ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನಲ್ಲಿ ನಿರಂತರವಾಗಿ ಆನೆ ಮತ್ತು ಮಾನವರ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ದಿನನಿತ್ಯದ ಕೆಲಸ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆ ಪರಿಹಾರ ಹುಡುಕುವ ಸಲುವಾಗಿ ಮಡಿಕೇರಿಯ ಕೊಡಗು ವಿದ್ಯಾಲಯ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಪಿ. ವಿ ಲಕ್ಷ್ಯ ಮತ್ತು ಎಂ. ಭವಿಷ್ಯ, ಶಿಕ್ಷಕಿ ಪಿ. ಎಸ್. ಪೊನ್ನಮ್ಮ ಅವರ ಮಾರ್ಗದರ್ಶನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು ಆಯೋಜಿಸಿದ್ದ ಕೊಡಗು ಜಿಲ್ಲಾಮಟ್ಟದ 31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡು ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷದ ಕುರಿತಾಗಿ ಸಂಶೋಧನಾತ್ಮಕ ಪ್ರಬಂಧವನ್ನು ಮಂಡಿಸಿದ್ದಾರೆ. ಇವರ ಪ್ರಬಂಧವು ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದೆ.
ಕೊಡಗಿನಲ್ಲಿ ಆನೆ ಮತ್ತು ಮಾನವರ ನಡುವೆ ಸಂಘರ್ಷ ನಡೆಯುತ್ತಿರುವ ಜಾಗಗಳಿಗೆ ಭೇಟಿ ನೀಡಿ ಸಾರ್ವಜನಿಕರನ್ನು ಸಮೀಕ್ಷೆ ನಡೆಸಿ ಪರಿಸ್ಥಿತಿಯ ತೀವ್ರತೆಯನ್ನು ತಿಳಿದುಕೊಂಡರು.ವಿದ್ಯಾರ್ಥಿಗಳ ಯೋಜನೆಯು ಆನೆ ಮತ್ತು ಮಾನವರ ನಡುವಿನ ಸಂಘರ್ಷಗಳಿಂದುಂಟಾಗುವ ತೊಂದರೆಗಳನ್ನು ಕಡಿಮೆ ಗೊಳಿಸಲು ಮತ್ತು ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಹಿಡಿಯುವುದು ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ದುಬಾರೆಯ ಮಾವುತರಾದ ದೋಬಿ ಅವರನ್ನು ಸಂದರ್ಶಿಸಿ ಆನೆಗಳ ಜೀವನ ಶೈಲಿ, ಆಹಾರ ಕ್ರಮವನ್ನು ತಿಳಿದುಕೊಂಡ ವಿದ್ಯಾರ್ಥಿಗಳು ಮಡಿಕೇರಿ ಅರಣ್ಯ ವಲಯದ ಉಪಸಂರಕ್ಷಣಾಧಿಕಾರಿ ಭಾಸ್ಕರ್ ಎಂ. ಅವರನ್ನು ಸಂದರ್ಶಿಸಿ ಆನೆಗಳ ಸಂರಕ್ಷಣೆ ಮತ್ತು ಮಾನವ ಆನೆಗಳ ಸಂಘರ್ಷಣೆಯ ಕುರಿತಾದ ತೀವ್ರತೆಯನ್ನು ಕಡಿಮೆಗೊಳಿಸಲು ಅರಣ್ಯ ಇಲಾಖೆಯ ಯೋಜನೆಗಳ ಬಗ್ಗೆ ತಿಳಿದುಕೊಂಡರು. ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯದ ವನ್ಯಜೀವಿ ಸಸ್ಯಶಾಸ್ತ್ರದ ಪ್ರಾಧ್ಯಾಪಕ ನಾಣಯ್ಯ ಅವರನ್ನು ಸಂದರ್ಶಿಸಿ ವೃಕ್ಷ ಜಂತು ಜಾಲಗಳ ಕುರಿತಾಗಿ ಮಾಹಿತಿ ಪಡೆದರು. ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಆನೆಗಳ ಇರುವಿಕೆ ಮತ್ತು ಚಲನವಲನಗಳ ಮೇಲೆ ನಿಗಾ ಇಡುವ ವಿಧಾನವನ್ನು ನುರಿತ ತಜ್ಞರಾದ ಬೀಗಲ್ ಕಂಪನಿಯ ಸಿಇಒ ಹವ್ಯಾಸ್ ಕುದುಪಜೆ ಅವರನ್ನು ಸಂದರ್ಶಿಸಿ ಉಪಯುಕ್ತ ಮಾಹಿತಿಯನ್ನು ತಿಳಿದುಕೊಂಡು ಈ ಸಮಸ್ಯೆಗೆ ಕೆಲವೊಂದು ಸಮಾಧಾನಕರ ಪರಿಹಾರಗಳನ್ನು ಕಂಡುಹಿಡಿದು ಜನರ ನಡುವೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡರು.