ಸಾರಾಂಶ
ಕೊಪ್ಪಳ: ಬೇಸಿಗೆ ಹಂಗಾಮಿನಲ್ಲಿ ಮಾವು ನಿರ್ವಹಣೆಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ರೈತರಿಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.ಜಿಲ್ಲೆಯಾದ್ಯಂತ ಹಣ್ಣಿನ ರಾಜ ಮಾವು ಸುಮಾರು 3000 ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 12ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ಬೆಳೆಯಲಾಗುತ್ತಿದ್ದು, ಈಗ ಶೇ.70ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹೂವು ಮತ್ತು ಹೀಚುಗಳು ಕಾಣಸಿಕೊಂಡಿವೆ. ಈ ಹಂತದಲ್ಲಿ ಕೀಟ ಮತ್ತು ರೋಗಗಳ ಬಾಧೆ ಅಲ್ಲದೇ ಹೂವು ಉದುರುವಿಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಇತ್ತೀಚೆಗೆ ಕೆಲ ಮಾವಿನ ತೋಟಗಳಿಗೆ ಭೇಟಿ ನೀಡಿ, ಬೇಸಿಗೆ ಹಂಗಾಮಿನಲ್ಲಿ ನಿರ್ವಹಣಾ ಕ್ರಮಗಳ ಕುರಿತಾಗಿ ಈ ಸಲಹೆಗಳನ್ನು ನೀಡಿದ್ದಾರೆ.ನಿರ್ವಹಣಾ ಕ್ರಮಗಳು:ಪ್ರಸ್ತುತ ತಾಪಮಾನ ಹೆಚ್ಚಾಗುತ್ತಿರುವುದರಿಂದ ಬೆಳಿಗ್ಗೆ ಅಥವಾ ಸಾಯಂಕಾಲ ಹನಿ ನೀರಾವರಿ ಇದ್ದಲ್ಲಿ 3 ರಿಂದ 4 ಗಂಟೆ ನೀರು ಹರಿಸಬೇಕು. ಹರಿ ನೀರಾವರಿ ಇದ್ದಲ್ಲಿ 8 ರಿಂದ 10 ದಿನಗಳಿಗೊಮ್ಮೆ ಮಣ್ಣಿನ ವಿಧವನ್ನು ಆದರಿಸಿ ನೀರು ಹರಿಸಬೇಕು. ಗಿಡದ ಸುತ್ತಲೂ ಪಾತಿ ಮಾಡಿ ಸಸ್ಯಜನ್ಯ ಸಾವಯವ ಉಳಿಕೆಗಳನ್ನು ಹೊದಿಕೆ ಹಾಕಬೇಕು. ಹೂವಾಡುವ ಹಂತದಲ್ಲಿ ಜಾನುವಾರುಗಳು ಮತ್ತು ಯಂತ್ರಗಳ ಓಡಾಟ ಕಡಿಮೆ ಮಾಡಬೇಕು. ಇದರಿಂದಾಗಿ ಹೂವು ಕಾಯಿ ಉದುರುವುದನ್ನು ತಡೆಗಟ್ಟಬಹುದು. ಇರುವೆಗಳು ಹಾಗೂ ಗೆದ್ದಲುಗಳ ನಿಯಂತ್ರಣ ಮಾಡಬೇಕು. ಗಿಡದ ಬಡ್ಡೆಗೆ ನೆಲದಿಂದ ಮೇಲಕ್ಕೆ ಮೂರು ಅಡಿಯಷ್ಟು ಸುತ್ತಲೂ ಸಿ.ಓ.ಸಿ. ಪುಡಿ ಅಥವಾ ಬೋರ್ಡೋ ಪುಡಿ ಅಥವಾ ಸುಣ್ಣವನ್ನು ಲೇಪನ ಮಾಡಬೇಕು. ಹೂವು, ಕಾಯಿ 40:60 ಅನುಪಾತದಲ್ಲಿದ್ದರೇ ರೋಗ, ಕೀಟಗಳ ಹತೋಟಿ ಮತ್ತು ಪೋಷಕಾಂಶಗಳ ನಿರ್ವಹಣೆಗಾಗಿ ರೈತರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಿಂಪರಣೆ ಮಾಡುವಾಗ ನೀರಿನ ಪ್ರಮಾಣ ಹೆಚ್ಚಾಗಿರಬೇಕು. ದೊಡ್ಡ ಗಿಡಗಳಿಗೆ 8 ರಿಂದ 10 ಲೀಟರ್ ದ್ರಾವಣ ಸಿಂಪಡಿಸಬೇಕು.