ಜಾಹೀರಾತು ನೀಡುವ ಕಾಂಗ್ರೆಸ್‌ಗೆ ಜನರ ಸಂಕಷ್ಟದ ಅರಿವಿಲ್ಲ: ವಿಜಯೇಂದ್ರ

| Published : Apr 29 2024, 01:35 AM IST / Updated: Apr 29 2024, 01:36 AM IST

ಜಾಹೀರಾತು ನೀಡುವ ಕಾಂಗ್ರೆಸ್‌ಗೆ ಜನರ ಸಂಕಷ್ಟದ ಅರಿವಿಲ್ಲ: ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ ಪಟ್ಟಣದ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆ ನಡೆಯಿತು. ಇನ್ನು, ಬಿಜೆಪಿ ಮಂಡಲ ವತಿಯಿಂದ ಅರಬಿಳಚಿ ಕ್ಯಾಂಪ್‌ನಿಂದ ಆನವೇರಿಯವರೆಗೂ ಬೈಕ್ ರ್‍ಯಾಲಿ, ಬಳಿಕ ಹೊಳೆಹೊನ್ನೂರಿನಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಾಗರ / ಹೊಳೆಹೊನ್ನೂರು

ರಾಜ್ಯ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಮಾಧ್ಯಮಗಳಿಗೆ ನಿತ್ಯವೂ ಜಾಹೀರಾತು ನೀಡುತ್ತಿದ್ದಾರೆಯೇ ಹೊರತು ವಾಸ್ತವದಲ್ಲಿ ಜನರ ಕಷ್ಟ ಪರಿಹರಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಪಟ್ಟಣದ ಗಾಂಧಿ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ೧೦ ತಿಂಗಳ ಅವಧಿಯಲ್ಲಿ ಮನೆಯಿಂದ ಹೊರಗೆ ಹೋಗುವ ಹೆಣ್ಣು ಮಕ್ಕಳು ಸುರಕ್ಷಿತವಾಗಿ ವಾಪಾಸು ಬರುತ್ತಾರಾ ಎಂದು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗ ಪರಿಶಿಷ್ಠ ಪಂಗಡದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ನಡೆದಿತ್ತು. ರಾಜ್ಯದ ಮುಖ್ಯಮಂತ್ರಿಗಳು ಅವರಿದ್ದ ಜಾಗಕ್ಕೆ ಹೋಗಿ ಧೈರ್ಯ ತುಂಬುವ ಕೆಲಸ ಮಾಡಲೇ ಇಲ್ಲ. ಧಾರವಾಡದ ನೇಹಾ ಹತ್ಯೆ ಪ್ರಕರಣದಲ್ಲೂ ಅವರು ಇದೊಂದು ವೈಯಕ್ತಿಕ ವಿಚಾರಕ್ಕೆ ನಡೆದಿದ್ದು ಎಂದು ಹೇಳುತ್ತಾರೆ. ಹತ್ಯೆಯನ್ನು ಯಾರು ಮಾಡಿದ್ದಾರೆ ಎನ್ನುವುದಕ್ಕಿಂತ ಅದಕ್ಕೆ ಧರ್ಮದ ಬಣ್ಣ ಬಳಿದು ಅಲ್ಪಸಂಖ್ಯಾತರಿಗೆ ನೋವಾಗುತ್ತದೆಂದು ಪ್ರಕರಣವನ್ನು ಮುಚ್ಚಿ ಹಾಕಲು ನೋಡುತ್ತಿದ್ದಾರೆ ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಇದನ್ನು ಪ್ರಶ್ನಿಸುವವರನ್ನು ಅಲ್ಪಸಂಖ್ಯಾತರ ವಿರೋಧಿಗಳೆಂದು ಬಿಂಬಿಸುತ್ತಾರೆ ಎಂದ ಅವರು, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೆ ರಾಜ್ಯದಲ್ಲಿ ಬರ ಪರಿಹಾರ ಬಿಡುಗಡೆ ಅಸಾಧ್ಯ ಎನ್ನುತ್ತಾರೆ. ರೈತರ ಹೊಸ ಪಂಪ್ಸೆಟ್ ಸಂಪರ್ಕಕ್ಕೆ ೨ ಲಕ್ಷ ರು. ಕಟ್ಟಬೇಕಿದೆ. ಸಿದ್ದರಾಮಯ್ಯನವರಿಗೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ. ಕೇವಲ ಅಹಿಂದದ ಹೆಸರಿನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅನುದಾನವನ್ನು ಬೇರೆ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಹಾಲಪ್ಪ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಜಾತಿ ಮಗಳಿಗೆ ಮತ ಕೊಡೋಣ ಎನ್ನುವ ವಾದ ಪ್ರಾರಂಭವಾಗಿದೆ. ಪ್ರಜ್ಞಾವಂತರಾದವರು ದೇಶದ ಹಿತಕ್ಕಾಗಿ ಮತ ನೀಡಬೇಕೇ ಹೊರತು ಅಭಿಮಾನ, ನಟನೆಗಾಗಿಯಲ್ಲ. ಅಥವಾ ಬಂಗಾರಪ್ಪನವರ ಮಗಳು ಎಂಬ ಕಾರಣಕ್ಕಲ್ಲ. ನಾವೆಲ್ಲ ಮತ ಹಾಕಬೇಕಿರುವುದು ಭಾರತದ ರಕ್ಷಣೆಗೆ, ಘನತೆ, ಸ್ವಾಭಿಮಾನ ಎತ್ತಿ ಹಿಡಿಯುವವರಿಗೆ ಎಂದು ಹೇಳಿದರು.

ಇದಕ್ಕೂ ಮೊದಲು ಪಟ್ಟಣದ ಪ್ರವಾಸಿ ಮಂದಿರದಿಂದ ಯುವ ಮೋರ್ಚಾ ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸುವ ಮೂಲಕ ಪಕ್ಷ ರಾಜ್ಯಾಧ್ಯಕ್ಷರಿಗೆ ಸ್ವಾಗತ ಕೋರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಗಣೇಶ್‌ ಪ್ರಸಾದ್, ಪ್ರಶಾಂತ್ ಶಿವಪ್ಪ, ಮಲ್ಲಿಕಾರ್ಜುನ ಹಕ್ರೆ, ಕೆರೆಕೈ ಪ್ರಸನ್ನ, ಅರುಣ್‌ ಕುಗ್ವೆ, ಪರಶುರಾಮ್, ಮಧುರಾ ಶಿವಾನಂದ, ಪ್ರೇಮಾಸಿಂಗ್, ಪ್ರಶಾಂತ್ ಕುಕ್ಕೆ, ಭರ್ಮಪ್ಪ, ರತ್ನಾಕರ ಹೊನಗೋಡು, ಮಾಲತೇಶ್ ಮೊದಲಾದವರು ಇದ್ದರು.

ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ವಿಜಯೇಂದ್ರ

ಹೊಳೆಹೊನ್ನೂರು: ರಾಜ್ಯದಲ್ಲಿ ಹಗಲಲ್ಲೇ ಹೆಣ್ಣು ಮಕ್ಕಳು ನಿರಾಂತಕವಾಗಿ ಓಡಾಡುವುದು ಕಷ್ಟವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಅವರು ಸಮೀಪದ ಆನವೇರಿಯಲ್ಲಿ ಶುಕ್ರವಾರ ಪಟ್ಟಣ ಮಂಡಲ ಯುವ ಮೋರ್ಚಾ ಹಾಗೂ ಬಿಜೆಪಿ ಮಂಡಲ ವತಿಯಿಂದ ಅರಬಿಳಚಿ ಕ್ಯಾಂಪ್ ನಿಂದ ಆನವೇರಿಯವರೆಗೂ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿ ಹಾಗೂ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಈತೀಚೇಗೆ 10 ಹಿಂದೂಗಳ ಕೊಲೆಗಳು ನಡೆದಿವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್‌ಗೆ ಗ್ಯಾರಂಟಿ ಗಳು ಕಣ್ಣು ಕಟ್ಟಿವೆ. ಕಾಂಗ್ರೆಸ್‌ನ ಉಚಿತ ಭಾಗ್ಯಗಳಿಂದಾಗಿ ಕಳೆದ 10 ತಿಂಗಳಲ್ಲಿ ರಾಜ್ಯ 1.25 ಕೋಟಿ ಕುಟುಂಬಗಳು ಬಡತನ ನಿವಾರಣೆಯಾಗಿದೆ ಎಂದರೆ 60 ವರ್ಷಗಳಿಂದ ಈ ಸಾಧನೆ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ವಿಧಾನ ಸಭೆಯ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರಗಾಲವನ್ನು ತಂದಿಕ್ಕಿದೆ. ಬರಗಾಲದಲ್ಲಿ ರೈತರ ಹಿತ ಕಾಪಾಡಬೇಕಾದ ಸರ್ಕಾರ ಗ್ಯಾರಂಟಿಗಳ ಬೆನ್ನು ಬಿದ್ದು ರಾಜ್ಯಕ್ಕೆ ಆರ್ಥಿಕ ಸಂಕಷ್ಠ ತಂದಿಕ್ಕುತ್ತಿದೆ. ಜಾಹೀರಾತುಗಳಿಗೆ ಸಾವಿರಾರು ಕೋಟಿ ರೂಪಾಯಿ ನೀಡುತ್ತಿರುವ ಕಾಂಗ್ರೆಸ್‌ಗೆ ಜನ ಹಿತ ಬೇಡವಾಗಿದೆ. ಹಿಂದೂಳಿದ ವರ್ಗಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರ ಓಲೈಕೆಗೆ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದ ಅಭಿವೃದ್ದಿ ಅಕ್ಷರ ಸಹ ಮರೀಚಿಕೆಯಾಗಿದೆ. ರಾಜ್ಯ ಸರ್ಕಾರ ದುರಾಡಳಿತಕ್ಕೆ ಸಿಲುಕಿ ಜನತೆ ನಲುಗುತ್ತಿದ್ದಾರೆ ಎಂದರು.ಬರ ಪರಿಹಾರ ನೀಡುವುದಕ್ಕೂ ಕೆಂದ್ರದ ಕಡೆ ಬೆರಳು ಮಾಡಿ ತೋರಿಸುವ ಸರ್ಕಾರ ಬರಗಾಳದಲ್ಲಿ ರೈತರ ಕೈ ಬಲ ಪಡಿಸುವ ಕೆಲಸ ಮಾಡದೆ ಕಾಲಹರಣ ಮಾಡುತ್ತಿದೆ. ಈ ಬಾರಿ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಬೆಂಗಳೂರು ಗ್ರಾಮಾಂ ತರ, ಮಂಡ್ಯ, ಮೈಸೂರಿನಲ್ಲಿ ನಮ್ಮ ಅಭ್ಯರ್ಥಿಗಳು ಅತಿ ಹೆಚ್ಚು ಬಹುಮತಗಳೊಂದಿಗೆ ಜಯಗಳಿಸುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಪರ ವಾತವರಣ ನಿರ್ಮಾಣವಾಗಿದೆ ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ 3 ಲಕ್ಷ ಅಧಿಕ ಮತ ಗಳಿಂದ ಗೆಲುವು ದಾಖಲಿಸುತ್ತಾರೆ ಎಂದರು.

