ಕಾಯಕದ ಜತೆ ಕನ್ನಡಸೇವೆಯಲ್ಲಿ ತೊಡಗಲು ಸಲಹೆ

| Published : Feb 13 2024, 12:46 AM IST

ಸಾರಾಂಶ

ದೈನಂದಿನ ಕಾಯಕದಲ್ಲಿ ಕೆಲ ಸಮಯವನ್ನು ಬದಿಗಿಟ್ಟು ಕನ್ನಡಾಂಬೆ ಸೇವೆಯಲ್ಲಿ ತನು, ಮನ ಅರ್ಪಿಸಿಕೊಂಡರೆ ಮಾತ್ರ ನಾಡು, ನುಡಿ ಸಂಪತ್ಪರಿತವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಹೇಳಿದರು.

- ಚಿಕ್ಕಮಗಳೂರಿನಲ್ಲಿ ಸಿರಿಗನ್ನಡ ವೇದಿಕೆಯ ಸೇವಾ ದೀಕ್ಷೆ ಸಮಾರಂಭ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೈನಂದಿನ ಕಾಯಕದಲ್ಲಿ ಕೆಲ ಸಮಯವನ್ನು ಬದಿಗಿಟ್ಟು ಕನ್ನಡಾಂಬೆ ಸೇವೆಯಲ್ಲಿ ತನು, ಮನ ಅರ್ಪಿಸಿಕೊಂಡರೆ ಮಾತ್ರ ನಾಡು, ನುಡಿ ಸಂಪತ್ಪರಿತವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಹೇಳಿದರು.

