ಸಾರಾಂಶ
ಬೆಂಗಳೂರು : ಮೆಟ್ರೋ ಪ್ರಯಾಣಿಕ ದರ ಹೆಚ್ಚಳಕ್ಕೆ ಹೆಜ್ಜೆ ಇಟ್ಟಿರುವ ಬೆನ್ನಲ್ಲೆ ಇದೀಗ ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮೆಟ್ರೋ ರೈಲುಗಳ ಹೊರಭಾಗದಲ್ಲಿ ಜಾಹೀರಾತು ಪ್ರಸಾರ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.
ಮೆಟ್ರೋದ ಹಸಿರು ಹಾಗೂ ನೇರಳೆ ಮಾರ್ಗದ ರೈಲುಗಳ ಹೊರಭಾಗದಲ್ಲಿ ಜಾಹೀರಾತಿಗಾಗಿ ಬಿಎಂಆರ್‌ಸಿಎಲ್ ಪ್ರತ್ಯೇಕ ಟೆಂಡರ್ ಕರೆದಿದೆ. ಈವರೆಗೆ ನಿಲ್ದಾಣ ಹಾಗೂ ರೈಲುಗಳ ಒಳಭಾಗದಲ್ಲಿ ಡಿಜಿಟಲ್ ಹಾಗೂ ಸ್ಥಿರ ಫಲಕದ ಮಾದರಿಯಲ್ಲಿ ಜಾಹೀರಾತುಗಳು ಬಿತ್ತರ ಆಗುತ್ತಿದ್ದವು. ಇದೀಗ ರೈಲಿನ ಹೊರಭಾಗಕ್ಕೂ ಜಾಹೀರಾತು ಅಳವಡಿಸಿ ಆ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಈಗಾಗಲೇ ಮುಂಬೈ ಸೇರಿ ದೇಶದ ಇತರೆಡೆಯ ಮೆಟ್ರೋ ರೈಲುಗಳು ಜಾಹೀರಾತನ್ನು ಹೊತ್ತು ಸಂಚರಿಸುತ್ತವೆ. ನಮ್ಮ ಮೆಟ್ರೋ ಬಳಿ ಸದ್ಯಕ್ಕೆ 57 ರೈಲು ಸೆಟ್‌ಗಳಿದ್ದು, ಇವುಗಳಲ್ಲಿ ಇನ್ನುಮುಂದೆ ನಮ್ಮ ಮೆಟ್ರೋ ಲಾಂಛನ, ಹೆಸರಿನ ಜೊತೆಗೆ ವಿವಿಧ ಕಂಪನಿಗಳ ಜಾಹೀರಾತುಗಳು ಮೆಟ್ರೋ ರೈಲಿನ ಹೊರಭಾಗದಲ್ಲಿ ಕಾಣಿಸಿಕೊಳ್ಳಲಿವೆ.
ಕಳೆದ 2022ರಲ್ಲಿ ಸ್ವಾತಂತ್ರ್ಯದ 75 ವರ್ಷಾಚರಣೆ ಪ್ರಯುಕ್ತ ಒಂದು ರೈಲಿಗೆ ಜಾಹೀರಾತು ಅಳವಡಿಸಲಾಗಿತ್ತು. ಈ ಹಿಂದೆ ಪಿಲ್ಲರ್, ವಯಡಕ್ಟ್ ಜಾಹೀರಾತುಗಳಿಂದ ನಮ್ಮ ಮೆಟ್ರೋಗೆ ವಾರ್ಷಿಕ ಸರಾಸರಿ ₹10 ಕೋಟಿ ಆದಾಯ ಬರುತ್ತಿತ್ತು. ಆದರೆ, ಉಚ್ಚ ನ್ಯಾಯಾಲಯದ ಆದೇಶದಂತೆ ಬಿಬಿಎಂಪಿ ಹೊರಭಾಗದಲ್ಲಿ ಜಾಹೀರಾತು ನಿಷೇಧಿಸಿದ ಬಳಿಕ ಈ ಆದಾಯ ನಿಂತಿದೆ. ಆದರೆ ನಿಲ್ದಾಣದ ಒಳಗೆ ಹಾಗೂ ರೈಲಿನ ಒಳಗೆ ಜಾಹೀರಾತು ಆದಾಯ ಮೆಟ್ರೋಗೆ ಬರುತ್ತಿದೆ.
ಕಳೆದ 2022-23ರ ಅವಧಿಯಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆಯಿಂದ ₹422 ಕೋಟಿ ಹಾಗೂ ಜಾಹೀರಾತು, ಬಾಡಿಗೆ ಸೇರಿ ಇತರೆ ಮೂಲಗಳಿಂದ ₹171 ಕೋಟಿ ಆದಾಯ ಗಳಿಸಿದೆ. ಈ ಅವಧಿಯಲ್ಲಿ ಕಾರ್ಯಾಚರಣೆಗೆ ₹486 ಕೋಟಿ ವ್ಯಯಿಸಿತ್ತು.
ಪ್ರಯಾಣಿಕ ಆದಾಯ ಗಳಿಕೆ ಹೊರತಾಗಿ ಬಿಎಂಆರ್‌ಸಿಎಲ್ ಆದಾಯಕ್ಕಾಗಿ ಹಲವು ತಂತ್ರಗಳನ್ನು ಅನುಸರಿಸಿದೆ. ಬಯೋಕಾನ್, ಇನ್ಫೋಸಿಸ್ ಸಂಸ್ಥೆಗಳ ಹೆಸರನ್ನು 30 ವರ್ಷಗಳವರೆಗೆ ಮೆಟ್ರೋ ನಿಲ್ದಾಣಗಳಿಗೆ ಇಡುವುದಕ್ಕಾಗಿ ಬರೋಬ್ಬರಿ ₹100 ಕೋಟಿ ವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಲ್ಲದೆ, ಮೆಟ್ರೋ ರೈಲಿನಲ್ಲಿ ಸಿನಿಮಾ, ಕಿರುಚಿತ್ರ ಚಿತ್ರೀಕರಣಕ್ಕಾಗಿ ಅನುಮತಿ ನೀಡಿದೆ. ಅದಲ್ಲದೆ, ನಿಲ್ದಾಣಗಳಲ್ಲಿ ಎಟಿಎಂ, ಮಳಿಗೆಗಳು, ಇವಿ ಚಾರ್ಜಿಂಗ್ ಕೇಂದ್ರ, ನೆಟ್‌ವರ್ಕ್ ಟವರ್ ಬಾಡಿಗೆ ಮೂಲಕ ಆದಾಯ ಗಳಿಸುತ್ತಿದೆ.
ಬಿಎಂಆರ್‌ಸಿಎಲ್ 73 ಕಿ.ಮೀ. (ಶೀಘ್ರವೇ ಮಾದಾವರವರೆಗೆ 3.7 ಕಿ.ಮೀ. ರೈಲು ಸಂಚಾರ ಆರಂಭವಾಗಲಿದೆ.) ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, 2026ರ ವೇಳೆಗೆ ಹಳದಿ ಮಾರ್ಗ, ಗುಲಾಬಿ ಮಾರ್ಗ ಸೇರಿ 175 ಕಿ.ಮೀ., ಹಾಗೂ 2031ರ ವೇಳೆಗೆ ನೀಲಿ, ಕಿತ್ತಳೆ, ಕೆಂಪು ಮಾರ್ಗ ಸೇರಿ 317 ಕಿ.ಮೀ. ವಿಸ್ತರಣೆ ಆಗಲಿದೆ. ನಗರದುದ್ದಕ್ಕೂ ಮೆಟ್ರೋ ರೈಲುಗಳು ಸಂಚರಿಸುತ್ತ ಜಾಹೀರಾತು ಬಿತ್ತರ ಆಗುವುದರಿಂದ ಕಂಪನಿಗಳಿಗೆ ಹೆಚ್ಚು ಪ್ರಚಾರವೂ ಸಿಗಲಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದರು.
ನಗರದ ಹೊರನೋಟ ಮರೆ?: ವಿಸ್ಟಾಡೋಂ ಮಾದರಿಯಿಂದಾಗಿ ಮೆಟ್ರೋ ರೈಲಿನೊಳಗಿಂದ ಬೆಂಗಳೂರಿನ ವಿಹಂಗಮ ನೋಟ ಕಾಣಬಹುದು. ಆದರೆ, ಜಾಹೀರಾತು ಹೊರಭಾಗದಲ್ಲಿ ಅಳವಡಿಕೆ ಆದರೆ ಹೊರನೋಟ ಮರೆಯಾಗಬಹುದು ಎಂಬ ಆತಂಕವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ. ಆದರೆ, ಸಂಪೂರ್ಣ ಕಿಟಕಿ ಮುಚ್ಚುವುದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.