಅಂತಿಮವಾಗಿ, ಈ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆಕೆಯ ತಾಯಿ ಮಗುವಿನ ದತ್ತುಪತ್ರಕ್ಕೆ ಜಂಟಿಯಾಗಿ ಸಹಿ ಹಾಕಿದ್ದಾರೆ. ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 63 ಹೇಳುವಂತೆ ಮಗುವಿನ ಪೋಷಕರು ಹಾಗೂ ದತ್ತು ಪಡೆಯುತ್ತಿರುವ ದಂಪತಿ ನಡುವೆ ಕಾನೂನುಬದ್ಧವಾದ ದತ್ತು ಒಪ್ಪಂದ ಏರ್ಪಟ್ಟಿದೆ. ಆದ್ದರಿಂದ ಪ್ರಕರಣದಲ್ಲಿ ದತ್ತುಪತ್ರಕ್ಕೆ ಅತ್ಯಾಚಾರ ಆರೋಪಿಯಾದ ಮಗುವಿನ ತಂದೆಯ ಒಪ್ಪಿಗೆ ಅಮುಖ್ಯ ಮತ್ತು ಅನಗತ್ಯ. ಅದರಂತೆ ಮಗುವಿನ ದತ್ತು ಪತ್ರವು ಬಾಲ ನ್ಯಾಯ ಕಾಯ್ದೆ ಹಾಗೂ ದತ್ತು ನಿಬಂಧನೆಗಳ ಅಡಿಯ ನಿಯಮಗಳನ್ನು ಪಾಲಿಸಿದಂತಾಗಿದ್ದು, ಪ್ರತ್ಯೇಕವಾಗಿ ಮಗುವಿನ ತಂದೆಯ ಒಪ್ಪಿಗೆ ಪಡೆಯುವ ಅಗತ್ಯ ಕಂಡುಬರುತ್ತಿಲ್ಲ ಎಂದು ಪೀಠ ಆದೇದಲ್ಲಿ ಸ್ಪಷ್ಟಪಡಿಸಿದೆ.