ನಗರದ ಅಂಚೆ ನೌಕರರ ಭವನದಲ್ಲಿ ತಾಲೂಕು ಸಿರಿಗನ್ನಡ ವೇದಿಕೆಯಿಂದ ಏರ್ಪಡಿಸಿದ್ದ ಸೇವಾದೀಕ್ಷೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆಯ ಕಾಲಘಟ್ಟದಲ್ಲಿ ಭಾಷಾಭಿಮಾನದ ಕಂಪು ಮರೆಯಾಗು ತ್ತಿರುವುದು ಸಮಂಜಸವಲ್ಲ. ಆ ನಿಟ್ಟಿನಲ್ಲಿ ಭಾಷೆ ಕಂಪನ್ನು ಎಲ್ಲೆಡೆ ಪಸರಿಸುವ ಸಲುವಾಗಿ ಯುವ ಪೀಳಿಗೆಗೆ ಸಿರಿಗನ್ನಡ ವೇದಿಕೆಯಿಂದ ಮಹತ್ತರ ಜವಾಬ್ದಾರಿ ನೀಡಿ ಜಿಲ್ಲೆಯ ಉದ್ದಗಲಕ್ಕೂ ಸಾಹಿತ್ಯಾತ್ಮಕ ಚಟುವಟಿಕೆ ಮುಖಾಂತರ ಕನ್ನಡಾಭಿಮಾನ ಬೆಳೆಸಲು ಮುಂದಾಗುತ್ತಿದೆ ಎಂದರು. ನಾಡಿನ ಅಗ್ರಗಣ್ಯ ಸಾಹಿತಿ, ಕವಿಗಳು ಹಾಗೂ ದಾರ್ಶನಿಕರ ಕೃತಿ ಮತ್ತು ವಚನಗಳೇ ಭಾಷೆ ಬೆಳವಣಿಗೆ ಹೊಂದಲು ಮೂಲ ಧ್ಯೇಯವಾಗಿದೆ. ಕಥೆ, ಕಾದಂಬರಿ ಹಾಗೂ ಜ್ಞಾನಪೀಠ ಪಡೆದಂತಹ ಗ್ರಂಥಗಳಿಂದ ಯುವ ಜನಾಂಗಕ್ಕೆ ತಿಳಿ ಹೇಳುವ ಕೆಲಸ ವೇದಿಕೆಯಿಂದ ನಡೆಯುತ್ತಿದೆ. ಜೊತೆಗೆ ಸಾರ್ವಜನಿಕರಲ್ಲಿ ನಶಿಸಿರುವ ಕನ್ನಡದ ಸೊಗಡನ್ನು ಮರು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ಕಳೆದ ನವೆಂಬರ್ ತಿಂಗಳಾತ್ಯದವರೆಗೂ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿ ಸಿರಿಗನ್ನಡ ವೇದಿಕೆಯಿಂದ ನುಡಿ ನಿತ್ಯೋತ್ಸವ, ಮನೆಯಂಗಳದಿ ಕಾರ್ಯಕ್ರಮ ಹಾಗೂ ಜಾನಪದ ಸೊಗಡಿನ ವಿಶಿಷ್ಟತೆಯನ್ನು ಮನ ಮುಟ್ಟುವಂತೆ ತಿಳಿಸಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ನಿರಂತರವಾಗಿ ವೇದಿಕೆ ಕಾರ್ಯೋನ್ಮುಖವಾಗಿದೆ ಎಂದರು. ಸಿರಿಗನ್ನಡ ವೇದಿಕೆ ಗೌರವ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾಡಿನ ಹಿರಿಮೆ ಹಾಗೂ ಸಂಸ್ಕೃತಿ ಮಾಯವಾಗುತ್ತಿದೆ. ಮುಂದಿನ ಪೀಳಿಗೆಗೆ ಸಾಹಿತ್ಯಾತ್ಮಕ ಚಟುವಟಿಕೆ ಕೊಂಡೊಯ್ಯಲು ದಿಟ್ಟ ನಿರ್ಧಾರ ವನ್ನು ಕೈಗೊಂಡು ಪಾಲಕರು ಬಾಲ್ಯದಿಂದ ಮಕ್ಕಳಿಗೆ ಸಾಹಿತ್ಯಾಭಿರುಚಿ, ಹಾಡುಗಾರಿಕೆ, ಜಾನಪದ ಕುಣಿತದ ಒಲವು ಮೂಡಿಸುವುದು ಅತ್ಯಗತ್ಯ ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಮನುಷ್ಯನಿಗೆ ಆಸಕ್ತಿಯಿದ್ದರೆ ಮಾತ್ರ ಕನ್ನಡವನ್ನು ಗಗನದೆತ್ತರಕ್ಕೆ ಕೊಂಡೊಯ್ಯಲು ಸಾಧ್ಯ, ಹೀಗಾಗಿ ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಲ್ಲದೇ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಮೊಬೈಲ್‌ನ ಆನ್‌ಲೈನ್ ಆಟಗಳಿಂದ ದೂರವಿರಿಸಿ ಕಥೆ, ಕಾದಂಬರಿ ಓದುವ ಹವ್ಯಾಸವನ್ನು ಪಾಲಕರು ಬಿತ್ತಬೇಕು ಎಂದರು. ಇದೇ ವೇಳೆ ಸಿರಿಗನ್ನಡ ವೇದಿಕೆ ತಾಲೂಕು ಪದಾಧಿಕಾರಿಗಳಿಗೆ ವೇದಿಕೆ ಗೌರವ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಸೇವಾದೀಕ್ಷೆ ಬೋಧಿಸಿದರು. ಸಾಹಿತಿ ಡಿ.ಎ.ಮಂಜುನಾಥ್ ಮಾತನಾಡಿದರು. ಕಸಾಪ ನಿಕಟ ಪೂರ್ವ ಅಧ್ಯಕ್ಷ ಕುಂದೂರು ಅಶೋಕ್ ಪೂರ್ಣಚಂದ್ರ ತೇಜಸ್ವಿಯವರ ಬದುಕು ಮತ್ತು ಬರಹ ಕುರಿತ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಮದನ್, ಸಂಘಟನಾ ಕಾರ್ಯದರ್ಶಿ ಸುರೇಶ್ ನೆರ್ಲಗೆ, ಪ್ರಧಾನ ಸಂಚಾಲಕ ಹೊನ್ನೇಗೌಡ, ಸಂಚಾಲಕರಾದ ಜಯರಾಮೇಗೌಡ, ಕೆ.ಮಂಜಪ್ಪ, ಸಾಮಾಜಿಕ ಚಿಂತಕ ಹಿರೇಮಗಳೂರು ಪುಟ್ಟಸ್ವಾಮಿ ಶಿಕ್ಷಕ ಮಂಜುನಾಥ್, ಮುಖಂಡರಾದ ನಾಗರತ್ನ, ಕಲ್ಲೇಶ್, ಗೀತಾ ಉಪಸ್ಥಿತರಿದ್ದರು. 12 ಕೆಸಿಕೆಎಂ 5ಚಿಕ್ಕಮಗಳೂರಿನ ಅಂಚೆ ನೌಕರರ ಭವನದಲ್ಲಿ ತಾಲ್ಲೂಕು ಸಿರಿಗನ್ನಡ ವೇದಿಕೆ ಏರ್ಪಡಿಸಿದ್ದ ಸೇವಾದೀಕ್ಷೆ ಸಮಾರಂಭವನ್ನು ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಅವರು ಉದ್ಘಾಟಿಸಿದರು.