ಸಮಾಜದಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಮುಂದಾಗಿ

| Published : Feb 12 2024, 01:35 AM IST

ಸಾರಾಂಶ

ಹೊಸಕೋಟೆ: ಸಮಾಜದಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೊಸಕೋಟೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ಹೊಸಕೋಟೆ: ಸಮಾಜದಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೊಸಕೋಟೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀತ ಪದ್ಧತಿ ಸಮಾಜಕ್ಕೆ ಮಾರಕ. ಇದರ ನಿರ್ಮೂಲನೆಗಾಗಿ ಹಲ ವರ್ಷಗಳ ಹಿಂದೆಯೇ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೂ ಪರಸ್ಪರ ಸ್ಥಳೀಯರ ಸಹಕಾರವಿಲ್ಲದೆ ಶೇ.100ರಷ್ಟು ಜೀತ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಿಲ್ಲ. ಸ್ಥಳೀಯ ಮಟ್ಟದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಜೀತಪದ್ಧತಿ ನಿರ್ಮೂಲನೆಗೆ ಮುಂದಾಗಬೇಕು. ಸಾಧ್ಯವಾದರೆ ಕಾನೂನು ಸಲಹೆಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಜೀತ ಪದ್ಧತಿ ಹೇಯ ಕೃತ್ಯವಾಗಿದ್ದು ಅದನ್ನು ತಡೆಯಲು 1976ರಲ್ಲಿ ಸರ್ಕಾರ ಕಾಯ್ದೆ ರೂಪಿಸಿ ಲಕ್ಷಾಂತರ ಜನರಿಗೆ ಧೈರ್ಯ ತುಂಬಿತ್ತು. ಜೀತಮುಕ್ತರಿಗೆ ಪುನರ್ವಸತಿ ಸಾಲ ಮುಕ್ತ ಸೇರಿದಂತೆ ಹಲವು ಸವಲತ್ತುಗಳನ್ನು ಸರ್ಕಾರ ಕಲ್ಪಿಸಿದೆ. ಸರ್ಕಾರಿ ಆದೇಶಗಳನ್ನುನಿರ್ಲಕ್ಷಿಸಿದರೆ ಗ್ರಾಪಂ ಅನ್ನೇ ಅಮಾನತು ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.

ಹೊಸಕೋಟೆ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ ಜಿ.ಸನದಿ, ತಾಪಂ ಇಒ ಚಂದ್ರಶೇಖರ್, ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ನವೀನ್, ಜಂಟಿ ಕಾರ್ಯದರ್ಶಿ ಮುನಿರಾಜು, ಖಜಾಂಚಿ ಕೆಎಮ್ ರವಿಕುಮಾರ್ ಇತರರಿದ್ದರು.ಫೋಟೋ : 11 ಹೆಚ್‌ಎಸ್‌ಕೆ 1

ಹೊಸಕೋಟೆಯ ತಾಪಂ ಸಭಾಂಗಣದಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್‌ ಉದ್ಘಾಟಿಸಿದರು.