ಮಾಜಿ ಶಾಸಕ ಅಶೋಕ್ ನಾಯ್ಕ, ಕಳೆದ ವಿಧಾನ ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಡೆದ ಒಟ್ಟು 1.50 ಲಕ್ಷ ಮತ ಗಳನ್ನು ಕ್ರೋಢೀಕರಿಸಿದರೆ. ಬಿ.ವೈ.ರಾಘವೇಂದ್ರ ಕೇಂದ್ರ ಮಂತ್ರಿಯಾಗುವುದು, ರಾಜ್ಯದಲ್ಲಿ ವಿಜಯೇಂದ್ರ ಮುಖ್ಯಮಂತ್ರಿ ಯಾಗುವುದನ್ನು ತಡೆಯಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ. ಪ್ರತಿಯೊಂದು ಗ್ರಾಮದಲ್ಲೂ ಅದ್ಭುತ ಸ್ಪಂದನೆ ಸಿಗುತ್ತಿದೆ. ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ಅದ್ಭುತವಾಗಿ ನಡೆದಿದೆ ಎಂದರು.ಶಾಸಕಿ ಶಾರದ ಪೂರ್ಯಾನಾಯ್ಕ್, ಮಾಜಿ ಶಾಸಕ ಕುಮಾರಸ್ವಾಮಿ, ಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತೀ ಶೆಟ್ಟಿ, ಬಿಜೆಪಿ ಯುವ ಅಧ್ಯಕ್ಷ ಕಿರಣ್‌ಗೌಡ, ವೈದ್ಯ ಡಾ|| ಧನಂಜಯ್ ಸರ್ಜಿ, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೀರಭದ್ರಪ್ಪ ಪೂಜಾರ್, ಸತೀಶ್ ಕೆ. ಶೆಟ್ಟಿ, ಕಾಂತರಾಜ್, ಎಸ್.ಶ್ರೀನಿವಾಸ್, ಡಿ.ಮಂಜುನಾಥ್, ಸುಬ್ರಮಣ್ಣಿ, ರಾಜೇಶ್ ಪಾಟೀಲ್, ಬಾಳೋಜಿ ಬಸವರಾಜ್, ರಾದಾಕೃಷ್ಣ, ಶಂಕರಮೂರ್ತಿ, ಮಹಾದೇವಪ್ಪ, ಕಿರಣ್ ಕುಮಾರ್ ಸೇರಿದಂತೆ ಇತರರಿದ್ದರು.