ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನೀರು ಪೋಲಾಗುವುದನ್ನು ತಡೆಯಲು ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ವಸತಿ ಸಮುಚ್ಚಯ, ಐಷಾರಾಮಿ ಹೋಟೆಲ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ನಲ್ಲಿಗಳಿಗೆ ಮಾ.31ರೊಳಗೆ ಕಡ್ಡಾಯವಾಗಿ ಏರೇಟರ್ (ವಾಟರ್ ಟ್ಯಾಪ್ ಮಾಸ್ಕ್) ಅಳವಡಿಸುವಂತೆ ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್ ಮನೋಹರ್ ಸೂಚಿಸಿದ್ದಾರೆ.ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಪ್ಲಂಬರ್ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಲು ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್, ಐಷಾರಾಮಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ನಲ್ಲಿಗಳಿಗೆ ಕಡ್ಡಾಯವಾಗಿ ಏರೇಟರ್ ಅಳವಡಿಸಬೇಕು. ಇದರಿಂದ ಶೇ.60ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯ ಎಂದರು.
ಜನರು ಮತ್ತು ಉದ್ದಿಮೆದಾರರು ಮಾ.21ರಿಂದ ಮಾ.31ರೊಳಗೆ ಸ್ವಯಂ ಪ್ರೇರಿತವಾಗಿ ಏರೇಟರ್ ಅಳವಡಿಸಿಕೊಳ್ಳಬೇಕು. ಈ ಅವಧಿಯಲ್ಲಿ ಏರೇಟರ್ ಅಳವಡಿಸಿಕೊಳ್ಳದಿದ್ದರೆ, ಜಲಮಂಡಳಿಯಿಂದಲೇ ಪರವಾಗಿ ಹೊಂದಿರುವ ಪ್ಲಂಬರ್‌ಗಳ ಮೂಲಕ ಏರೇಟರ್ ಅಳವಡಿಸಲಾಗುವುದು. ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡ ಮಾಲೀಕರು ಭರಿಸಬೇಕಾಗಲಿದೆ ಎಂದು ಹೇಳಿದರು.ಪ್ಲಂಬರ್‌ಗಳಿಗೆ ಪ್ರಶಂಸನಾ ಪತ್ರ:ಜಲಮಂಡಳಿಯಿಂದ ಪರವಾನಗಿ ಪಡೆದಿರುವ 1,500 ಪ್ಲಂಬರ್‌ಗಳಿದ್ದು, ಅವರು ತಾವು ಕೆಲಸ ಮಾಡುತ್ತಿರುವ ಹಾಗೂ ಮುಂದೆ ಮಾಡಲಿರುವ ಕಟ್ಟಡಗಳಲ್ಲಿನ ನಲ್ಲಿಗಳಿಗೆ ಏರೇಟರ್ ಅಳವಡಿಸುವುದರ ಬಗ್ಗೆ ಕಟ್ಟಡ ಮಾಲೀಕರಿಗೆ ಜಾಗೃತಿ ಮೂಡಿಸಬೇಕು. ನೀರು ಉಳಿತಾಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ಲಂಬರ್‌ಗಳು ಮುಂದಾಗಬೇಕು. ಹೆಚ್ಚಿನ ಸಂಖ್ಯೆಯ ಏರೇಟರ್ ಅಳವಡಿಸುವ ಪ್ಲಂಬರ್‌ಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಡಾ। ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.ಅಂತರ್ಜಲ ವೃದ್ಧಿಗೆ ಕೆರೆ ಭರ್ತಿಗೆ ಕ್ರಮ:
ನಗರದಲ್ಲಿ ಅಂತರ್ಜಲ ಕುಸಿತದಿಂದ ಉಂಟಾಗಿರುವ ನೀರಿನ ಕೊರತೆ ಸರಿಪಡಿಸಲು ಕೆರೆಗಳ ಭರ್ತಿ ಸೇರಿ ಇನ್ನಿತರ ಕ್ರಮ ಕೈಗೊಳ್ಳಲಾಗುವುದು ಎಂದು ಡಾ। ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.ವೃಷಭಾವತಿ ವ್ಯಾಲಿ ವ್ಯಾಪ್ತಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮಂಗಳವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅಂತರ್ಜಲ ಬಳಕೆ ಹೆಚ್ಚಾಗಿದೆ. ಆದರೆ, ಮಳೆ ನೀರು ಕೊಯ್ಲಿನಂತಹ ಕ್ರಮಗಳು ಸಮರ್ಪಕವಾಗಿ ಜಾರಿಯಾಗದ ಕಾರಣ ಅಂತರ್ಜಲ ವೃದ್ಧಿಯಾಗುತ್ತಿಲ್ಲ. ಈ ಕೊರತೆ ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಅದರ ಭಾಗವಾಗಿ ವೃಷಭಾವತಿ ವ್ಯಾಲಿ ವ್ಯಾಪ್ತಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಿದ ನೀರನ್ನು ನಾಯಂಡಹಳ್ಳಿ ಕೆರೆ ಸೇರಿದಂತೆ 14 ಕೆರೆಗಳಿಗೆ ಹರಿಸಲು ಚಾಲನೆ ನೀಡಲಾಗಿದೆ. ಅದರ ಜತೆಗೆ ಕೆಂಗೇರಿ, ದುಬಾಸಿ ಪಾಳ್ಯ, ಹೊಸಹಳ್ಳಿ ಕೆರೆ ಹಾಗೂ ಅಲಗೆವಡೇರಹಳ್ಳಿ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಚುರುಕು ಮುಟ್ಟಿಸಲಾಗುವುದು ಎಂದು ಹೇಳಿದರು.