ರಸ್ತೆಗಳಲ್ಲಿ ಗುಂಡಿ ಇರೋದ್ರಿಂದವೈಮಾನಿಕ ಸಮೀಕ್ಷೆ: ಬಿಜೆಪಿ- ‘ಪರಿಹಾರ ಘೋಷಿಸಿ ಸಿಎಂ ಸಮೀಕ್ಷೆ ಮಾಡ್ಬೇಕಿತ್ತು’

| Published : Oct 01 2025, 01:00 AM IST

ರಸ್ತೆಗಳಲ್ಲಿ ಗುಂಡಿ ಇರೋದ್ರಿಂದವೈಮಾನಿಕ ಸಮೀಕ್ಷೆ: ಬಿಜೆಪಿ- ‘ಪರಿಹಾರ ಘೋಷಿಸಿ ಸಿಎಂ ಸಮೀಕ್ಷೆ ಮಾಡ್ಬೇಕಿತ್ತು’
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಪ್ರವಾಹ ಸಂತಸ್ತರಿಗೆ ಪರಿಹಾರ ಘೋಷಣೆ ಮಾಡಿ ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಪರಿಹಾರವನ್ನೇ ತಿಳಿಸದೆ ಕೇವಲ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಪ್ರವಾಹ ಸಂತಸ್ತರಿಗೆ ಪರಿಹಾರ ಘೋಷಣೆ ಮಾಡಿ ನಂತರ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಪರಿಹಾರವನ್ನೇ ತಿಳಿಸದೆ ಕೇವಲ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಪ್ರವಾಹದ ಸ್ಥಿತಿ ವೀಕ್ಷಿಸಲು ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಎಲ್ಲಾ ರಸ್ತೆಗಳಲ್ಲಿ ಗುಂಡಿ ಇರುವುದರಿಂದ ಹಾಗೂ ಜನರು ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಭಯದಿಂದ ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಜೋಳ, ತೊಗರಿ ಸೇರಿದಂತೆ ಪ್ರತಿ ಬೆಳೆಗಳ ಹಾನಿ, ಮನೆ ಹಾನಿ, ಶಾಲೆಗಳ ಹಾನಿಗೆ ಎಷ್ಟು ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಬೇಕಿತ್ತು. ಆದರೆ, ಈವರೆಗೂ ಸರ್ಕಾರ ಘೋಷಿಸಿಲ್ಲ. ಒಂದು ಕಡೆ ಸರ್ಕಾರದ ಖಜಾನ ಖಾಲಿಯಾಗಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಲು ಸಿದ್ಧತೆ ನಡೆದಿದೆ ಎಂದು ಕಿಡಿಕಾರಿದರು.ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಚಿವರ ತಂಡ ರಚಿಸಬೇಕಿತ್ತು. ಅಧಿಕಾರಿಗಳ ಸಭೆ ಕರೆದು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಬೇಕಿತ್ತು. ಪುನರ್ವಸತಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ. ಈ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಕಾಂಗ್ರೆಸ್‌ನಲ್ಲಿ ಅಕ್ಟೋಬರ್ ಕ್ರಾಂತಿ:

ರಾಜ್ಯ ಕಾಂಗ್ರೆಸ್‌ನಲ್ಲಿ ಅಕ್ಟೋಬರ್‌ ಕಾಂತ್ರಿಯಾಗುವ ಲಕ್ಷಣಗಳು ಕಂಡು ಬಂದಿವೆ. ಕ್ರಾಂತಿಯ ನಂತರ ಮುಖ್ಯಮಂತ್ರಿ ಬದಲಾವಣೆಯಾಗುವ ಸಾಧ್ಯತೆಯಿದೆ. ಸರ್ಕಾರ ಅಸ್ಥಿರಗೊಂಡು ಬಿದ್ದು ಹೋದರೆ ಚುನಾವಣೆ ಮಾಡುವುದು ಸೂಕ್ತ. ನಾವು ಕಾಂಗ್ರೆಸ್‌ನಂತೆ ಸರ್ಕಾರ ಬೀಳಿಸಲು ಹೋಗುವುದಿಲ್ಲ. ಎರಡೂವರೆ ವರ್ಷ ಕಳೆದರೂ ಈ ಸರ್ಕಾರ ಟೇಕಾಫ್‌ ಆಗಿಲ್ಲ. ಕಾಂಗ್ರೆಸ್ ಶಾಸಕರು ಹಾಗೂ ಸಚಿವರೇ ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದು ಸೂಕ್ತ ಎಂದು ಆರ್‌.ಅಶೋಕ್‌ ಹೇಳಿದರು.ಸಾವಿನ ಗುಂಡಿಗಳು:

ಬೆಂಗಳೂರಿನ ರಸ್ತೆ ಗುಂಡಿಗಳು ಸಾವಿನ ಗುಂಡಿಗಳಾಗಿವೆ. ಬೆಂಗಳೂರಿನಲ್ಲಿ ಒಬ್ಬ ಯುವತಿ ರಸ್ತೆ ಗುಂಡಿಯಿಂದಾಗಿ ಜೀವ ಕಳೆದುಕೊಂಡಿದ್ದಾಳೆ. ಈ ಸಾವಿಗೆ ಕಾರಣ ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಬೈಕ್‌ನಲ್ಲಿ ಓಡಾಡಿದರೂ, ಸಿಎಂ ನಗರ ಪ್ರದಕ್ಷಿಣೆ ಮಾಡಿದರೂ ಪ್ರಯೋಜನವಾಗಿಲ್ಲ. ಬಿಜೆಪಿ ಅವಧಿಯಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಅದಾದ ನಂತರ ಗುಂಡಿಗಳು ಉಂಟಾಗಿವೆ. ಆದರೂ ಈ ಸರ್ಕಾರ ದುರಸ್ತಿ ಮಾಡಿಲ್ಲ ಎಂದು ದೂರಿದರು.